ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಎಂಬ ಮಹಮ್ಮಾರಿ ಜನರ ನೆಮ್ಮದಿಯನ್ನೇ ಕೆಡಿಸುತ್ತಿದೆ. ಅನುವಂಶಿಕ ಕಾರಣಗಳು, ಬದಲಾದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಗಳಿಂದಾಗಿ ಈ ಕಾಯಿಲೆ ತಗುಲುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ, ನಮಗೆ ಅರಿವಿಲ್ಲದಂತೆಯೇ ನಮ್ಮ ಮನೆಯಲ್ಲಿ ದಿನನಿತ್ಯ ಬಳಸುವ ಕೆಲವು ಸಾಮಾನ್ಯ ವಸ್ತುಗಳೇ ಈ ಮಾರಕ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ನಾವು ಜಾಗರೂಕರಾಗಿರಬೇಕಾದ ಆ 5 ಪ್ರಮುಖ ವಸ್ತುಗಳ ವಿವರ ಇಲ್ಲಿದೆ:
1. ಅಗರಬತ್ತಿಗಳು
ದೇವರಿಗೆ ಪೂಜೆ ಮಾಡುವಾಗ ಮತ್ತು ಮನೆಯಲ್ಲಿ ಸುಗಂಧ ಹರಡಲು ನಾವು ಅಗರಬತ್ತಿಗಳನ್ನು ಹಚ್ಚುವುದು ರೂಢಿ. ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಲು ವಿಭಿನ್ನ ಪರಿಮಳಗಳ ನೂರಾರು ಬ್ರ್ಯಾಂಡ್ಗಳು ಲಭ್ಯವಿವೆ. ಆದರೆ, ಈ ಸುಗಂಧಿತ ಅಗರಬತ್ತಿಗಳನ್ನು ತಯಾರಿಸಲು ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಬರುವ ಹೊಗೆಯು ನಮಗೆ ಆಹ್ಲಾದಕರ ಅನುಭವ ನೀಡಿದರೂ, ದೀರ್ಘಾವಧಿಯಲ್ಲಿ ಕ್ಯಾನ್ಸರ್ಗೆ ದಾರಿ ಮಾಡಿಕೊಡುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಇವುಗಳಲ್ಲಿರುವ ‘ಬೆಂಜೀನ್’ ಮತ್ತು ‘ಫಾರ್ಮಾಲ್ಡಿಹೈಡ್’ ನಂತಹ ರಾಸಾಯನಿಕಗಳು ಶ್ವಾಸಕೋಶದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತವೆ.
ಜಾಗ್ರತೆ ಕ್ರಮ: ಅಗರಬತ್ತಿಗಳನ್ನು ಹಚ್ಚುವಾಗ ದೇವರ ಕೋಣೆ ಅಥವಾ ಮನೆಯ ಕಿಟಕಿ-ಬಾಗಿಲುಗಳನ್ನು ಮುಚ್ಚಬೇಡಿ. ಗಾಳಿಯ ಸಂಚಾರ ಸರಾಗವಾಗಿದ್ದರೆ, ಹೊಗೆಯ ಪ್ರಭಾವ ನೇರವಾಗಿ ಶ್ವಾಸಕೋಶದ ಮೇಲೆ ಬೀಳುವುದಿಲ್ಲ.
2. ಸೊಳ್ಳೆ ಬತ್ತಿಗಳು
ಮಳೆಗಾಲ ಮತ್ತು ಚಳಿಗಾಲದಲ್ಲಿ ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಬತ್ತಿಗಳನ್ನು ಹಚ್ಚುವುದು ಸಾಮಾನ್ಯ. ವಿಶೇಷವಾಗಿ ಸಣ್ಣ ಮಕ್ಕಳಿರುವ ಮನೆಗಳಲ್ಲಿ ಇವುಗಳ ಬಳಕೆ ಹೆಚ್ಚು. ಆದರೆ, ಈ ಸೊಳ್ಳೆ ಬತ್ತಿಗಳಲ್ಲಿ ‘ಅಲೆಥ್ರಿನ್’ ಎಂಬ ಅತ್ಯಂತ ಅಪಾಯಕಾರಿ ಸಂಯುಕ್ತಗಳಿರುತ್ತವೆ. ಇವುಗಳಿಂದ ಹೊರಬರುವ ಹೊಗೆಯನ್ನು ನಿರಂತರವಾಗಿ ಉಸಿರಾಡುವುದರಿಂದ ಶ್ವಾಸಕೋಶದಲ್ಲಿ ಉರಿಯೂತ ಉಂಟಾಗುತ್ತದೆ. ಇದು ಮುಂದೆ ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗಬಹುದು.
