ಚಿತ್ರದುರ್ಗ, ಜೂನ್ 01: ಅದು 1983ರ ಕಾಲಘಟ್ಟ… 17ರ ಹರೆಯದ ಹುಡುಗನೊಬ್ಬ ಹೆಗಲ ಮೇಲೆ ‘ಪ್ರಜಾವಾಣಿ’ ಪತ್ರಿಕೆಯ ಬಂಡಲ್ ಹೊತ್ತು ಚಿತ್ರದುರ್ಗದ ಗಾಂಧಿ ಸರ್ಕಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ. ಮುಂಜಾನೆ ಇಡೀ ಊರು ಇನ್ನು ನಿದ್ರೆಯಲ್ಲಿದ್ದಾಗ, ಸೈಕಲ್ ಬೆಲ್ ಸದ್ದು ಮಾಡಿಕೊಂಡು ಬರುತ್ತಿದ್ದ ಆ ಹುಡುಗ ಮಳೆ, ಚಳಿ, ಬಿಸಿಲು ಎನ್ನದೆ ಮನೆ-ಮನೆಗೆ ಪತ್ರಿಕೆ ಹಂಚುತ್ತಿದ್ದ. ಆತನ ಹೆಸರು ಲಕ್ಷ್ಮಣ್.
ಆಗ ಯಾರಿಗೂ ಗೊತ್ತಿರಲಿಲ್ಲ, ಪತ್ರಿಕೆ ಹಂಚುತ್ತಿದ್ದ ಅದೇ ಹುಡುಗ ಮುಂದೊಂದು ದಿನ ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ರಂಗದ ಎಲ್ಲಾ ಹಂತಗಳನ್ನು ದಾಟಿ, ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಇಂದು, ಜೂನ್ 1, 2026. ‘ಚಿರ ಯುವಕ’ ಲಕ್ಷ್ಮಣ್ ಅವರಿಗೆ 60 ನೇ ಹುಟ್ಟುಹಬ್ಬದ ಸಂಭ್ರಮ. 1983ರಿಂದ 2026ರವರೆಗೆ – ಸುದೀರ್ಘ 43 ವರ್ಷಗಳ ಕಾಲ ಶಾಯಿ, ಕಾಗದ ಮತ್ತು ಸೈಕಲ್ ಜೊತೆಗಿನ ಅವರ ಅವಿನಾಭಾವ ಸಂಬಂಧಕ್ಕೆ ಸಲ್ಲಿಸುವ ಗೌರವ ನಮನವಿದು.
ಬಾಲ್ಯ ಮತ್ತು ಶಿಕ್ಷಣದ ಹಿನ್ನೆಲೆ :
ಲಕ್ಷ್ಮಣ್ ಅವರು 01-06-1966 ರಂದು ಹಿರಿಯೂರು ತಾಲ್ಲೂಕಿನ ಬಂಡ್ಲಾರಹಟ್ಟಿಯಲ್ಲಿ ಕೃಷಿಕ ದಂಪತಿಗಳ ಮಗನಾಗಿ ಜನಿಸಿದರು. ಇವರ ಆರಂಭಿಕ ಶಿಕ್ಷಣ ಬಂಡ್ಲಾರಹಟ್ಟಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (1 ರಿಂದ 4ನೇ ತರಗತಿ) ನಡೆಯಿತು. ನಂತರ 5 ರಿಂದ 7ನೇ ತರಗತಿಯನ್ನು ಹಾಗೂ 8 ರಿಂದ 10ನೇ ತರಗತಿಯವರೆಗಿನ ಪ್ರೌಢಶಾಲಾ ಶಿಕ್ಷಣವನ್ನು ಮರಡಿಹಳ್ಳಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಗಿಸಿದರು. 1983ರಲ್ಲಿ ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರು.
ಓದು + ದುಡಿಮೆ = ಲಕ್ಷ್ಮಣ್ ಫಾರ್ಮುಲಾ :
ಲಕ್ಷ್ಮಣ್ ಅವರ ಬದುಕಿನ ಸೂತ್ರವೇ ಓದು ಮತ್ತು ದುಡಿಮೆಯ ಸಮ್ಮಿಲನವಾಗಿತ್ತು. 1983-84 ಮತ್ತು 84-85 ರಲ್ಲಿ ಎಸ್‌ಜೆಎಂ ಸಂಜೆ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡಿದರು. ಹಗಲಿಡೀ ಪತ್ರಿಕೆ ಹಂಚುವುದು, ರಾತ್ರಿ ಕಾಲೇಜಿಗೆ ಹೋಗುವುದು ಇವರ ದಿನಚರಿಯಾಗಿತ್ತು. 1985ರಲ್ಲಿ ಕಬೀರಾನಂದ ಸ್ವಾಮಿ ದೈಹಿಕ ಶಿಕ್ಷಣ ಕಾಲೇಜಿನಲ್ಲಿ ಸಿಪಿಇಡಿ ತರಬೇತಿ ಪಡೆದರು. ವಿಶೇಷವೆಂದರೆ, ಅದೇ ವರ್ಷ ಇವರ ಬದುಕಿನಲ್ಲಿ ‘ಪತ್ರಿಕೆ ಹಂಚಿಕೆ’ಯ ಜೊತೆಗೆ ‘ಸುದ್ದಿ ಹಂಚಿಕೆ’ಯೂ ಆರಂಭವಾಯಿತು!
