ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳ ಕುರಿತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹಾಗೂ ದಲಿತ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಿಡಿಕಾರಿದರು.
“ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಅದರಲ್ಲಿ ನಮಗೆ ಯಾವುದೇ ಆಸಕ್ತಿ ಇಲ್ಲ. ಕಾಂಗ್ರೆಸ್‌ನ ಸ್ಥಿತಿ ಈಗ ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎಂಬಂತಾಗಿದೆ. ಸಿದ್ದರಾಮಯ್ಯ ಹೋದರೆ ಡಿ.ಕೆ. ಶಿವಕುಮಾರ್ ಬರುತ್ತಾರೆ ಅಷ್ಟೇ. ಇಬ್ಬರಿಂದಲೂ ರಾಜ್ಯಕ್ಕೆ ಯಾವುದೇ ಲಾಭ ಇಲ್ಲ,” ಎಂದು ವ್ಯಂಗ್ಯವಾಡಿದರು.
“ಅತ್ತು ಕರೆದು ಕೊನೆಗೂ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಆದರೆ ಈ ರಾಜಕೀಯ ನಾಟಕಗಳು ಹೆಚ್ಚು ದಿನ ನಡೆಯಲ್ಲ. 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆದ್ದು ಭರ್ಜರಿಯಾಗಿ ಅಧಿಕಾರಕ್ಕೆ ಬರಲಿದೆ,” ಎಂದು ಭವಿಷ್ಯ ನುಡಿದರು.
ಇದೇ ವೇಳೆ ಕಾಂಗ್ರೆಸ್ ದಲಿತ ವಿರೋಧಿ ನೀತಿಯನ್ನು ಟೀಕಿಸಿದ ಅವರು, “ದಲಿತರನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಇವತ್ತು ಸಿಎಂ ಮಾಡುತ್ತೇವೆ, ನಾಳೆ ಮಾಡುತ್ತೇವೆ ಎಂದು ಹೇಳುತ್ತಾ ವರ್ಷಗಳಿಂದ ದಲಿತ ಸಮುದಾಯವನ್ನು ವಂಚಿಸುತ್ತ ಬಂದಿದೆ,” ಎಂದು ಆರೋಪಿಸಿದರು.
“ಕಾಂಗ್ರೆಸ್‌ನ ದಲಿತ ನಾಯಕರಿಗೆ ವರಿಷ್ಠರ ಮುಂದೆ ನಿಂತು ನಮ್ಮನ್ನೂ ಮುಖ್ಯಮಂತ್ರಿ ಮಾಡಿ ಎಂದು ಕೇಳುವ ಧೈರ್ಯವೇ ಇಲ್ಲ. ದಲಿತರಿಗೆ ಕಾಂಗ್ರೆಸ್ ಸಂಪೂರ್ಣ ಅನ್ಯಾಯ ಮಾಡಿದೆ. ಇಷ್ಟೆಲ್ಲಾ ಅವಮಾನವಾದರೂ ಇನ್ನೂ ಅದೇ ಪಕ್ಷದಲ್ಲಿ ಉಳಿಯುವುದು ಯಾಕೆ?” ಎಂದು ಪ್ರಶ್ನಿಸಿದರು.

ಮುಂದುವರಿದು, “ಈ ಬಾರಿಯಾದರೂ ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ, ಸ್ವಾಭಿಮಾನ ಇದ್ದರೆ ಯಾವುದೇ ದಲಿತ ನಾಯಕರು ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಸ್ವೀಕರಿಸಬಾರದು. ಕಾಂಗ್ರೆಸ್ ಮಾಡುತ್ತಿರುವ ನಿರಂತರ ಮೋಸಕ್ಕೆ ದಲಿತ ಸಮುದಾಯ ತಕ್ಕ ಉತ್ತರ ನೀಡಬೇಕು,” ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















