ಸುದ್ದಿಒನ್, ಚಿತ್ರದುರ್ಗ, ಜೂನ್. 17 : ನಗರದ ಸ್ಟೇಡಿಯಂ ಬಳಿ ಇರುವ ಟೀಚರ್ಸ್ ಕಾಲೋನಿಯ ರಸ್ತೆಯು ಕಳೆದ ಹತ್ತು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಗುಂಡಿ ಬಿದ್ದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿದೆ. ಸಮಸ್ಯೆ ಅರಿವಿದ್ದರೂ ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ವರ್ತಿಸುತ್ತಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಎಚ್.ಕೆ.ಎಸ್. ಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ನಗರದ ಟೀಚರ್ಸ್ ಕಾಲೋನಿಯ ಗುಂಡಿ ಬಿದ್ದ ರಸ್ತೆಯ ಮಧ್ಯೆ ನಾಗರಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಡಾ. ಸ್ವಾಮಿ ಅವರು, ಸರ್ಕಾರಿ ವಿಜ್ಞಾನ ಕಾಲೇಜಿನಿಂದ ಹೋಗುವ ಈ ಮುಖ್ಯ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ಶಾಲಾ ಬಸ್ಸುಗಳು ಹಾಗೂ ದ್ವಿಚಕ್ರ ವಾಹನಗಳು ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ ಎಂದರು. ಈ ರಸ್ತೆಯ ಪಕ್ಕದಲ್ಲೇ ಸ್ಮಶಾನವಿರುವುದರಿಂದ, ಅಪಘಾತಗಳಾದರೆ ನೇರವಾಗಿ ಅಲ್ಲಿಗೇ ತೆಗೆದುಕೊಂಡು ಹೋಗಲು ಅನುಕೂಲವಾಗಲಿ ಎಂದು ಅಧಿಕಾರಿಗಳು ರಸ್ತೆ ರಿಪೇರಿ ಮಾಡದೆ ಹಾಗೇ ಬಿಟ್ಟಿದ್ದಾರೆಯೇ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದರು. ಅಲ್ಲದೆ, ಗುಂಡಿ ಬಿದ್ದಿರುವ ರಸ್ತೆಯನ್ನು ಮುಚ್ಚಿ ಎಂದರೆ ಅಧಿಕಾರಿಗಳು ಮಣ್ಣು ತಂದು ಸುರಿಯುತ್ತಾರೆ, ಇದರಿಂದ ಧೂಳು ಎದ್ದು ಇನ್ನಷ್ಟು ಅಪಘಾತಗಳಾಗುತ್ತವೆ, ಆದ್ದರಿಂದ ತಕ್ಷಣವೇ ಮಣ್ಣಿನ ಬದಲಿಗೆ ಡಾಂಬರ್ ಮತ್ತು ಜಲ್ಲಿ ಬಳಸಿ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ರಸ್ತೆಯ ಪಕ್ಕದಲ್ಲಿ ನ್ಯಾಯಾಧೀಶರುಗಳ ವಸತಿಗೃಹವಿದ್ದು, ನ್ಯಾಯಾಧೀಶರುಗಳು ಸಹ ಪ್ರತಿನಿತ್ಯ ಇದೇ ರಸ್ತೆಯ ಗುಂಡಿಗಳನ್ನು ದಾಟಿಕೊಂಡೇ ತಮ್ಮ ಕಚೇರಿಗಳಿಗೆ ಹೋಗುತ್ತಾರೆ. ಅವರ ನೆಪದಲ್ಲಾದರೂ ಒಂದು ಒಳ್ಳೆಯ ರಸ್ತೆ ನಿರ್ಮಾಣವಾಗಬಹುದು ಎಂದು ಕಾದಿದ್ದ ನಾಗರಿಕರಿಗೆ ನಿರಾಸೆಯಾಗಿದೆ. ಕಾನೂನು ಸೇವಾ ಪ್ರಾಧಿಕಾರಕ್ಕೂ ಈ ಬಗ್ಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರತಿಫಲ ದೊರೆತಿಲ್ಲ. ಯಾರ ಸಹಾಯವೂ ಸಿಗದೆ, ಈಗ ನಾಗರಿಕರು ತಮ್ಮ ಹಕ್ಕಿಗಾಗಿ ತಾವೇ ಬೀದಿಗಿಳಿಯುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇನ್ನು ಇಲ್ಲಿರುವ ಶಿಕ್ಷಕರು ಪ್ರತಿ ವರ್ಷ ಪ್ರಾಮಾಣಿಕವಾಗಿ ತೆರಿಗೆ ಹಾಗೂ ಕಂದಾಯ ಕಟ್ಟುತ್ತಿದ್ದಾರೆ. ಬೇರೆ ಜಿಲ್ಲೆಯವರು ಈ ರಸ್ತೆಯ ಪರಿಸ್ಥಿತಿಯನ್ನು ನೋಡಿದರೆ ಇವರಿಗಿಂತ ಗುಮಾಸ್ತರ ಕಾಲೋನಿಯೇ ಎಷ್ಟೋ ವಾಸಿ ಎಂದು ಆಡಿಕೊಳ್ಳುತ್ತಿದ್ದಾರೆ. ತಮಗೆ ಅಕ್ಷರ ಕಲಿಸಿದ ಶಿಕ್ಷಕರಿಗೆ ಗೌರವ ನೀಡುವ ಸಲುವಾಗಿಯಾದರೂ ಅಧಿಕಾರಿಗಳು ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ನಾಗರಿಕರು ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುವವರೆಗೆ ಜಿಲ್ಲಾಡಳಿತ ಕಾಯಬಾರದು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ಭೀಮ ಘರ್ಜನೆ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷರಾದ ಅವಿನಾಶ್ ಕೆ., ಸಾಮ್ರಾಟ್, ಎಲ್ಲಪ್ಪ, ಹರೀಶ್, ಹಾಗೂ ಎಂ.ಎಸ್. ಟೀ ಶಾಪ್ನ ಗುರು ಮತ್ತು ಶಿವು ಸೇರಿದಂತೆ ಹಲವಾರು ಸ್ಥಳೀಯ ನಾಗರಿಕರು ಭಾಗವಹಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










