ಸುದ್ದಿಒನ್,ನವದೆಹಲಿ,ಮೇ.30 : ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾನಿರತ ಶಿಕ್ಷಕರಿಗೆ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಪಾಸ್ ಮಾಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಆದರೆ, ಶಿಕ್ಷಕರಿಗೆ ಕೊಂಚ ನಿರಾಳತೆ ನೀಡಿರುವ ನ್ಯಾಯಾಲಯ, ಪರೀಕ್ಷೆ ತೇರ್ಗಡೆಯಾಗಲು ಈ ಹಿಂದೆ ನೀಡಿದ್ದ ಗಡುವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಅಂಜುಮಾನ್ ಇಶಾತ್ ಇ- ತಲೀಮ್ ಟ್ರಸ್ಟ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವಿವಿಧ ರಾಜ್ಯ ಸರ್ಕಾರಗಳು, ಶಿಕ್ಷಕರ ಸಂಘಟನೆಗಳು ಹಾಗೂ ಶಿಕ್ಷಕರು ಒಟ್ಟು 65 ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಎಲ್ಲಾ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ಮನ್ಮೋಹನ್ ಸಿಂಗ್ ಅವರಿದ್ದ ನ್ಯಾಯಪೀಠವು ವಜಾಗೊಳಿಸಿದೆ. ಅಲ್ಲದೆ, ತನ್ನ ಹಳೆಯ ತೀರ್ಪನ್ನೇ ಎತ್ತಿ ಹಿಡಿದಿದೆ.
ಅರ್ಜಿದಾರರ ವಾದ ಏನಿತ್ತು?
2025ರ ಸೆಪ್ಟೆಂಬರ್ 1ರ ವೇಳೆಗೆ ನಿವೃತ್ತಿಗೆ ಇನ್ನು 5 ವರ್ಷ ಬಾಕಿ ಇರುವ ಶಿಕ್ಷಕರಿಗೂ ಟಿಇಟಿ ಕಡ್ಡಾಯಗೊಳಿಸಲಾಗಿತ್ತು. 2009ರ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ’ (RTE) ಜಾರಿಗೆ ಬರುವ ಮುನ್ನ ಸೇವೆಗೆ ಸೇರಿದ ಶಿಕ್ಷಕರಿಗೂ ಇದರಿಂದ ವಿನಾಯಿತಿ ನೀಡಿರಲಿಲ್ಲ.ಈ ಕಠಿಣ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಶಿಕ್ಷಕರ ಪರವಾಗಿ ಕೋರಲಾಗಿತ್ತು.
ಶಿಕ್ಷಕರ ಮನವಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಶಿಕ್ಷಣದ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದೆ.ಸಂಬಂಧಪಟ್ಟ ಇಲಾಖೆಗಳು ಮತ್ತು ಆಡಳಿತ ಮಂಡಳಿಗಳು ಲಭ್ಯವಿರುವ ಸಮಯ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಶೀಘ್ರವಾಗಿ ಟಿಇಟಿ ಪರೀಕ್ಷೆಗಳನ್ನು ನಡೆಸಬೇಕು. ಶಿಕ್ಷಕರು ಸೇವೆಯಲ್ಲಿ ಮುಂದುವರಿಯಲು ಅನುಕೂಲವಾಗುವಂತೆ ಹಳೆಯ ಗಡುವನ್ನು 2028ರ ಆಗಸ್ಟ್ 31ರವರೆಗೆ ವಿಸ್ತರಿಸಲಾಗುತ್ತಿದೆ” ಎಂದು ನ್ಯಾಯಪೀಠ ತಿಳಿಸಿದೆ.
ಈ ಆದೇಶದಿಂದಾಗಿ RTE ಕಾಯ್ದೆಗಿಂತ ಮುಂಚಿತವಾಗಿ ಕೆಲಸಕ್ಕೆ ಸೇರಿದ ಹಿರಿಯ ಶಿಕ್ಷಕರೂ ಸಹ ಇನ್ನು ಎರಡು ವರ್ಷಗಳ ಒಳಗೆ ಕಡ್ಡಾಯವಾಗಿ ಟಿಇಟಿ ಪರೀಕ್ಷೆಯನ್ನು ಪಾಸ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















