ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಪಲ್ಲವಗೆರೆ ಗ್ರಾಮವು ಜೆ.ಎನ್. ಕೋಟೆ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು,
ಚಿತ್ರದುರ್ಗದಿಂದ 23 ಕಿಲೋಮೀಟರ್ ದೂರ ಪೂರ್ವಕ್ಕೆ,
ಚಿತ್ರದುರ್ಗ- ದೊಡ್ಡಸಿದ್ದವ್ವನಹಳ್ಳಿ- ಎಣ್ಣೆಗೆರೆ-ಜೋಡಿಚಿಕ್ಕೇನಹಳ್ಳಿ-ಪಲ್ಲವಗೆರೆ ಮಾರ್ಗದಲ್ಲಿದೆ.

ಈ ಗ್ರಾಮದ ಹಳೆ ಗ್ರಾಮ ನಿವೇಶನವು ಗ್ರಾಮದಿಂದ ಪೂರ್ವಕ್ಕೆ ಅರ್ಧ ಕಿಲೋಮೀಟರ್ ದೂರದಲ್ಲಿತ್ತು ಎಂದು ಹೇಳಲಾಗುತ್ತದೆ.
ಆದರೆ ಹಳೆ ಗ್ರಾಮ ನಿವೇಶನದ ಹೆಸರು ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.
ಇಂದು ಈ ಸ್ಥಳವು ಬೇಚರಾಕ್ ಆಗಿದ್ದು,ಜನವಸತಿ ರಹಿತ ಸ್ಥಳವಾಗಿದೆ.
ಹಳೆ ಗ್ರಾಮ ನಿವೇಶನದ ಜಾಗದಲ್ಲಿ ಮೂಗ ಮಾಳಮ್ಮ ಎಂದು ಹೇಳಲಾಗುವ ವೀರಗಲ್ಲುಗಳನ್ನು ಕಾಣಬಹುದು. ಇವು ವಿಜಯನಗರ ಕಾಲಕ್ಕೆ ಸೇರಿದ್ದು,ಇಬ್ಬರು ವೀರರ ವೀರಗಲ್ಲುಗಳಾಗಿವೆ. ಇದರಲ್ಲಿ ಒಂದು ವೀರಗಲ್ಲು ಗೋವುಗಳನ್ನು ರಕ್ಷಿಸುವಲ್ಲಿ ಹೋರಾಡಿ ಮಡಿದ ವೀರನ ತುರುಗೋಳ್ ವೀರಗಲ್ಲು ಆಗಿದೆ.
ಹೆಸರಿನ ಮೂಲ :
ಪಲ್ಲವಗೆರೆ ಹೆಸರಿನ ಗ್ರಾಮ ಕರ್ನಾಟಕದ ಯಾವ ಕಡೆಯಲ್ಲೂ ಕಂಡು ಬರುವುದಿಲ್ಲ.ಈ ಹೆಸರಿನ ಗ್ರಾಮ ಕರ್ನಾಟಕದಲ್ಲಿ ಇದೊಂದೇ ಆಗಿದೆ.
ಇದರಲ್ಲಿ ಪಲ್ಲವ+ ಕೆರೆ ಎರಡು ಸಂಯೋಜನೆಗೊಂಡು ಪಲ್ಲವಗೆರೆಯಾಗಿದೆ. ಪಲ್ಲವ ಎಂದರೆ ಚಿಗುರೊಡೆ, ಅಂಕುರಿಸು… ಎಂಬ ಅರ್ಥವಿದೆ. ಅಂದರೆ ಇಲ್ಲಿನ ಭೂಪ್ರದೇಶವು ಕೃಷಿ ಯೋಗ್ಯ ಭೂಮಿಯಾಗಿದ್ದು, ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದ ಕಾರಣಕ್ಕೆ ಪಲ್ಲವಗರೆ ಹೆಸರು ಬಂದಿದೆ. ಹಿಂದೆ ಪಲ್ಲವರು ಈ ಭಾಗದಲ್ಲಿ ಆಳ್ವಿಕೆ ನಡೆಸಿದ ಕಾರಣಕ್ಕೂ ಈ ಹೆಸರು ಬಂದಿರಬಹುದು ಎನ್ನಲಾಗುತ್ತದೆ. ಆದರೆ ಈಗಿನ ಗ್ರಾಮದಲ್ಲಿ ಇಂದು ಯಾವ ಕೆರೆಯ ಕುರುಹುಗಳು ಕೂಡ ಕಂಡು ಬರುವುದಿಲ್ಲ. ಹಳೆ ಗ್ರಾಮ ನಿವೇಶನವು ಹಿಂದೆ ಚಿಕ್ಕಮಧುರೆ ಕೆರೆಯ ಮೇಲ್ಭಾಗದಲ್ಲಿ ಇದ್ದ ಕಾರಣ ಹೆಸರಿನಲ್ಲಿ ಕೆರೆ ಇದ್ದಿರಬಹುದು.ಆಡುಭಾಷೆಯಲ್ಲಿ ಜನರು ಇದನ್ನು ಪಲ್ಲೆಗೆರೆ ಎಂದು ಕರೆಯುತ್ತಾರೆ.
ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ, ಒಣ ಭೂ ಪ್ರದೇಶ ಹೊಂದಿದೆ. ಸಜ್ಜನಕೆರೆ,ಜೋಡಿ ಚಿಕ್ಕೇನಹಳ್ಳಿ ಹತ್ತಿರದ ಗ್ರಾಮಗಳಾಗಿವೆ.
