ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಂತ್ರಜ್ಞಾನ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (KPS) ಕಂಪ್ಯೂಟರ್ ಶಿಕ್ಷಣವನ್ನು ಪರಿಚಯಿಸಲು ಅನುವಾಗುವಂತೆ 2,500 ಮಾಹಿತಿ ತಂತ್ರಜ್ಞಾನ (IT) ಶಿಕ್ಷಕರ ಹುದ್ದೆಗಳನ್ನು ಹೊಸದಾಗಿ ಸೃಷ್ಟಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ಜೂನ್ 8, 2026 ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಆಯ್ಕೆ ಮಾಡಲಾದ ಸರ್ಕಾರಿ ಶಾಲೆಗಳನ್ನು (ಕಲ್ಯಾಣ ಕರ್ನಾಟಕ ಪ್ರದೇಶದ 200 ಶಾಲೆಗಳು ಹಾಗೂ ರಾಜ್ಯದ ಇತರೆಡೆಯ 500 ಶಾಲೆಗಳು ಸೇರಿದಂತೆ) ‘ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ’ ಉನ್ನತೀಕರಿಸಲಾಗುತ್ತಿದ್ದು, 2026-27ನೇ ಸಾಲಿನಿಂದಲೇ 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯವಾಗಿ ಪರಿಚಯಿಸಲಾಗುತ್ತಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ (PST) ವೃಂದದ ಶಿಕ್ಷಕರ ಮರುಹೊಂದಾಣಿಕೆ/ಮರುಹಂಚಿಕೆ (Rationalisation) ಪ್ರಕ್ರಿಯೆಯ ನಂತರ ಉಳಿಕೆಯಾದ 6,117 ಹುದ್ದೆಗಳ ಪೈಕಿ 2,500 ಹುದ್ದೆಗಳನ್ನು ಮಾಹಿತಿ ತಂತ್ರಜ್ಞಾನ (ಕಂಪ್ಯೂಟರ್) ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಲಾಗಿದೆ.ಹೊಸದಾಗಿ ಸೃಷ್ಟಿಸಲಾದ ಈ ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳಿಗೆ ರೂ. 44,425 – 83,700 ರ ಭರ್ಜರಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ಈ ಕಂಪ್ಯೂಟರ್ ಶಿಕ್ಷಕರ ವೃಂದಕ್ಕೆ ಪ್ರತ್ಯೇಕವಾದ ವೃಂದ ಮತ್ತು ನೇಮಕಾತಿ (C&R) ನಿಯಮಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಈ ಯೋಜನೆಯಿಂದ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ರೂ. 1141.50 ಲಕ್ಷಗಳ ಹೆಚ್ಚುವರಿ ವೆಚ್ಚ ತಗುಲಲಿದ್ದು, ಇದಕ್ಕೆ ಕಾನೂನು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಹಣಕಾಸು ಇಲಾಖೆಗಳು ಪೂರ್ಣ ಸಮ್ಮತಿ ಸೂಚಿಸಿವೆ.
ಈ ಐತಿಹಾಸಿಕ ನಿರ್ಧಾರದಿಂದಾಗಿ ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಆಧುನಿಕ ಕಂಪ್ಯೂಟರ್ ಶಿಕ್ಷಣ ಸಿಗುವಂತಾಗಲಿದ್ದು, ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಂತಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















