ಸುದ್ದಿಒನ್, ಚಿತ್ರದುರ್ಗ, ಜೂನ್. 18 : ‘ಮನೆಯಿಂದಲೇ ಕೆಲಸ’ ನೀಡುವುದಾಗಿ ನಂಬಿಸಿ ರಾಜ್ಯದ ವಿವಿಧ ಜಿಲ್ಲೆಗಳ ಸಾರ್ವಜನಿಕರಿಂದ ₹860 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ ಎಂಬ ಆರೋಪದಡಿ ‘ಎಸ್ಎಲ್ವಿ ಮಹಿಳಾ ಮಾರ್ಟ್ ಮತ್ತು ಮಾರ್ಕೆಟಿಂಗ್’ ಸಂಸ್ಥೆ ವಿರುದ್ಧ ಸಾವಿರಾರು ಹೂಡಿಕೆದಾರರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ದೂರುದಾರರ ಮಾಹಿತಿ ಪ್ರಕಾರ, ಬೆಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ದಾವಣಗೆರೆ ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳ ಸಾವಿರಾರು ಜನರು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದರು.
ಚಿತ್ರದುರ್ಗ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮಂದಿ ಸುಮಾರು ₹70 ಕೋಟಿ ಹಣ ಕಳೆದುಕೊಂಡಿರುವುದಾಗಿ ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಿ ಜನರನ್ನು ಸೆಳೆದಿದ್ದ ಸಂಸ್ಥೆ, ಮನೆಯಿಂದಲೇ ಊದುಬತ್ತಿ, ಸೋಪ್ ಹಾಗೂ ಇತರೆ ಗೃಹೋಪಯೋಗಿ ವಸ್ತುಗಳ ಪ್ಯಾಕಿಂಗ್ ಮತ್ತು ತಯಾರಿಕೆ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಕೆಲಸಕ್ಕೆ ಅರ್ಹರಾಗಲು ಭದ್ರತಾ ಠೇವಣಿ ರೂಪದಲ್ಲಿ ಹಣ ಹೂಡಿಕೆ ಮಾಡಬೇಕು ಎಂದು ತಿಳಿಸಿ 18 ಬಗೆಯ ಹೂಡಿಕೆ ಯೋಜನೆಗಳನ್ನು ಪರಿಚಯಿಸಿತ್ತು.

ಆರಂಭದಲ್ಲಿ ಹೂಡಿಕೆದಾರರಿಗೆ ವೇತನದ ಜೊತೆಗೆ ಹೂಡಿಕೆ ಮೊತ್ತದ ಕಂತುಗಳನ್ನು ಸಹ ನೀಡಲಾಗುತ್ತಿತ್ತು. ಇದರಿಂದ ವಿಶ್ವಾಸಗೊಂಡ ಅನೇಕರು ತಮ್ಮ ಹೂಡಿಕೆಯನ್ನು ಹೆಚ್ಚಿಸಿದ್ದು, ಕೆಲವರು ₹50 ಲಕ್ಷದವರೆಗೂ ಹಣ ಹೂಡಿಕೆ ಮಾಡಿದ್ದರು ಎನ್ನಲಾಗಿದೆ.ಆದರೆ ಕಳೆದ ಮೂರು ತಿಂಗಳಿನಿಂದ ವೇತನ ಹಾಗೂ ಹೂಡಿಕೆ ಹಣದ ಮರುಪಾವತಿ ಸ್ಥಗಿತಗೊಂಡಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಬೊಮ್ಮಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಮಾರ್ಟ್ ಕೇಂದ್ರಗಳೂ ಬಾಗಿಲು ಮುಚ್ಚಿರುವುದರಿಂದ ಹೂಡಿಕೆದಾರರಲ್ಲಿ ಆತಂಕ ಹೆಚ್ಚಾಗಿದೆ.
ವಂಚನೆಗೆ ಒಳಗಾದವರಲ್ಲಿ ಬಹುತೇಕರು ಮಹಿಳೆಯರಾಗಿದ್ದು, ಹಲವರು ತಮ್ಮ ಉಳಿತಾಯದ ಹಣವನ್ನೇ ಹೂಡಿಕೆ ಮಾಡಿದ್ದಾರೆ. ಕೆಲವರು ಮನೆಯವರಿಗೆ ತಿಳಿಸದೇ ಚಿನ್ನ ಅಡವಿಟ್ಟು ಹಣ ಹೂಡಿಕೆ ಮಾಡಿರುವುದಾಗಿ ತಿಳಿದುಬಂದಿದೆ.“ಹೆಚ್ಚು ಆದಾಯದ ಆಸೆಯಿಂದ ಸಾಲ ಪಡೆದು ಹೂಡಿಕೆ ಮಾಡಿದ್ದೆ. ಒಂದು ವರ್ಷದವರೆಗೆ ಎಲ್ಲವೂ ಸರಿಯಾಗಿತ್ತು. ಈಗ ಯಾರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಹೂಡಿಕೆ ಮಾಡಿದ ಹಣದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ” ಎಂದು ವಂಚನೆಗೊಳಗಾದ ಮಹಿಳೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