1986ರಲ್ಲಿ ಎಸ್‌ಜೆಎಂ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಆಗಲೇ ಪ್ರಜಾವಾಣಿಯ ಅಂದಿನ ವರದಿಗಾರ ಪಿ.ಆರ್. ನಾರಾಯಣರಾವ್ ಅವರ ಕಚೇರಿ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ‘ಸುದ್ದಿ ಅಂದ್ರೆ ಏನು? ಅದನ್ನು ಹೆಕ್ಕೋದು ಹೇಗೆ?’ ಎಂಬ ಪತ್ರಿಕೋದ್ಯಮದ ಪ್ರಾಥಮಿಕ ಪಾಠಗಳನ್ನು ಕಲಿತದ್ದೇ ಅಲ್ಲಿ. 1983ರಲ್ಲಿ ಪ್ರಜಾವಾಣಿ ವಿತರಕನಾಗಿ ಶುರುವಾದ ಇವರ ಪಯಣ, ಮುಂದೆ ಸಂಯುಕ್ತ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳ ಏಜೆಂಟ್‌ವರೆಗೂ ವಿಸ್ತರಿಸಿತು. ಹಿರಿಯ ಪತ್ರಕರ್ತ ಟಿ.ಕೆ. ಬಸವರಾಜ್ ಅವರ ಒಡನಾಟದಲ್ಲಿ ಇವರಿಗೆ ‘ಸುದ್ದಿಯ ನೈಜ ಮೌಲ್ಯ’ ಅರ್ಥವಾಯಿತು.
ಸತ್ಯಕ್ಕೆ ಬದ್ಧವಾದ ಪತ್ರಿಕೋದ್ಯಮದ ಹಾದಿ :
1990ರಲ್ಲಿ ದಾವಣಗೆರೆ ‘ಹೊಯ್ಸಳ’ ಪತ್ರಿಕೆಯಲ್ಲಿ ಅಧಿಕೃತ ವರದಿಗಾರರಾಗಿ ಕಾರ್ಯ ನಿರ್ವಹಿಸಿದರು. ತಾವು ಬರೆದ ನೈಜ ಸುದ್ದಿಯ ಕಾರಣಕ್ಕಾಗಿ 1992 ಸೆಪ್ಟೆಂಬರ್ 27ರಂದು ಹೋರಾಟಗಾರರಿಂದ ಪ್ರತಿಭಟನೆಯನ್ನು ಎದುರಿಸಬೇಕಾಗಿ ಬಂತು. ಆದರೆ, > ‘ಪತ್ರಕರ್ತನಾದವನು ಸತ್ಯಕ್ಕೆ ಬದ್ಧ, ಸಂಘಟನೆಗಲ್ಲ’ ಎಂದು ನಂಬಿದ ಲಕ್ಷ್ಮಣ್ ಅವರು ಧೃತಿಗೆಡದೆ ಬೀದಿಗೆ ಬಂದು ಸ್ವತಂತ್ರವಾಗಿ ನಿಂತರು.
ಮುಂದೆ 1994ರಲ್ಲಿ ದಾವಣಗೆರೆ ‘ಜನಮಿಡಿತ’ ದಿನಪತ್ರಿಕೆಗೆ ಸುದ್ದಿ ಸಂಪಾದಕರಾದರು. 1995ರಲ್ಲಿ ತಮ್ಮದೇ ಆದ ‘ಲಕ್ಷ್ಮಣ್ ವಾಯ್ಸ್’ ವಾರಪತ್ರಿಕೆಯನ್ನು ಆರಂಭಿಸಿದರು. ಇದು ಮುಂದಿನ ಎರಡೂವರೆ ದಶಕಗಳ ಕಾಲ ಚಿತ್ರದುರ್ಗ ಜಿಲ್ಲೆಯ ಸಾರ್ವಜನಿಕರ ಜನಪ್ರಿಯ ದನಿಯಾಗಿ ಹೊರಹೊಮ್ಮಿತು. ಅಂದಿನಿಂದ ಜಿಲ್ಲೆಯಲ್ಲಿ ಇವರು ‘ಲಕ್ಷ್ಮಣ್ ವಾಯ್ಸ್’ ಎಂದೇ ಚಿರಪರಿಚಿತರಾದರು. ಇವರು ಕೇವಲ ಸುದ್ದಿ ಬರೆದವರಲ್ಲ, ಹೊಸ ಪತ್ರಕರ್ತರನ್ನು ಬೆಳೆಸಿ ಸಂಘಟನೆಯನ್ನು ಕಟ್ಟಿದವರು.
