ರಾಯ್ಪುರ: ಕಠಿಣ ಪರಿಶ್ರಮ, ಶಿಸ್ತು ಮತ್ತು ಧೃತಿಗೆಡದ ಆತ್ಮವಿಶ್ವಾಸವಿದ್ದರೆ ಕೋಚಿಂಗ್ ಸೆಂಟರ್ ಗಳ ಹಂಗಿಲ್ಲದೆಯೂ ಯಶಸ್ಸು ಸಾಧಿಸಬಹುದು ಎಂಬುದನ್ನು ಛತ್ತೀಸ್ ಗಢದ 23 ವರ್ಷದ ಯುವತಿ ಚಾರು ಪಾಂಡೆ ಸಾಬೀತುಪಡಿಸಿದ್ದಾರೆ.
ಯಾವುದೇ ಖಾಸಗಿ ತರಬೇತಿ ಸಂಸ್ಥೆಗಳ ಸಹಾಯವಿಲ್ಲದೆ, ಕೇವಲ ಸ್ವಯಂ ಅಧ್ಯಯನದ (Self-study) ಮೂಲಕ ಬರೋಬ್ಬರಿ 19 ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡುವ ಮೂಲಕ ದೇಶಾದ್ಯಂತ ಇರುವ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಇವರು ರೋಲ್ ಮಾಡೆಲ್ ಆಗಿದ್ದಾರೆ.
ಪ್ರಸ್ತುತ ವಿಶಾಖಪಟ್ಟಣಂನಲ್ಲಿರುವ ಕಾಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ (CAG) ಕಚೇರಿಯಲ್ಲಿ ‘ಅಸಿಸ್ಟೆಂಟ್ ಆಡಿಟ್ ಆಫೀಸರ್’ (Assistant Audit Officer) ಆಗಿ ಸೇವೆ ಸಲ್ಲಿಸುತ್ತಿರುವ ಚಾರು ಪಾಂಡೆ ಅವರ ಸಾಧನೆಯನ್ನು ಗುರುತಿಸಿ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾರು ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಿದ್ದಾರೆ.

ಛತ್ತೀಸ್ ಗಢದ ತಿಲ್ಡಾ-ನಿಯೋರಾ ಮೂಲದ ಚಾರು ಪಾಂಡೆ ಗಣಿತಶಾಸ್ತ್ರದಲ್ಲಿ ಪದವೀಧರೆ. ಕಾಲೇಜು ದಿನಗಳಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಆರಂಭಿಸಿದ ಇವರು ಒಂದರ ಬೆನ್ನಿಗೊಂದರಂತೆ ಪರೀಕ್ಷೆಗಳನ್ನು ಬರೆಯುತ್ತಾ ಹೋದರು.
ನಾನು ಯಾವುದೇ ನಿರ್ದಿಷ್ಟ ಯೋಜನೆಯೊಂದಿಗೆ ಇಷ್ಟೊಂದು ಪರೀಕ್ಷೆಗಳನ್ನು ಬರೆಯಲಿಲ್ಲ. ಒಂದು ಪರೀಕ್ಷೆ ಮುಗಿದ ನಂತರ ಅದರ ಫಲಿತಾಂಶ ಬರಲು ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಆ ಸಮಯವನ್ನು ವ್ಯರ್ಥ ಮಾಡದೆ ಮತ್ತೊಂದು ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆ ಬರೆಯುತ್ತಿದ್ದೆ. ಹಾಗೆ ಒಂದೊಂದೇ ಅವಕಾಶಗಳು ಒದಗಿಬಂದವು ಎಂದು ಚಾರು ತಮ್ಮ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.
ಚಾರು ಪಾಂಡೆ ಅವರು ತೇರ್ಗಡೆಯಾಗಿರುವ ಪ್ರಮುಖ ಪರೀಕ್ಷೆಗಳ ಪಟ್ಟಿ ಹೀಗಿದೆ:
SSC ವಿಭಾಗ: SSC CGL, CHSL, MTS, GD ಮತ್ತು CPO.
ಬ್ಯಾಂಕಿಂಗ್ ವಿಭಾಗ: SBI PO, SBI Clerk, IBPS PO ಮತ್ತು IBPS Clerk.