ಜಾಗ್ರತೆ ಕ್ರಮ: ಸೊಳ್ಳೆ ಬತ್ತಿಗಳನ್ನು ಬಳಸಲೇಬೇಕಾಗಿ ಬಂದರೆ, ಅದನ್ನು ಹಚ್ಚಿದ ತಕ್ಷಣ ಆ ಕೋಣೆಯಲ್ಲಿ ಇರಬೇಡಿ. ಸಾಧ್ಯವಾದರೆ ಸೊಳ್ಳೆ ಪರದೆಗಳು ಅಥವಾ ಸುರಕ್ಷಿತ ಲಿಕ್ವಿಡ್ ರಿಫಿಲ್ಗಳನ್ನು ಬಳಸುವುದು ಉತ್ತಮ.
3. ಏರ್ ಫ್ರೆಶ್ನರ್ಗಳು
ಮನೆಯಲ್ಲಿ ಬರುವ ದುರ್ವಾಸನೆ ಅಥವಾ ತೇವಾಂಶದ ವಾಸನೆಯನ್ನು ಹೋಗಲಾಡಿಸಲು ಇಂದು ಅನೇಕರು ಆಟೋಮ್ಯಾಟಿಕ್ ಏರ್ ಫ್ರೆಶ್ನರ್ಗಳನ್ನು ಬಳಸುತ್ತಿದ್ದಾರೆ. ಆದರೆ, ಇವುಗಳಲ್ಲಿ ಕಂಡುಬರುವ ಬಾಷ್ಪಶೀಲ ಸಾವಯವ ಸಂಯುಕ್ತಗಳು (VOCs) ಮತ್ತು ಫಾರ್ಮಾಲ್ಡಿಹೈಡ್ ಅಂಶಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಕೋಣೆಯ ಬಾಗಿಲುಗಳನ್ನು ಮುಚ್ಚಿ ನಿರಂತರವಾಗಿ ಇವುಗಳನ್ನು ಸ್ಪ್ರೇ ಮಾಡುವುದು ಶ್ವಾಸಕೋಶದ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ.
ಜಾಗ್ರತೆ ಕ್ರಮ: ಕೋಣೆಯ ಕಿಟಕಿಗಳನ್ನು ಮುಚ್ಚಿ ಆಟೋಮ್ಯಾಟಿಕ್ ಏರ್ ಫ್ರೆಶ್ನರ್ಗಳನ್ನು ಬಳಸಬೇಡಿ. ಇವುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಅಪರೂಪಕ್ಕೊಮ್ಮೆ ಮಾತ್ರ ಬಳಸಿ.