ಸಂಘಟನಾ ಚತುರತೆ ಮತ್ತು ಸಂದ ಪ್ರಶಸ್ತಿಗಳು :
ಪತ್ರಕರ್ತರ ಹಿತರಕ್ಷಣೆಗಾಗಿ ಶ್ರಮಿಸಿದ ಇವರ ಸಂಘಟನಾ ಸೇವೆ ಅಪಾರ:
2002-2008: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ.
2008-2011: ಜಿಲ್ಲಾಧ್ಯಕ್ಷರಾಗಿ ಸೇವೆ. (2013-14ರಲ್ಲಿ ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ಇತಿಹಾಸ ಬರೆದರು).
2011-2014: ಕಾರ್ಯದರ್ಶಿ.
2014-2018: ರಾಜ್ಯ ಪತ್ರಕರ್ತರ ಸಂಘಕ್ಕೆ ನಿರ್ದೇಶಕ.
2018-2021: ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಕೆ.
ಇವರ ಈ ನಿಸ್ವಾರ್ಥ ಸೇವೆಗೆ ರಾಜ್ಯ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿಷ್ಠಿತ ‘ಹೊಂಬಾಳೆ ಪ್ರಶಸ್ತಿ’ ನೀಡಿ ಗೌರವಿಸಿತು. ಹಾಗೆಯೇ, 2023-24ನೇ ಸಾಲಿನಲ್ಲಿ ಜಿಲ್ಲಾಡಳಿತದಿಂದ ಇವರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ಯೂ ಲಭಿಸಿತು. ಇದಲ್ಲದೆ, 2020ರಲ್ಲಿ ಪತ್ರಿಕಾ ವಿತರಕರ ಸಂಘದ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾಗಿ ನೆರವಾದ ಇವರು, ಅದರ ಗೌರವಾಧ್ಯಕ್ಷರಾಗಿ ಅನೇಕ ವಿತರಕರ ಬದುಕಿಗೆ ಬೆಳಕಾಗಿದ್ದಾರೆ.
ಇಂದಿಗೂ ಮುಂಜಾನೆ 2:30ಕ್ಕೆ ಗಾಂಧಿ ಸರ್ಕಲ್ ನಲ್ಲಿ ಪ್ರತ್ಯಕ್ಷ :
ಇದು ಲಕ್ಷ್ಮಣ್ ಅವರ ಜೀವನದ ಅತ್ಯಂತ ಸ್ಫೂರ್ತಿದಾಯಕ ಸಂಗತಿ. ಪ್ರಸ್ತುತ 60 ನೇ ವಯಸ್ಸಿನಲ್ಲೂ, ‘ಕ್ರಾಂತಿ ದೀಪ’ ಪ್ರಾದೇಶಿಕ ದಿನಪತ್ರಿಕೆಯ ಮಾನ್ಯತೆ ಪಡೆದ ಛಾಯಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಾ, ಇಂದಿಗೂ ದಿನಾಲೂ ಮುಂಜಾನೆ 2:30ಕ್ಕೆ ಗಾಂಧಿ ಸರ್ಕಲ್‌ಗೆ ತಲುಪುತ್ತಾರೆ. ಅಲ್ಲಿಗೆ ಬಂದು ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ಪ್ರಾದೇಶಿಕ ಮತ್ತು ಸ್ಥಳೀಯ ಪತ್ರಿಕೆಗಳು ಸೇರಿದಂತೆ ಹಲವು ರಾಜ್ಯ ಮಟ್ಟದ ಪತ್ರಿಕೆಗಳನ್ನು, ಜಿಲ್ಲೆಯ ಮೂಲೆ-ಮೂಲೆಗೂ ಹಾಗೂ ಹೊರಜಿಲ್ಲೆಗಳಿಗೂ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ನಿರ್ವಹಿಸುತ್ತಿದ್ದಾರೆ. ಅವರು ಬಹಳ ಕಷ್ಟಜೀವಿ ಮತ್ತು ಪತ್ರಿಕೋದ್ಯಮದಲ್ಲೇ ಸಂಪೂರ್ಣವಾಗಿ ಮನನ ಆಗಿದ್ದಾರೆ. ಈ ಒಂದು ಸಾಲು ಲಕ್ಷ್ಮಣ್ ಅವರ 43 ವರ್ಷದ ಪತ್ರಿಕಾ ತಪಸ್ಸಿಗೆ ಹಿಡಿದ ಕನ್ನಡಿಯಾಗಿದೆ.
