ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಐತಿಹಾಸಿಕ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದ್ದು, ಇನ್ನೆರಡು ದಿನಗಳೊಳಗೆ ಅದರ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಇದುವರೆಗೆ ಉಚಿತ ಬಸ್ ಪಾಸ್ ಸೌಲಭ್ಯವು ವಿದ್ಯಾರ್ಥಿನಿಯರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಆರ್ಥಿಕ ಅಡಚಣೆಗಳಿಲ್ಲದೆ ಶಿಕ್ಷಣ ಮುಂದುವರಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸದೇ ಎಲ್ಲ ಮಕ್ಕಳಿಗೂ ಈ ಯೋಜನೆಯ ಪ್ರಯೋಜನ ದೊರೆಯಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಡಿ.ಕೆ. ಶಿವಕುಮಾರ್ ಅವರು ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಿಸಿದ್ದರು. ಇದೀಗ ಆ ಘೋಷಣೆಯನ್ನು ಸಾರಿಗೆ ಇಲಾಖೆ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿದೆ.
ಉಚಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಅರ್ಹ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ.
ಈ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ಹಣ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳಿಗೂ ಸರ್ಕಾರ ನಿರಾಶೆ ಉಂಟುಮಾಡಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಅವರು ಪಾವತಿಸಿರುವ ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಬೈರತಿ ಸುರೇಶ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ರಾಜ್ಯದ ಎಲ್ಲ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















