ಸುದ್ದಿಒನ್,ಬೆಂಗಳೂರು,ಜೂನ್.04: ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಶುಭಾ ಪೂಂಜಾ ಅವರ ವೈಯಕ್ತಿಕ ಜೀವನದ ಕುರಿತು ಮಹತ್ವದ ಬೆಳವಣಿಗೆಯೊಂದು ಹೊರಬಿದ್ದಿದೆ. ಹಲವು ವರ್ಷಗಳ ಪ್ರೀತಿಯ ಬಳಿಕ ವಿವಾಹವಾಗಿದ್ದ ಶುಭಾ ಪೂಂಜಾ ಮತ್ತು ಅವರ ಪತಿ ಸುಮಂತ್ ಬಿಲ್ಲವ ಇದೀಗ ಪರಸ್ಪರ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.
ಉಡುಪಿ ಮೂಲದ ಉದ್ಯಮಿ ಹಾಗೂ ಕನ್ನಡಪರ ಹೋರಾಟಗಾರರಾಗಿರುವ ಸುಮಂತ್ ಬಿಲ್ಲವ ಮತ್ತು ನಟಿ ಶುಭಾ ಪೂಂಜಾ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಕುಟುಂಬದವರ ಸಮ್ಮುಖದಲ್ಲಿ 2022ರ ಜನವರಿ 5ರಂದು ಸರಳ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ಹೊಸ ಜೀವನ ಆರಂಭಿಸಿದ್ದರು. ಆದರೆ ಈಗ ಕೇವಲ ನಾಲ್ಕು ವರ್ಷಗಳೊಳಗೆ ಈ ಸಂಬಂಧದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿರುವುದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕಳೆದ ಕೆಲ ತಿಂಗಳುಗಳಿಂದ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಒಟ್ಟಿಗೆ ಜೀವನ ಸಾಗಿಸುವುದು ಕಷ್ಟಕರ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಪರಸ್ಪರ ಸಮ್ಮತಿಯ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಕೋರ್ಟ್‌ಗೆ ಜಂಟಿ ಅರ್ಜಿ ಸಲ್ಲಿಸಲಾಗಿದೆ.ಈ ಪ್ರಕರಣದ ಮುಂದಿನ ವಿಚಾರಣೆಯ ವೇಳೆ ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಇಬ್ಬರೂ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.










