ಸುದ್ದಿಒನ್,ಬೆಂಗಳೂರು,ಜೂನ್.2 : ಕರ್ನಾಟಕದಲ್ಲಿ ಹೊಸ ಸರ್ಕಾರದ ಸಚಿವ ಸಂಪುಟ ರಚನೆಯ ಕಸರತ್ತು ಈಗ ಕ್ಲೈಮ್ಯಾಕ್ಸ್ ತಲುಪಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಮೊದಲ ಹಂತದಲ್ಲಿ ಯಾರೆಲ್ಲಾ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ಸಂಜೆಯೊಳಗೆ ಬ್ರೇಕ್ ಬೀಳುವ ಲಕ್ಷಣಗಳಿವೆ.
ಬುಧವಾರ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ 10 ರಿಂದ 12 ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದು, ಅದಕ್ಕೆ ಸಂಬಂಧಿಸಿದ ಫೈನಲ್ ಲಿಸ್ಟ್ ಮಂಗಳವಾರವೇ ಬಿಡುಗಡೆಯಾಗುವ ಸಾಧ್ಯತೆಯಿದೆ. ಬುಧವಾರ ಸಂಜೆ 4.05ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಈ ಪದಗ್ರಹಣ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದೆ.

ದೆಹಲಿಯಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್!
ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ದೆಹಲಿಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರ ಹೈವೋಲ್ಟೇಜ್ ಮೀಟಿಂಗ್ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಈಗಾಗಲೇ ಸೋಮವಾರ ತಡರಾತ್ರಿ ಪ್ರಾಥಮಿಕ ಸುತ್ತಿನ ಮಾತುಕತೆ ಮುಗಿದಿದ್ದು, ಹಂಚಿಕೆಯ ಲೆಕ್ಕಾಚಾರಗಳು ಬಹುತೇಕ ಮುಕ್ತಾಯ ಹಂತಕ್ಕೆ ಬಂದಿವೆ.
ಜಾತಿ ಮತ್ತು ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದ್ದು, ಅನುಭವಿಗಳು ಹಾಗೂ ಯುವ ನಾಯಕರ ಮಿಶ್ರಣ ಈ ಬಾರಿ ಇರಲಿದೆ. ಸದ್ಯಕ್ಕೆ ಕೇಳಿಬರುತ್ತಿರುವ ಲೇಟೆಸ್ಟ್ ಮಾಹಿತಿಯಂತೆ ಯತೀಂದ್ರ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ, ಎಚ್.ಸಿ. ಮಹದೇವಪ್ಪ, ಸಂತೋಷ್ ಲಾಡ್ ಮತ್ತು ಜಮೀರ್ ಅಹಮದ್ ಖಾನ್ ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ಮುಂಚೂಣಿಯಲ್ಲಿವೆ.










