ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕರ್ನಾಟಕದ ಭಕ್ತರಿಗೆ ಕೆಲವು ದಿನಗಳ ಹಿಂದೆ ಅಲ್ಲಿನ ವ್ಯವಸ್ಥೆ ಹಾಗೂ ಸಿಬ್ಬಂದಿಯಿಂದ ತೊಂದರೆಯಾಗಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದವು. ಕೆಲ ಭಕ್ತರು ಅಸಮಾಧಾನ ವ್ಯಕ್ತಪಡಿಸಿ, “ಈ ದೇವಸ್ಥಾನಕ್ಕೆ ಯಾರೂ ಹೋಗಬೇಡಿ” ಎಂಬ ಮಟ್ಟಿಗೆ ಆಕ್ರೋಶ ಹೊರಹಾಕಿದ್ದರು.
ಈ ವಿವಾದದ ಹಿನ್ನೆಲೆಯಲ್ಲಿ ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರ ಅವರು ಕನ್ನಡಿಗರಿಗಾಗಿ ವಿಶೇಷ ವಿಡಿಯೋ ಸಂದೇಶ ಬಿಡುಗಡೆ ಮಾಡಿ ಭರವಸೆ ನೀಡಿದ್ದಾರೆ.
“ಪ್ರತಿ ವರ್ಷ ಕರ್ನಾಟಕದಿಂದ ಸಾವಿರಾರು ಭಕ್ತರು ಕೊಟ್ಟಿಯೂರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ಬಾರಿ ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಆವರಣದಲ್ಲಿ ಕನ್ನಡ ನಾಮಫಲಕಗಳು ಹಾಗೂ ಕನ್ನಡ ಭಾಷೆಯಲ್ಲೇ ಧ್ವನಿವರ್ಧಕ ಪ್ರಕಟಣೆಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ನಿಲುಗಡೆ ಸೇರಿದಂತೆ ಮೂಲಸೌಕರ್ಯಗಳನ್ನು ಇನ್ನಷ್ಟು ಸುಧಾರಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಸಮರ್ಪಕ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಆತಂಕವಿಲ್ಲದೆ ಭಕ್ತರು ದೇವರ ದರ್ಶನ ಪಡೆಯಬಹುದು” ಎಂದು ಅವರು ತಿಳಿಸಿದ್ದಾರೆ.ಇದರ ಜೊತೆಗೆ ಪವಿತ್ರ ಕಾಡು ಪ್ರದೇಶಕ್ಕೆ ಭೇಟಿ ನೀಡುವ ಭಕ್ತರು ಪರಿಸರ ಸಂರಕ್ಷಣೆಗೆ ಸಹಕರಿಸಬೇಕು. ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

ಯಾರು ಈ ಯತೀಶ್ ಚಂದ್ರ?
ಕನ್ನಡದಲ್ಲೇ ಮಾತನಾಡಿ ಭಕ್ತರ ಮನ ಗೆದ್ದಿರುವ ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರ ಮೂಲತಃ ಕರ್ನಾಟಕದ ದಾವಣಗೆರೆ ಜಿಲ್ಲೆಯವರು. ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಸಮಾಜಸೇವೆಯ ಉದ್ದೇಶದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್ ಅಧಿಕಾರಿಯಾದರು.2021ರಲ್ಲಿ ಡೆಪ್ಯುಟೇಶನ್ ಆಧಾರದಲ್ಲಿ ಕರ್ನಾಟಕಕ್ಕೆ ಆಗಮಿಸಿ ಬೆಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಶಿಸ್ತು, ಕಾರ್ಯಕ್ಷಮತೆ ಹಾಗೂ ಫಿಟ್‌ನೆಸ್ ಮೂಲಕ ಜನಪ್ರಿಯತೆ ಗಳಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಫಿಟ್‌ನೆಸ್ ಚಾಲೆಂಜ್ ಸ್ವೀಕರಿಸಿ ರಾಷ್ಟ್ರ ಮಟ್ಟದಲ್ಲೂ ಗಮನ ಸೆಳೆದಿದ್ದರು.
ಕರ್ನಾಟಕದಲ್ಲಿ ಸೇವೆ ಪೂರ್ಣಗೊಳಿಸಿದ ಬಳಿಕ ಕೇರಳಕ್ಕೆ ಮರಳಿದ ಅವರು, ಐಸಿಟಿ ವಿಭಾಗದ ಎಸ್‌ಪಿಯಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಕಣ್ಣೂರು ರೇಂಜ್ ಡಿಐಜಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡಿಗರ ಆತಂಕದ ಸಂದರ್ಭದಲ್ಲಿ ತಮ್ಮ ಮಾತೃಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















