ಕ್ಯಾನ್ಸರ್ ಎಂಬ ಹೆಸರು ಕೇಳಿದ ತಕ್ಷಣವೇ ಮನಸ್ಸಿನಲ್ಲಿ ಭಯ ಮತ್ತು ಆತಂಕ ಮನೆಮಾಡುತ್ತದೆ. ಜಗತ್ತಿನಾದ್ಯಂತ ಪ್ರತಿ ವರ್ಷ ಕೋಟ್ಯಂತರ ಜನರು ಈ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಜಗತ್ತಿನಲ್ಲಿ ಸಂಭವಿಸುವ ಪ್ರತಿ ಆರು ಸಾವುಗಳಲ್ಲಿ ಒಂದು ಸಾವಿಗೆ ಕ್ಯಾನ್ಸರ್ ಕಾರಣವಾಗಿದೆ. ಆದರೆ, ಈಗ ವೈದ್ಯಕೀಯ ಲೋಕವು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಒಂದು ಕ್ರಾಂತಿಕಾರಿ ಮೈಲಿಗಲ್ಲನ್ನು ಸಾಧಿಸಿದೆ.
ಸಂಶೋಧಕರು ಹೊಟ್ಟೆ/ಕರುಳಿನ (ಬಾವೆಲ್ ಅಥವಾ ಕೊಲೊರೆಕ್ಟಲ್) ಕ್ಯಾನ್ಸರ್ ಮತ್ತು ಅಂಡಾಶಯದ (ಓವೇರಿಯನ್) ಕ್ಯಾನ್ಸರ್ ಬರದಂತೆ ತಡೆಯುವ ಅತ್ಯಾಧುನಿಕ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಲಸಿಕೆಗೆ ‘ಲಿಂಚ್ವ್ಯಾಕ್ಸ್’ (LynchVax) ಎಂದು ಹೆಸರಿಡಲಾಗಿದೆ. ಇದು ದೇಹದಲ್ಲಿ ಕ್ಯಾನ್ಸರ್ ಕೋಶಗಳು ಸೃಷ್ಟಿಯಾಗುವುದನ್ನು ಆರಂಭಿಕ ಹಂತದಲ್ಲೇ ತಡೆಯುವ ಸಾಮರ್ಥ್ಯ ಹೊಂದಿದೆ.
ಲಸಿಕೆ ಹೇಗೆ ಕೆಲಸ ಮಾಡುತ್ತದೆ?
ಇದು ಸಾಮಾನ್ಯ ಲಸಿಕೆಗಳಂತಲ್ಲ. ಈ ಕ್ರಾಂತಿಕಾರಿ ಲಸಿಕೆಯ ಮುಖ್ಯ ಉದ್ದೇಶ ಕ್ಯಾನ್ಸರ್ ಪ್ರಕ್ರಿಯೆ ದೇಹದಲ್ಲಿ ಆರಂಭವಾಗುವುದನ್ನೇ ತಡೆಯುವುದಾಗಿದೆ. ಅಂದರೆ, ಇದು ಮನುಷ್ಯನ ರೋಗನಿರೋಧಕ ಶಕ್ತಿಯನ್ನು (Immune System) ಎಷ್ಟು ಬಲಿಷ್ಠವಾಗಿ ತರಬೇತುಗೊಳಿಸುತ್ತದೆ ಎಂದರೆ, ಕ್ಯಾನ್ಸರ್ ಆಗಿ ಬದಲಾಗಬಹುದಾದ ದೇಹದ ಅಸಹಜ ಕೋಶಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ನಾಶಪಡಿಸುತ್ತದೆ.
ಯಾರಿಗೆ ಇದು ಹೆಚ್ಚು ಉಪಯುಕ್ತ?
