ಸುದ್ದಿಒನ್,ಬೆಂಗಳೂರು,ಮೇ.27 :ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಕ್ಷರಶಃ ರೌದ್ರಾವತಾರ ತಾಳಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮತ್ತೊಂದು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದು, ಮೇ 30ರ ತನಕ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಮೇ 27 ರಂದು ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ’ ಮತ್ತು ‘ಆರೆಂಜ್’ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡದಂತೆ ಹಾಗೂ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.
ಮೇ 28ರ ವರೆಗೆ ಉತ್ತರ ಒಳನಾಡಿನ ಹಲವೆಡೆ ಭೀಕರ ಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ ಬರೋಬ್ಬರಿ 50 ರಿಂದ 60 ಕಿಲೋಮೀಟರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮೇ 27 ರಂದು ಇಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ‘ಆರೆಂಜ್ ಅಲರ್ಟ್’ ಜಾರಿಯಲ್ಲಿದೆ.ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಬೀಸಲಿದ್ದು, ಮೇ 27 ರಂದು ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

ಇತ್ತ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಮುಂದುವರಿಯಲಿದೆ. ಮೇ 26 ರಿಂದ ಮೇ 30ರ ವರೆಗೆ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಜೋರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಇಂದು ಸಂಜೆಯ ವೇಳೆಗೆ ವಾತಾವರಣದಲ್ಲಿ ಭಾಗಶಃ ಮೋಡ ಕವಿಯಲಿದ್ದು, ತಣ್ಣನೆಯ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















