ಚಿತ್ರದುರ್ಗ, ಜೂನ್. 18 : ನಗರಸಭೆ ವ್ಯಾಪ್ತಿಗೆ ಒಳಪಡುವ ಇತಿಹಾಸ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ಸಮೀಪ ಆಕ್ರಮವಾಗಿ ಬಹುಮಹಡಿ ಕಟ್ಟಡ ನಿರ್ಮಾಣ ವಿರೋಧಿಸಿ ಜೈ ಭೀಮ್ ಚಿತ್ರದುರ್ಗ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಿತು.
ನಗರದ ಆನೆ ಬಾಗಿಲಿನ ಬಳಿ ಕೋಟೆಯ ಸೌಂದರ್ಯಕ್ಕೆ ಧಕ್ಕೆ ತರುವಂತಹ ಬಹುಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆನೆ ಬಾಗಿಲು ಬಳಿ ಇರುವ ರೂಪವಾಣಿ ಟಾಕೀಸ್ ಜಾಗದಲ್ಲಿ ಆಕ್ರಮವಾಗಿ ಬಹುಮಹಡಿಗಳ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತಡೆಯಲು ಮನವಿಯನ್ನು ನೀಡಲಾಗಿತ್ತು. ನಗರಸಭೆಯು ಮಾಹಿತಿ ನೀಡಿದ ಪ್ರಕಾರ 3 ಅಂತಸ್ತಿನ ಕಟ್ಟಡಕ್ಕೆ ಅಥವಾ (ಜಿ+2, ಜಿ+3) ಕಟ್ಟಡ ನಿರ್ಮಾಣಕ್ಕೆ ಮಾತ್ರ ಅನುಮತಿ ಇದೆ ಎಂದು ದಾಖಲೆ ಪ್ರಕಾರ ತಿಳಿಸಿರುತ್ತಾರೆ ಮತ್ತು ಪುರತತ್ವ ಇಲಾಖೆಯಿಂದ ಕೋಟೆಯ ಸರಹದ್ದಿನಲ್ಲಿ ಕಟ್ಟಡ ನಿರ್ಮಾಣಗಳನ್ನು ಮಾಡಲು ಯಾವುದೇ ರೀತಿಯ ಅನುಮತಿ ಇರುವುದಿಲ್ಲ. ಆದರೆ ಈ ಜಾಗದಲ್ಲಿ 5 ರಿಂದ 6 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ಎಲ್ಲಾ ದಾಖಲೆಗಳು ಮತ್ತು ಮಾಹಿತಿಯೊಂದಿಗೆ ದಿನಾಂಕ:17-03-2025 ರಂದು ಆ ಜಾಗದಲ್ಲಿ ಕಟ್ಟಡ ಕಾಮಗಾರಿಯ ಫೋಟೋವನ್ನು ಸಾಕ್ಷಿ ಸಮೇತ ದೂರು ಅರ್ಜಿಯನ್ನು ನೀಡಿರುತ್ತೇವೆ.
ಆದರೆ ನಗರಸಭೆಯು ಯಾವುದೇ ರೀತಿಯ ಹಿಂಬರಹವಾಗಲೀ ಅಥವಾ ನಮ್ಮ ದೂರಿಗೆ ಪ್ರತಿಕ್ರಿಯಾಗಲೀ ನೀಡಿರುವುದಿಲ್ಲ ಹಾಗೂ ಯಾವುದೇ ಕ್ರಮ ಸಹ ಕೈಗೊಂಡಿರುವುದಿಲ್ಲ. ನಂತರ ದಿನಾಂಕ:13-08-2025 ರಂದು ಎರಡನೇ ಬಾರಿ ಮರು ದೂರು ನೀಡಿದ ಮೇಲೆ ನಗರಸಭೆಯ ಅಧಿಕಾರಿಗಳು ಕಟ್ಟಡ ಕಾಮಗಾರಿಯ ವಿರುದ್ಧ ನೋಟಿಸ್ ನೀಡುವುದಾಗಿ ತಿಳಿಸಿರುತ್ತಾರೆ ಹಾಗೂ ದಿನಾಂಕ:23-10-2025 ರಂದು 3ನೇ ಅರ್ಜಿಯನ್ನು ನೀಡಿದ್ದರೂ ಸಹ ಇದುವರೆವಿಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಮತ್ತು ಈ ಸ್ಥಳದಲ್ಲಿ ಇನ್ನು ಅನೇಕ ಕಟ್ಟಡಗಳ ಕಾಮಗಾರಿ ಮಾಡುತ್ತಿದ್ದಾರೆ. ಹೀಗೆ ಚಿತ್ರದುರ್ಗ ನಗರಸಭೆ ವ್ಯಾಪ್ತಿಗೆ ಒಳಪಡುವ ಕೋಟೆಯ ಸರಹದ್ದಿನಲ್ಲಿ 5 ಅಂತಸ್ಥಿನ ಕಟ್ಟಡಗಳು ನಿರ್ಮಾಣವಾಗುತ್ತಿದ್ದು, ನೀಲಕಂಠೇಶ್ವರ ಬಡಾವಣೆ ಕೋಟೆ ಆಂಜನೇಯ ದೇವಸ್ಥಾನದ ಹಿಂಭಾಗ ಹಾಗೂ ಚಿಕ್ಕಪೇಟೆ ಹೀಗೆ ಅನೇಕ ಕಡೆಗಳಲ್ಲಿ ಬಹುಮಹಡಿಗಳ ಕಟ್ಟಡ ನಿರ್ಮಾಣವಾಗುತ್ತಿದ್ದು ಯಾವುದೇ ಅನುಮತಿ ಪಡೆಯದೆ ನಿರ್ಮಾಣ ಮಾಡುತ್ತಿದ್ದಾರೆ.
ಇಂಥವರ ವಿರುದ್ಧ ನಗರಸಭೆಯ ಅಧಿಕಾರಿಗಳು ಯಾವುದೇ ತರಹ ಕ್ರಮ ಕೈಗೊಂಡಿರುವುದಿಲ್ಲ. ಈ ಕಟ್ಟಡದ ಆಕ್ರಮಗಳಲ್ಲಿ ನಗರಸಭೆಯ ಅಧಿಕಾರಿಗಳು ಶಾಮಿಲಾಗಿರುವುದು ಕಂಡು ಬರುತ್ತಿದೆ. ಕೂಡಲೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಇಂತಹ ಕಟ್ಟಡಗಳನ್ನು ತೆರವುಗೊಳಿಸಿ ಕೋಟೆಯ ಸೌಂದರ್ಯವನ್ನು ಉಳಿಸಬೇಕು ಹಾಗೂ ಇಂತಹ ಕಟ್ಟಡಗಳಿಗೆ ಅನುಮತಿ ನೀಡದಂತೆ ಆದೇಶ ಹೊರಡಿಸಬೇಕೆಂದು ಜೈ ಭೀಮ್ ಚಿತ್ರದುರ್ಗ ಸಾರ್ವಜನಿಕ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಯರ್ರಿಸ್ವಾಮಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಚಲವಾದಿ ತಿಪ್ಪೇಸ್ವಾಮಿ. ಮುಖಂಡರಾದ ಪಿ. ರುದ್ರೇಶ್. ಹಾಗೂ ಪ್ರಮುಖರಾದ ಎಸ್ ಕೆ ಗುರುರಾಜ್, ಪ್ರದೀಪ್, ಕಿಶೋರ್, ಶ್ರೀನಿವಾಸ್, ಪ್ರಸನ್ನ ಕುಮಾರ್, ಇನ್ನಿತರರು ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