ಈ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಶೀಘ್ರದಲ್ಲೇ ಆರಂಭವಾಗಲಿವೆ. ಮುಖ್ಯವಾಗಿ ‘ಲಿಂಚ್ ಸಿಂಡ್ರೋಮ್’ (Lynch Syndrome) ಎಂಬ ಆನುವಂಶಿಕ ಸಮಸ್ಯೆಯನ್ನು ಹೊಂದಿರುವ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತದೆ. ಲಿಂಚ್ ಸಿಂಡ್ರೋಮ್ ಇರುವ ಜನರಲ್ಲಿ ಹೊಟ್ಟೆ, ಕರುಳು ಮತ್ತು ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯ ಶೇಕಡಾ 80 ರಷ್ಟು ಹೆಚ್ಚಿರುತ್ತದೆ. ಇದು ಜೀನ್ಗಳ ರೂಪಾಂತರದಿಂದಾಗಿ (Mutation) ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಡುತ್ತದೆ. ಉದಾಹರಣೆಗೆ, ಕೇವಲ ಇಂಗ್ಲೆಂಡ್ ಒಂದರಲ್ಲೇ ಸುಮಾರು 1.75 ಲಕ್ಷ ಜನರು ಈ ಸಿಂಡ್ರೋಮ್ನಿಂದ ಬಳಲುತ್ತಿದ್ದಾರೆ, ಆದರೆ ಆಶ್ಚರ್ಯಕರ ಸಂಗತಿಯೆಂದರೆ ಇದರಲ್ಲಿ ಶೇ. 5 ರಷ್ಟು ಜನರಿಗೆ ಮಾತ್ರ ತಮಗೆ ಈ ಸಮಸ್ಯೆ ಇದೆ ಎಂದು ತಿಳಿದಿದೆ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಪ್ರಸಿದ್ಧ ಲಸಿಕೆ ತಯಾರಿಕಾ ಕಂಪನಿ ‘ಮಾಡರ್ನಾ’ ಸಹಯೋಗದಲ್ಲಿ ಈ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಈ ಲಸಿಕೆಗೆ mRNA-4194 ಎಂದು ಹೆಸರಿಡಲಾಗಿದ್ದು, ಪ್ರಯೋಗದ ವೇಳೆ ಜನರ ರೋಗನಿರೋಧಕ ವ್ಯವಸ್ಥೆಯು ಹೇಗೆ ಪ್ರತಿಕ್ರಿಯಿಸುತ್ತದೆ, ಎಷ್ಟು ಪ್ರಮಾಣದ ಡೋಸ್ ಸುರಕ್ಷಿತ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಇದರ ಮುಂದಿನ ಹಂತದ ದೊಡ್ಡ ಮಟ್ಟದ ಪ್ರಯೋಗಗಳು 2027 ರಲ್ಲಿ ಬ್ರಿಟನ್ನ ಹಲವು ವೈದ್ಯಕೀಯ ಕೇಂದ್ರಗಳಲ್ಲಿ ನಡೆಯಲಿವೆ.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಹಿರಿಯ ಪ್ರೊಫೆಸರ್ ಡೇವಿಡ್ ಚರ್ಚ್ ಅವರ ಪ್ರಕಾರ, “ಲಿಂಚ್ ಸಿಂಡ್ರೋಮ್ ಹೊಂದಿರುವ ಜನರಿಗೆ ಜೀವನ ಪೂರ್ತಿ ಕ್ಯಾನ್ಸರ್ ಅಪಾಯ ಇರುತ್ತದೆ. ಕೆಲವೊಮ್ಮೆ ಮಹಿಳೆಯರಿಗೆ ಮೊದಲು ಗರ್ಭಾಶಯದ ಕ್ಯಾನ್ಸರ್ ಬಂದು, ಕೆಲವು ವರ್ಷಗಳ ನಂತರ ಕರುಳಿನ ಕ್ಯಾನ್ಸರ್ ಬರಬಹುದು. ಈ ಹೊಸ ಲಸಿಕೆಯಲ್ಲಿ ನಾವು ಗುರುತಿಸಿರುವ ಜೈವಿಕ ಅಂಶಗಳು ಲಿಂಚ್ ಸಿಂಡ್ರೋಮ್ನಿಂದ ಬರುವ ಹಲವು ಕ್ಯಾನ್ಸರ್ಗಳಲ್ಲಿ ಸಮಾನವಾಗಿವೆ. ಆದ್ದರಿಂದ ಈ ಲಸಿಕೆ ಯಶಸ್ವಿಯಾದರೆ, ಒಂದೇ ಲಸಿಕೆಯಿಂದ ಹಲವು ಬಗೆಯ ಕ್ಯಾನ್ಸರ್ಗಳನ್ನು ತಡೆಯಬಹುದು,” ಎಂದಿದ್ದಾರೆ.
ಈಗಾಗಲೇ ಗರ್ಭಕಂಠದ (ಸರ್ವಿಕಲ್) ಮತ್ತು ಯಕೃತ್ತಿನ (ಲಿವರ್) ಕ್ಯಾನ್ಸರ್ ತಡೆಯಲು ಲಸಿಕೆಗಳು ಲಭ್ಯವಿದ್ದು, ಈಗ ಲಿಂಚ್ವ್ಯಾಕ್ಸ್ ಕೂಡ ಯಶಸ್ವಿಯಾದರೆ ವೈದ್ಯಕೀಯ ರಂಗದಲ್ಲಿ ಇದೊಂದು ಅತಿ ದೊಡ್ಡ ಚಮತ್ಕಾರವಾಗಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