ಇತರ: ರೈಲ್ವೆ ಇಲಾಖೆ (Railways), ಪೊಲೀಸ್ ಇಲಾಖೆ ಹಾಗೂ ವಿವಿಧ ರಾಜ್ಯ ಮಟ್ಟದ ನೇಮಕಾತಿ ಪರೀಕ್ಷೆಗಳು.
ದಿನಕ್ಕೆ 20 ಗಂಟೆಗಳ ಕಠಿಣ ಅಧ್ಯಯನ!
ಪರೀಕ್ಷಾ ತಯಾರಿಯ ಸಂದರ್ಭದಲ್ಲಿ ಯಾವುದೇ ರೀತಿಯ ಗಮನ ಬೇರೆಡೆಗೆ ಸೆಳೆಯದಂತೆ ತಡೆಯಲು ಚಾರು ಅವರು ರಾಯ್ಪುರದ ಗೆಸ್ಟ್ ಹೌಸ್ ಒಂದರಲ್ಲಿ ಆರು ತಿಂಗಳ ಕಾಲ ತಂಗಿದ್ದರು. ಆ ಸಮಯದಲ್ಲಿ ಅವರು ದಿನಕ್ಕೆ ಬರೋಬ್ಬರಿ 20 ಗಂಟೆಗಳ ಕಾಲ ಓದುತ್ತಿದ್ದರು! ಇದೇ ಅವಧಿಯಲ್ಲಿ ಅವರು ಶಾಲಾ ಮಕ್ಕಳಿಗೆ ಟ್ಯೂಷನ್ ಕೂಡ ಹೇಳಿಕೊಡುತ್ತಿದ್ದರು. ಮಕ್ಕಳಿಗೆ ಪಾಠ ಮಾಡುವುದರಿಂದ ತಮ್ಮ ಸ್ವಂತ ವಿಷಯಗಳ ಮೇಲಿನ ಹಿಡಿತ ಮತ್ತಷ್ಟು ಗಟ್ಟಿಯಾಯಿತು ಎನ್ನುತ್ತಾರೆ ಅವರು.
ಪಠ್ಯಕ್ರಮದ ಬಗ್ಗೆ ಮಾತನಾಡುವ ಅವರು, ನಾವು ಕೇವಲ ಸಿಲಬಸ್ ಮುಗಿಸುವ ಓಟದಲ್ಲಿ ಇರಬಾರದು. ನಾವು ಎಷ್ಟು ಓದುತ್ತೇವೆಯೋ, ಅದು ಕಲ್ಲು ಬಂಡೆಯಂತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಬೇಕು” ಎಂಬ ಕಿವಿಮಾತು ಹೇಳುತ್ತಾರೆ.
ಮಗಳ ಈ ಅಪೂರ್ವ ಸಾಧನೆ ಪೋಷಕರಿಗೂ ದೊಡ್ಡ ಆಶ್ಚರ್ಯ ತಂದಿದೆ. ನಾವು ಚಾರು ಕೈಯಲ್ಲಿ ಯಾವಾಗಲೂ ಪುಸ್ತಕ ಹಿಡಿದು ಓದುತ್ತಿರುವುದನ್ನು ಹೆಚ್ಚಾಗಿ ನೋಡುತ್ತಿರಲಿಲ್ಲ, ಆದರೆ ನಮಗೆ ನಮ್ಮ ಮಗಳ ಮೇಲೆ ಸಂಪೂರ್ಣ ನಂಬಿಕೆಯಿತ್ತು ಎಂದು ಚಾರು ಪೋಷಕರು ಹೆಮ್ಮೆಯಿಂದ ಹೇಳುತ್ತಾರೆ. ಸಣ್ಣ ಹಳ್ಳಿಯಿಂದ ಬಂದು ಇಂದು ದೇಶದ ಅತ್ಯುನ್ನತ ಸರ್ಕಾರಿ ಹುದ್ದೆ ಅಲಂಕರಿಸಿ, ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಲು ಸಜ್ಜಾಗಿರುವ ಚಾರು ಪಾಂಡೆ ಅವರ ಕಥೆ – ನಿರಂತರತೆ, ಶಿಸ್ತು ಮತ್ತು ಸ್ಮಾರ್ಟ್ ವರ್ಕ್ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















