ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡಿರುವ ನಾಗರಿಕರಿಗೆ ಕರ್ನಾಟಕ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ನಿಗದಿತ ಅಳತೆಯ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಇನ್ಮುಂದೆ ಸ್ವಾಧೀನಾನ್ಭವ ಪ್ರಮಾಣ ಪತ್ರ (Occupancy Certificate – OC) ಪಡೆಯುವುದರಿಂದ ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯು ಜೂನ್ 5, 2026 ರಂದು ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಹಿಂದೆ ಅಕ್ಟೋಬರ್ 24, 2025 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಕೇವಲ 1200 ಚದರ ಅಡಿವರೆಗಿನ ನಿವೇಶನಗಳಿಗೆ ಮಾತ್ರ ಈ ವಿನಾಯಿತಿ ನೀಡಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಈಗ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದ್ದು, ಹೊಸ ಆದೇಶದ ಅನ್ವಯ ಈ ಕಟ್ಟಡಗಳಿಗೆ ವಿನಾಯಿತಿ ಸಿಗಲಿದೆ.
ನಿವೇಶನದ ವಿಸ್ತೀರ್ಣ: ಗರಿಷ್ಠ 2400 ಚದರ ಅಡಿವರೆಗಿನ ವಿಸ್ತೀರ್ಣ ಹೊಂದಿರುವ (ಶೇ. 20 ರಷ್ಟು ಹೆಚ್ಚು-ಕಡಿಮೆ ವ್ಯತ್ಯಾಸದ ಮಿತಿಯೊಂದಿಗೆ) ನಿವೇಶನಗಳು.
ಕಟ್ಟಡದ ಮಿತಿ: * ನೆಲಮಹಡಿ + 3 ಅಂತಸ್ತುಗಳು (G + 3) ಇರುವ ವಸತಿ ಕಟ್ಟಡಗಳು.
ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು (Stilt + 4) ಹೊಂದಿರುವ ವಸತಿ ಕಟ್ಟಡಗಳು.
ಷರತ್ತುಗಳೇನು?
ಈ ವಿನಾಯಿತಿಯು ಕೇವಲ ಒಂದು ಬಾರಿಗೆ ಮಾತ್ರ ಅನ್ವಯವಾಗುತ್ತದೆ.
ಸದರಿ ವಸತಿ ಕಟ್ಟಡಗಳ ನಿರ್ಮಾಣ ಕಾರ್ಯವು ಪೂರ್ಣಗೊಂಡಿರಬೇಕು.
ವಿದ್ಯುತ್ ಸಂಪರ್ಕಕ್ಕಾಗಿ ಗ್ರಾಹಕರು ದಿನಾಂಕ: 31.05.2026 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಿರಬೇಕು.
ಬೆಸ್ಕಾಂ/ವಿದ್ಯುತ್ ಸರಬರಾಜು ಕಂಪನಿಗಳಿಗೆ ಸೂಚನೆ:
ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವುದನ್ನು ಹಾಗೂ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ವಿದ್ಯುತ್ ಸರಬರಾಜು ಕಂಪನಿಗಳು (Escoms) ಸ್ಥಳ ಪರಿಶೀಲನೆ ನಡೆಸಲಿವೆ. ತದನಂತರ ಕಟ್ಟಡದ ಭಾವಚಿತ್ರವನ್ನು ತೆಗೆದು, ದಾಖಲೆ ಮಾಡಿಕೊಂಡು ವಿದ್ಯುತ್ ಸಂಪರ್ಕ ನೀಡಲು ಸರ್ಕಾರವು ನಿರ್ದೇಶಿಸಿದೆ.
ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನದ ಅನ್ವಯ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳಾದ ಕೆ. ನಾಗೇಶ್ ಅವರು ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾವಿರಾರು ಮಧ್ಯಮ ವರ್ಗದ ಮನೆ ಮಾಲೀಕರಿಗೆ ಅಲೆಯುವ ಜಂಜಾಟ ತಪ್ಪಿದಂತಾಗಿದ್ದು, ದೊಡ್ಡ ರಿಲೀಫ್ ಸಿಕ್ಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















