ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಜೂ 11 :
ಭಾರತ ದೇಶದ ಪ್ರತಿನಿಧಿಯಾಗಿ ಮಲೇಶಿಯಾದ ಕೌಲಾಲಂಪುರದಲ್ಲಿರುವ ಯುಪಿಎಮ್ ವಿಶ್ವವಿದ್ಯಾಲಯ ಸ್ಟೇಡಿಯಂನಲ್ಲಿ 2026ರ ಜೂನ್ 6, ರಂದು ನಡೆದ 38ನೇ ಮಲೇಶಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್‍ಶಿಪ್-2026ನಲ್ಲಿ ಭಾಗವಹಿಸಿದ ಚಿತ್ರದುರ್ಗದ ಸತೀಶ್ ಕುಮಾರ್ ಯು ಅವರು 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದು ಭಾರತ ದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಈ ಕ್ರೀಡಾಕೂಟದಲ್ಲಿ ವಿವಿಧ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರೂ, ಸತೀಶ್ ಕುಮಾರ್ ಯು ಅವರು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಗಮನಾರ್ಹ ಸಾಧನೆ ಮಾಡಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ, ಅವರ ಈ ಸಾಧನೆಯ ಫಲವಾಗಿ ಮುಂದಿನ ದಿನಗಳಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಮೀಟ್ ನಲ್ಲಿ ಭಾಗವಹಿಸಲು ಅವರು ಆಯ್ಕೆಯಾಗಿರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಈ ಸಾಧನೆ ಕನ್ನಡಿಗ ಯುವಕರಿಗೆ ಪ್ರೇರಣೆಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದೆ.
400 ಮೀಟರ್ ಓಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಪಡೆದು ಚಿತ್ರದುರ್ಗ ನಗರಕ್ಕೆ ಬುಧವಾರ ಸಂಜೆ ಆಗಮಿಸಿದ ಸತೀಶ್ ಕುಮಾರ್‍ರವರನ್ನು ಅವರ ಅಭಿಮಾನಿಗಳು, ಹಿತೈಷಿಗಳು ಬಂಧುಗಳು ರಂಗಯ್ಯನ ಬಾಗಿಲ ಬಳಿಯಲ್ಲಿನ ಮದಕರಿ ಮಹಾಗಣಪತಿ ದೇವಾಲಯದ ಬಳಿ ವಿವಿಧ ಜಾನಪದ ಕಲಾ ತಂಡದೊಂದಿಗೆ ಅದ್ದೂರಿಯಾದ ಸ್ವಾಗತವನ್ನು ಕೋರಿದರು. ಜನತೆ ಹಾಕಿದ ಹಾರ, ಟೋಪಿಯನ್ನು ಧರಿಸಿದ ಸತೀಶ್ ಕುಮಾರ್ ತಾವು ಗೆದ್ದ ಪದಕವನ್ನು ಜನರಿಗೆ ತೋರಿಸುತ್ತಾ ಕೈಯಲ್ಲಿ ದೇಶದ ಬಾವುಟವನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಅಭಿಮಾನಿಗಳು, ಭಾರತ್ ಮಾತಾಕೀ ಜೈ ಎಂದು ಕೂಗುತ್ತಾ ಸಾಗಿಸುತ್ತಿದ್ದ ದೃಶ್ಯ ಕಂಡು ಬಂದಿತು.
ಸತೀಶ್ ಕುಮಾರ್ ಅವರ ಈ ಅಮೋಘ ಸಾಧನೆಗೆ ಚಿತ್ರದುರ್ಗದ ನಾಗರೀಕರು ಹೃತ್ಪೂರ್ವಕ ಅಭಿನಂದನೆ ಗಳನ್ನು ಸಲ್ಲಿಸಿದ್ದು, ಮುಂಬರುವ ವಿಶ್ವಮಟ್ಟದ ಸ್ಪರ್ಧೆಯಲ್ಲಿಯೂ ಅವರು ಇನ್ನಷ್ಟು ಸಾಧನೆ ಮಾಡಿ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