4. ಟಾಲ್ಕಮ್ ಪೌಡರ್
ಬೆವರಿನ ವಾಸನೆ ತಡೆಯಲು ಮತ್ತು ತಾಜಾತನಕ್ಕಾಗಿ ಪ್ರತಿಯೊಬ್ಬರ ಮನೆಯಲ್ಲೂ ಟಾಲ್ಕಮ್ ಪೌಡರ್ ಇದ್ದೇ ಇರುತ್ತದೆ. ಅದರಲ್ಲೂ ಸಣ್ಣ ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಪೌಡರ್ ಹಚ್ಚುವುದು ತಾಯಂದಿರ ಹವ್ಯಾಸ. ಆದರೆ ಈ ಪೌಡರ್ಗಳನ್ನು ಅತಿಯಾಗಿ ಬಳಸುವುದರಿಂದ ಕ್ಯಾನ್ಸರ್ ಅಪಾಯ ತಪ್ಪಿದ್ದಲ್ಲ. ಟಾಲ್ಕಮ್ ಪೌಡರ್ನಲ್ಲಿ ‘ಆಸ್ಬೆಸ್ಟಾಸ್’ ಎಂಬ ವಿಷಕಾರಿ ಖನಿಜದ ಅಂಶಗಳಿರುತ್ತವೆ, ಇದು ಕ್ಯಾನ್ಸರ್ಗೆ ನೇರ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಜಾಗ್ರತೆ ಕ್ರಮ: ನಿರಂತರವಾಗಿ ಮತ್ತು ಅತಿಯಾಗಿ ಟಾಲ್ಕಮ್ ಪೌಡರ್ ಬಳಸುವುದನ್ನು ನಿಲ್ಲಿಸಿ. ವಿಶೇಷವಾಗಿ ಸಣ್ಣ ಮಕ್ಕಳಿಗೆ ಇದನ್ನು ಅತಿಯಾಗಿ ಹಚ್ಚಬೇಡಿ.
5. ಡ್ರೈ ಕ್ಲೀನಿಂಗ್ ಬಟ್ಟೆಗಳು
ರೇಷ್ಮೆ ಸೀರೆಗಳು ಮತ್ತು ಬೆಲೆಬಾಳುವ ಸೂಟ್ಗಳು ನೀರಿನಲ್ಲಿ ತೊಳೆದರೆ ಹಾಳಾಗುತ್ತವೆ ಎಂಬ ಕಾರಣಕ್ಕೆ ನಾವು ಅವುಗಳನ್ನು ಡ್ರೈ ಕ್ಲೀನಿಂಗ್ಗೆ ನೀಡುತ್ತೇವೆ. ಆದರೆ ಡ್ರೈ ಕ್ಲೀನಿಂಗ್ ಪ್ರಕ್ರಿಯೆಯಲ್ಲಿ ‘ಕ್ಲೋರೋ ಇಥಿಲೀನ್’ ಎಂಬ ರಾಸಾಯನಿಕವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಂತಹ ಬಟ್ಟೆಗಳನ್ನು ನಾವು ಡ್ರೈ ಕ್ಲೀನ್ನಿಂದ ತಂದ ತಕ್ಷಣ ಧರಿಸಿದಾಗ ಆ ರಾಸಾಯನಿಕಗಳ ಪ್ರಭಾವ ನಮ್ಮ ಚರ್ಮ ಮತ್ತು ಉಸಿರಾಟದ ಮೇಲೆ ಬೀಳುತ್ತದೆ. ಜೊತೆಗೆ ಬಟ್ಟೆಯೂ ಬೇಗನೆ ಹಾಳಾಗುತ್ತದೆ.
ಜಾಗ್ರತೆ ಕ್ರಮ: ಡ್ರೈ ಕ್ಲೀನಿಂಗ್ ಮಾಡಿಸಿ ತಂದ ಬಟ್ಟೆಗಳನ್ನು ತಕ್ಷಣವೇ ಧರಿಸಬೇಡಿ. ಆ ಬಟ್ಟೆಗಳಲ್ಲಿರುವ ರಾಸಾಯನಿಕದ ತೇವಾಂಶ ಮತ್ತು ವಾಸನೆ ಹೋಗಲಾಡಿಸಲು, ಧರಿಸುವ ಮುನ್ನ ಕೆಲವು ಗಂಟೆಗಳ ಕಾಲ ಹೊರಗೆ ನೆರಳಿನಲ್ಲಿ ಗಾಳಿಗೆ ಒಣಗಿಸುವುದು ಉತ್ತಮ.
Disclaimer: ಈ ವರದಿಯಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಪ್ರಕಟಿತ ಮೂಲಗಳನ್ನು ಆಧರಿಸಿದೆ. ಇದು ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಅರ್ಹ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