ವೀರಗಲ್ಲು :
ಗ್ರಾಮದ ಪೂರ್ವ ಭಾಗದ ಜಮೀನಿನಲ್ಲಿ ಇರುವ ವೀರಗಲ್ಲುಗಳು ಗ್ರಾಮವು ಹಿಂದೆ ಐತಿಹಾಸಿಕವಾಗಿ ಯೋಧರ ಭೂಮಿಯಾಗಿತ್ತು ಎಂದು ನಿರೂಪಿಸುತ್ತದೆ. ಇವು ವಿಜಯನಗರದ ಕಾಲದ ವೀರಗಲ್ಲುಗಳಾಗಿದ್ದು, ಜೊತೆಗೆ 500 ಕ್ಕೂ ಅಧಿಕ ವರ್ಷದ ಇತಿಹಾಸವನ್ನು ಗ್ರಾಮಕ್ಕೆ ನೀಡುತ್ತದೆ. ಈ ವೀರಗಲ್ಲುಗಳಿಗೆ ಸಂರಕ್ಷಣೆಯ ಅಗತ್ಯತೆ ಇರುತ್ತದೆ.ಸ್ಥಳೀಯರು ವಾರ್ಷಿಕವಾಗಿ ಇಲ್ಲೊಂದು ಪೂಜಾ ಕಾರ್ಯಕ್ರಮ ನಡೆಸುತ್ತಾರೆ.
ಗ್ರಾಮದಿಂದ ಪೂರ್ವಕ್ಕೆ ಮೂರು ಕಿಲೋಮೀಟರ್ ದೂರದಲ್ಲಿ ಚಿಕ್ಕಮಧುರೆ ಕೆರೆಯ ಮೇಲ್ಭಾಗದಲ್ಲಿ( ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿ )
ವೀರಗಲ್ಲು ಹಾಗೂ ಮಾಸ್ತಿಗಲ್ಲು ಕಾಣಬಹುದು.
ಇದರಲ್ಲಿ ವೀರನು ಬಾಕು ಹಿಡಿದಿದ್ದು ಯುದ್ಧದಲ್ಲಿ ಹುತಾತ್ಮನಾಗಿದ್ದಾನೆ. ಆತನ ಹೆಂಡತಿಯು ಸತಿಯಾಗಿದ್ದು ಅದರ ಶಿಲ್ಪವು ಭಿನ್ನವಾಗಿದೆ.
ಸ್ಥಳೀಯರು ಇದನ್ನು ಕೋಳಿ ಲಕ್ಕಮ್ಮ ಎಂದು ಹೇಳುತ್ತಾರೆ.
ಇದನ್ನು ಹಿಂದಿನಿಂದಲೂ ಇದೇ ಗ್ರಾಮದವರು ಪೂಜಿಸುತ್ತಾರೆ.
ಗ್ರಾಮದಲ್ಲಿರುವ ದೇವಾಲಯಗಳು :
1.ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯವು ದಕ್ಷಿಣಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯಸ್ವಾಮಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಾಲಯವಿದು.
ಈ ದೇವರ ಉತ್ಸವವನ್ನು ರಾಮನವಮಿಯಂದು ನಡೆಸಲಾಗುತ್ತದೆ.
ಈ ದೇವಾಲಯದ ಎದುರು ಭಾಗದಲ್ಲಿ ಮಾರಮ್ಮ ದೇವಸ್ಥಾನವಿದೆ.
2.ಕರಿಯಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಕರಿಯಮ್ಮ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಗ್ರಾಮದ ಉತ್ತರ ದಿಕ್ಕಿಗೆ ರಸ್ತೆಯಲ್ಲಿ ಮೂಲ ಕರಿಯಮ್ಮ ದೇವಿ ದೇವಾಲಯವಿದ್ದು,
ಗರ್ಭಗೃಹದಲ್ಲಿ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಇಲ್ಲಿ ಪ್ರತಿವರ್ಷ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ 3 ವರ್ಷಕ್ಕೆ ಒಂದು ಬಾರಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ.
3.ಕೊಳಾಳು ಕೆಂಚಾವಧೂತರ ಮಠ :
ಹೊಳಲ್ಕೆರೆ ತಾಲ್ಲೂಕು ಕೊಳಾಳ್ ಕೆಂಚಾವಧೂತರು ಅವಧೂತ ಪರಂಪರೆಯವರಾಗಿದ್ದು, ಅವರ ಶಿಷ್ಯ ವರ್ಗ ಇಲ್ಲೊಂದು ಭಜನಾ ಮಂದಿರ/ಮಠವನ್ನು ನಿರ್ಮಿಸಿದ್ದು ಪ್ರತಿ ಸೋಮವಾರ,ಗುರುವಾರ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಭಜನಾ ಕಾರ್ಯಕ್ರಮ ನಡೆಯುತ್ತದೆ . ಪ್ರತಿ ತಿಂಗಳು ಹುಣ್ಣಿಮೆಯ ದಿನ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸುತ್ತಾರೆ ಹಾಗೂ ಆ ದಿನ ಸಾಮೂಹಿಕ ಅನ್ನದಾಸೋಹ ನಡೆಯುತ್ತದೆ. ಗ್ರಾಮದ ಮಧ್ಯ ಭಾಗದಲ್ಲಿರುವ ಈ ಮಠವು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ.ಇಲ್ಲಿ ಕೆಂಚಾವಧೂತರ ಶಿಲ್ಪ ಹಾಗೂ ಗದ್ದುಗೆ ನಿರ್ಮಿಸಲಾಗಿದೆ.
4.ಮಾರಕ್ಕ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಮಾರಕ್ಕ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















