ಸುದ್ದಿಒನ್, ಚಿತ್ರದುರ್ಗ, ಜೂನ್. 21 : ಯೋಗ ಒಂದು ವರದಾನ ಇದ್ದಂತೆ. ಔಷಧಿಯಿಂದ ಗುಣಪಡಿಸಲಾಗದ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯನ್ನು ಯೋಗ ಹೊಂದಿದೆ ಎಂದು ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ನಾರದಮುನಿ ಹೇಳಿದರು.
ಭಾರತ ಸೇವಾದಳ, ಆಯುಷ್ ಇಲಾಖೆ, ಮಹಿಳಾ ಪತಾಂಜಲಿ ಸಮಿತಿ ವತಿಯಿಂದ ಇಂದು ನಗರದ ಭಾರತ ಸೇವಾದಳ ಭವನದಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಗಿಡಕ್ಕೆ ನೀರೆರೆಯುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಾನವನಿಗೆ ದೈನಂದಿಕ ಚಟುವಟಿಕೆಗಳ ಜೊತೆಗೆ ಮಾನಸಿಕವಾಗಿ ಆರೋಗ್ಯವಾಗಲು ಯೋಗ ಪ್ರಾಣಾಯಾಮ ಧ್ಯಾನ ಅಗತ್ಯವಾಗಿದೆ ಎಂದು ತಿಳಿಸಿದರು. ವಿಶ್ವಾದ್ಯಂತ ಯೋಗ ದಿನಾಚರಣೆಯನ್ನು ಆಚರಿಸುತ್ತಲ್ಲಿದ್ದು ಇನ್ನೂ ಜಾಗೃತೆಯನ್ನು ಮೂಡಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯದರ್ಶಿ ನರೇನಹಳ್ಳಿ ಅರುಣ್ ಕುಮಾರ್ ಅವರು ಮಾತನಾಡಿ ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಇರಬೇಕು ಎಂದು ತಿಳಿಸಿದರು. ಜಿಲ್ಲಾದ್ಯಂತ ಹಲವಾರು ಯೋಗ ಕೇಂದ್ರಗಳು ನಡೆಯುತ್ತಿದ್ದು ಅಂತಹ ಕೇಂದ್ರಗಳಿಗೆ ಪ್ರೋತ್ಸಾಹ ಸಿಗಬೇಕೆಂದು ತಿಳಿಸಿದರು. ಸಂಸ್ಥೆಗಳು ಆಯೋಜಿಸುವ ಯೋಗ ಶಿಬಿರಕ್ಕೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಿ ಅದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಯೋಗ ಶಿಕ್ಷಕಿಯಾದ ಶ್ರೀಮತಿ ಹೇಮಾವತಿ ರವರು ಯೋಗ ಮತ್ತು ಧ್ಯಾನ ಪ್ರಾಣಾಯಾಮ ಅನುಷ್ಠಾನ ಅಗತ್ಯತೆ ಕುರಿತು ಉಪನ್ಯಾಸ ನೀಡಿ ಯೋಗ ಶಿಕ್ಷಣವನ್ನು ನೀಡಿದರು.
ವಲಯ ಸಂಘಟಕರಾದ ಎಂ. ಅಣ್ಣಯ್ಯನವರು ಪ್ರಸ್ತಾವಿಕವಾಗಿ ಮಾತನಾಡಿ ಭಾರತ ಸೇವಾದಳದ ಯೋಗ ಮತ್ತು ನೈತಿಕ ಶಿಕ್ಷಣ ರಾಜ್ಯದ ಎಲ್ಲಾ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಿ ಅವರ ಮೂಲಕ ಮಕ್ಕಳಿಗೆ ಯೋಗ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶೋಭಾ ಅವರು ಸರ್ವರನ್ನು ಸ್ವಾಗತಿಸಿದರು. ಗೌತಮಿ ವಂದಿಸಿದರು. ರಾಜಪ್ಪ ನಿರೂಪಿಸಿದರು. ಯೋಗ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗ ಅಭ್ಯಾಸ ಮಾಡಿದರು.











