ಸುದ್ದಿಒನ್,ಬೆಂಗಳೂರು,ಜೂ.1: ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸದ್ಯ ಸಚಿವ ಸಂಪುಟ ಪುನಾರಚನೆ ಮತ್ತು ವಿಸ್ತರಣೆಯ ಜಟಾಪಟಿ ಜೋರಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಬೆಳವಣಿಗೆಗಳ ಬೆನ್ನಲ್ಲೇ, ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ಹೈಕಮಾಂಡ್ ಮುಂದೆ ಕ್ಯೂ ನಿಂತಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ಗೊಂದಲದಲ್ಲಿ ಮುಳುಗಿರುವ ದೆಹಲಿ ನಾಯಕರಿಗೆ ಈಗ ದೊಡ್ಡ ತಲೆನೋವು ಶುರುವಾಗಿದೆ.
ಆಡಳಿತ ಪಕ್ಷದ ಒಳಗೇ ಸಚಿವ ಸ್ಥಾನಕ್ಕಾಗಿ ತೆರೆಮರೆಯ ಭಾರಿ ಪೈಪೋಟಿ ಆರಂಭವಾಗಿದ್ದು, ಪ್ರಭಾವಿ ನಾಯಕರ ನಡುವೆ ಒಳಗೊಳಗೇ ಶೀತಲ ಸಮರ ನಡೆಯುತ್ತಿದೆ.
ಸತತವಾಗಿ ಮೂರ್ನಾಲ್ಕು ಬಾರಿ ಗೆದ್ದು ಬೀಗಿರುವ ಹಿರಿಯ ಶಾಸಕರು ಈ ಬಾರಿ ತಮಗೆ ಸಚಿವ ಸ್ಥಾನ ಸಿಗಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಿರಿತನದ ಆಧಾರದ ಮೇಲೆ ತಮಗೆ ಆದ್ಯತೆ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ಬೆಂಗಳೂರಿನಿಂದ ದೆಹಲಿಯವರೆಗೂ ಸಂಪುಟ ಕಸರತ್ತಿನ ಲಾಬಿ ಜೋರಾಗಿ ನಡೆದಿದೆ.
ಈ ರೇಸ್ನಲ್ಲಿ ಕೇವಲ ವಿಧಾನಸಭೆ ಶಾಸಕರು ಮಾತ್ರವಲ್ಲದೆ, ವಿಧಾನ ಪರಿಷತ್ ಸದಸ್ಯರು (MLC) ಸಹ ಧುಮುಕಿದ್ದಾರೆ. ಮೇಲ್ಮನೆಯ ಸದಸ್ಯರಿಗೂ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಹಠಕ್ಕೆ ಬಿದ್ದಿರುವ ಅವರು, ಪರಿಷತ್ ಕೋಟಾದಡಿಯಲ್ಲಿ ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡುವಂತೆ ಹೈಕಮಾಂಡ್ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ. ಇದು ಹೈಕಮಾಂಡ್ ಪಾಲಿಗೆ ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ಸಿದ್ದರಾಮಯ್ಯ ಪುತ್ರನಿಗೆ ಮಂತ್ರಿ ಭಾಗ್ಯ?
ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳ ಮಧ್ಯೆ, ಸಿದ್ದರಾಮಯ್ಯ ಅವರ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಯತೀಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿಗಳ ಬಣವನ್ನು ಸಮಾಧಾನಪಡಿಸಲು ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ ಎಂಬ ಚರ್ಚೆಗಳು ರಾಜಕೀಯ ಕಾರಿಡಾರ್ನಲ್ಲಿ ಕೇಳಿಬರುತ್ತಿವೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















