ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದು, ನಿರ್ಮಾಪಕರ ವಿರುದ್ಧ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನುಡಿಯಲು ಹಾಗೂ ವೈಯಕ್ತಿಕವಾಗಿ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸುದೀಪ್ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ.
ಕೆಲವು ನಿರ್ಮಾಪಕರು ತಮ್ಮ ವಿರುದ್ಧ ಆಧಾರರಹಿತ ಹಾಗೂ ಘನತೆಗೆ ಧಕ್ಕೆ ತರುವಂತಹ ಆರೋಪಗಳನ್ನು ಸಾರ್ವಜನಿಕವಾಗಿ ಮಾಡಿದ್ದರು ಎಂದು ಆರೋಪಿಸಿ, ಸುದೀಪ್ ಅವರು 2023ರಲ್ಲಿ 7ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಿರ್ಮಾಪಕರಾದ ಎಂ.ಎನ್. ಕುಮಾರ್ ಹಾಗೂ ಎಂ.ಎನ್. ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
9 ಕೋಟಿ ರೂಪಾಯಿ ಆರೋಪದ ಸುತ್ತ ವಿವಾದ
ಸಿನಿಮಾಗೆ ಕಾಲ್ಶೀಟ್ ನೀಡುವುದಾಗಿ ಹೇಳಿ 9 ಕೋಟಿ ರೂಪಾಯಿ ಪಡೆದಿದ್ದಾರೆ ಎಂಬ ಆರೋಪವನ್ನು ನಿರ್ಮಾಪಕರು ಮಾಡಿದ್ದರು. ಈ ಹೇಳಿಕೆಗಳು ತಮ್ಮ ಗೌರವಕ್ಕೆ ಧಕ್ಕೆ ತಂದಿವೆ ಎಂದು ವಾದಿಸಿ ಸುದೀಪ್ ಕಾನೂನು ಹೋರಾಟ ಆರಂಭಿಸಿದ್ದರು. ಸುದೀರ್ಘ ಅವಧಿಯಿಂದ ವಿಚಾರಣೆಯಲ್ಲಿರುವ ಈ ಪ್ರಕರಣ ಇದೀಗ ಮಹತ್ವದ ಹಂತ ತಲುಪಿದೆ.
ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ
ನಟ ಸುದೀಪ್ ನ್ಯಾಯಾಲಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಭಿಮಾನಿಗಳು ಹಾಗೂ ಮಾಧ್ಯಮಗಳ ಗಮನವೂ ಈ ಪ್ರಕರಣದತ್ತ ನೆಟ್ಟಿದ್ದು, ಇಂದಿನ ವಿಚಾರಣೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಸಿನಿಮಾ ಕ್ಷೇತ್ರದಲ್ಲೂ ಫುಲ್ ಬ್ಯುಸಿ
ಕಾನೂನು ಹೋರಾಟದ ನಡುವೆಯೂ ಕಿಚ್ಚ ಸುದೀಪ್ ಸಿನಿಮಾ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಬಿಲ್ಲಾ ರಂಗ ಬಾಷಾ’ ಚಿತ್ರೀಕರಣದಲ್ಲಿದ್ದು, ಭವಿಷ್ಯದ ಕಥಾಹಂದರ ಹೊಂದಿರುವ ಈ ಸಿನಿಮಾ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿದೆ.
ಇದರ ಜೊತೆಗೆ ‘ಮ್ಯಾಕ್ಸ್’ ಖ್ಯಾತಿಯ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಜೊತೆ ‘ಕಿಚ್ಚ 47’ ಚಿತ್ರದಲ್ಲೂ ಸುದೀಪ್ ನಟಿಸುತ್ತಿದ್ದು, ಸತ್ಯಜ್ಯೋತಿ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ.
ನಿರ್ದೇಶಕರಾಗಿಯೂ ಯಶಸ್ವಿ ಪಯಣ
ನಟನಷ್ಟೇ ಅಲ್ಲದೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಸುದೀಪ್, 2006ರಲ್ಲಿ ಬಿಡುಗಡೆಯಾದ ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ‘ನಂ.73’, ‘ಶಾಂತಿ ನಿವಾಸ’, ‘ವೀರ ಮದಕರಿ’, ‘ಜಸ್ಟ್ ಮಾತ್ ಮಾತಲ್ಲಿ’,

‘ಕೆಂಪೇಗೌಡ’ ಹಾಗೂ ‘ಮಾಣಿಕ್ಯ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಚಿತ್ರಕ್ಕೆ ಅವರು ಕಥೆ ಮತ್ತು ಚಿತ್ರಕಥೆಯನ್ನೂ ಬರೆದಿದ್ದರು.
ಇದೀಗ ಕೋರ್ಟ್ ವಿಚಾರಣೆ ಹಾಗೂ ಸಿನಿಮಾ ಬ್ಯುಸಿಯ ನಡುವೆ ಸುದೀಪ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