ಲಕ್ಷ್ಮಣ್ ಅಂದರೆ ಒಂದು ‘ಪತ್ರಿಕಾ ವಿಶ್ವವಿದ್ಯಾಲಯ’ :
ವಿತರಕ, ಏಜೆಂಟ್, ವರದಿಗಾರ, ಸುದ್ದಿ ಸಂಪಾದಕ, ಸಂಪಾದಕ, ಸಂಘಟಕ, ಛಾಯಾ ವರದಿಗಾರ – ಹೀಗೆ ಪತ್ರಿಕೋದ್ಯಮದ ಪ್ರತಿಯೊಂದು ಮೆಟ್ಟಿಲುಗಳನ್ನು ಹತ್ತಿ ಇಳಿದವರು ಲಕ್ಷ್ಮಣ್. ಆ ಕಾರಣಕ್ಕಾಗಿಯೇ ಅವರ ಇಡೀ ಬದುಕೇ ಒಂದು ‘ಪತ್ರಿಕಾ ವಿಶ್ವವಿದ್ಯಾಲಯ’. ಬಂಡ್ಲಾರಹಟ್ಟಿಯ ಪುಟ್ಟ ಹುಡುಗ, ಸೈಕಲ್ ತುಳಿದು ಪತ್ರಿಕೆ ಹಾಕುತ್ತಾ, ಚಿತ್ರದುರ್ಗದ ಪತ್ರಿಕಾ ರಂಗದಲ್ಲಿ ಕಠಿಣ ಪರಿಶ್ರಮದಿಂದ ತಾವೇ ಒಂದು ‘ಲಕ್ಷ್ಮಣ್ ರೇಖೆ’ಯಾಗಿ ಬೆಳೆದ ಕಥೆ ಇದು. ಈ ರೇಖೆಯನ್ನು ದಾಟಲು ಯಾರಿಗೂ ಸಾಧ್ಯವಿಲ್ಲ, ಏಕೆಂದರೆ ಇದು ಪ್ರಾಮಾಣಿಕತೆ, ಕಠಿಣ ದುಡಿಮೆ ಮತ್ತು ವೃತ್ತಿ ಬದ್ಧತೆಯಿಂದ ಎಳೆದ ಗೆರೆಯಾಗಿದೆ.
ಜೂನ್ 1, 1966 ರಿಂದ ಜೂನ್ 1, 2026 ರವರೆಗೆ – ಅವರ ಜೀವನದ 60 ವರ್ಷಗಳು. 1983 ರಿಂದ 2026 ರವರೆಗೆ – ಅವರ 43 ವರ್ಷಗಳ ನಿರಂತರ ಪತ್ರಿಕಾ ಸೇವೆ.
ಪತ್ರಕರ್ತರ ಸಂಘ ಎನ್ನುವುದು ಕೇವಲ ಕೆಲವೇ ಜನರಿಗೆ ಸೀಮಿತ ಎಂಬ ಸಿದ್ಧ ಮಾದರಿಯನ್ನು ಧಿಕ್ಕರಿಸಿ, ಅನೇಕ ಹೊಸಬರಿಗೆ ಸದಸ್ಯತ್ವ ನೀಡಿ, ಪದಾಧಿಕಾರಿಗಳನ್ನಾಗಿ ಮಾಡಿದ ಹೆಗ್ಗಳಿಕೆ ಇವರದ್ದು. ಎಲ್ಲರನ್ನು ತಮ್ಮವರೆಂದೇ ಪ್ರೀತಿಸುವ ಇವರ ಉದಾತ್ತ ಗುಣದಿಂದಾಗಿ, ಚಿತ್ರದುರ್ಗದ ಜನತೆಗೆ ‘ಲಕ್ಷ್ಮಣ್ ವಾಯ್ಸ್’ ಎಂದರೇನೆ ಅತ್ಯಂತ ಪ್ರೀತಿ. (ಅವರ ಮೊಬೈಲ್ ಸಂಖ್ಯೆ : 99865 20364 )
ಇಂದು ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ, ಚಿತ್ರದುರ್ಗದ ಇಡೀ ಪತ್ರಿಕಾ ಲೋಕ ಒಕ್ಕೊರಲಿನಿಂದ ಹೇಳುತ್ತಿದೆ: ‘ಹ್ಯಾಪಿ ಬರ್ತ್‌ಡೇ ಲಕ್ಷ್ಮಣ್ ಸರ್. ನೀವು ನಮಗೆ ದಾರಿ ದೀಪ. ನೀವು ನೂರ್ಕಾಲ ಸುಖ-ಸಂತೋಷದಿಂದ ಬಾಳಿ…!’
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
























