ಸುದ್ದಿಒನ್, ಚಿತ್ರದುರ್ಗ, ಮೇ. 27 : ನಮಗೆ ಕಳೆದ 25 ವರ್ಷಗಳಿಂದಲೂ ಸಿಹಿನೀರಿನ ಬಗ್ಗೆ ಬಹಳ ತೊಂದರೆ ಇತ್ತು, ಮಳೆ ನೀರು ಕೊಯ್ಲು ಮೂಲಕ ನೀರಿನ ಸ್ವಾವಲಂಬನೆ ಸಾಧಿಸಿದ್ದೇವೆ ಎಂದು ಚಿತ್ರದುರ್ಗದ ವಿಪಿ ಬಡಾವಣೆಯ ನಿವಾಸಿ ಶ್ರೀಮತಿ ರೇಖಾ ರಾಜ್ ಕುಮಾರ್ ಅವರು ತಮ್ಮ ಹಳೆಯ ದಿನಗಳ ನೀರಿನ ಸಮಸ್ಯೆಯನ್ನು ನೆನೆದಿದ್ದಾರೆ.
ತಮ್ಮ ಮನೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾದ ಬಗ್ಗೆ ಮಾತನಾಡಿದ ಅವರು, ನಮ್ಮ ಮಾವನವರಾದ ಎಂ. ಕೃಷ್ಣಮೂರ್ತಿ ಶೆಟ್ಟಿ ಅವರು ಜಲ ತಜ್ಞರು ಆದ ದೇವರಾಜ್ ರೆಡ್ಡಿ ಅವರ ಬಗ್ಗೆ ಮತ್ತು ಅವರ ಕಾರ್ಯವೈಖರಿಯ ಬಗ್ಗೆ ತಿಳಿಯಿತು. ಅದಕ್ಕೋಸ್ಕರ ನಾವು ಹೊಸದಾಗಿ ಮನೆ ಕಟ್ಟುವ ಸಂದರ್ಭದಲ್ಲಿ, ಎಲ್ಲಕ್ಕಿಂತ ಮೊದಲು ದೇವರಾಜ್ ರೆಡ್ಡಿ ಅವರನ್ನು ಮನೆಗೆ ಕರೆಸಿದೆವು. ಅವರ ಬಳಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳುವ ಬಗ್ಗೆ ಸಂಪೂರ್ಣವಾಗಿ ಚರ್ಚಿಸಿ, ಸೂಕ್ತ ಪ್ಲಾನ್ ಮಾಡಿಸಿದೆವು” ಎಂದು ರೇಖಾ ಅವರು ವಿವರಿಸಿದರು.

16,000 ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣೆ
ದೇವರಾಜ್ ರೆಡ್ಡಿ ಸರ್ ಅವರ ಪ್ಲಾನ್ ಪ್ರಕಾರ, ನಾವು ಮನೆಯಲ್ಲಿ 16,000 ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹಣಾ ಘಟಕವನ್ನು ಮಾಡಿಸಿದೆವು. ನಮ್ಮ ಮನೆಯ ಅರ್ಧದಷ್ಟು ಆರ್.ಸಿ.ಸಿ ಮೇಲಿನ ಮಳೆನೀರು ಈ ಸಂಗ್ರಹಣಾ ಟ್ಯಾಂಕ್ ಗೆ ಬಂದು ಬೀಳುತ್ತದೆ. ಇನ್ನುಳಿದ ಅರ್ಧದಷ್ಟು ಆರ್.ಸಿ.ಸಿ ಮೇಲಿನ ನೀರೆಲ್ಲವೂ ನೇರವಾಗಿ ಇಂಗುಗುಂಡಿಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದರು.
ವರ್ಷವಿಡೀ ಸಿಗುವ ಸಿಹಿನೀರು; ಬತ್ತದ ಬೋರ್ ವೆಲ್
ಈ ಪದ್ಧತಿಯಿಂದ ಆಗಿರುವ ಪ್ರಯೋಜನಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಅವರು,ಇದರಿಂದ ನಮಗೆ ಎಷ್ಟು ಅನುಕೂಲ ಆಗಿದೆಯೆಂದರೆ, ಕುಡಿಯುವುದಕ್ಕೋಸ್ಕರ ಒಂದು ವರ್ಷದಿಂದ ಒಂದೂವರೆ ವರ್ಷದವರೆಗೂ ನಮಗೆ ಮಳೆನೀರು ಸಿಗುತ್ತದೆ. ಇನ್ನುಳಿದ ಅರ್ಧದಷ್ಟು ನೀರು ಭೂಮಿಯ ಒಳಗಿರುವ ಇಂಗುಗುಂಡಿಗೆ ಹೋಗುವುದರಿಂದ ನಮ್ಮ ಬೋರ್ವೆಲ್ ಎಂದಿಗೂ ಫೇಲ್ಯೂರ್ ಆಗುವುದಿಲ್ಲ. ಪರಿಣಾಮವಾಗಿ, ಕಡು ಬೇಸಿಗೆಯಲ್ಲೂ ಸಹ ನಮಗೆ ನೀರಿನ ಬಗ್ಗೆ ಯಾವುದೇ ರೀತಿಯ ಯೋಚನೆ ಇಲ್ಲದಂತಾಗಿದೆ ಎಂದಿದ್ದಾರೆ.

ಬಿಸ್ಲರಿ ನೀರಿಗಿಂತಲೂ ಮಳೆನೀರು ಶ್ರೇಷ್ಠ ಮಳೆನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟ ರೇಖಾ ರಾಜ್ ಕುಮಾರ್, ಈ ಮಳೆನೀರಿನಿಂದ ಅಡುಗೆ ಮಾಡಿದರೆ ಬೇಳೆ ಮತ್ತು ತರಕಾರಿಗಳೆಲ್ಲವೂ ಬಹಳ ಬೇಗ ಬೇಯುತ್ತವೆ. ನಾವು ಹೊರಗಡೆಯಿಂದ ತರುವ ಬಿಸ್ಲರಿ ನೀರಿನ ಬಾಟಲಿಗೂ ಮತ್ತು ನಮ್ಮ ಮನೆಯ ಮಳೆನೀರಿಗೂ ಬಹಳ ವ್ಯತ್ಯಾಸವಿದೆ. ಬಿಸ್ಲರಿ ನೀರಿನ ಟಿ.ಡಿ.ಎಸ್ (TDS) ಮಟ್ಟ 100 ರ ಆಸುಪಾಸಿನಲ್ಲಿದ್ದರೆ, ನಮ್ಮ ಮಳೆನೀರಿನ ಟಿ.ಡಿ.ಎಸ್ ಕೇವಲ 60 ರಿಂದ 70 ಇರುತ್ತದೆ. ಮಳೆನೀರು ಅಷ್ಟು ಶುದ್ಧ ಹಾಗೂ ಆರೋಗ್ಯಕರವಾಗಿರುತ್ತದೆ ಎಂದು ಗುಣಮಟ್ಟವನ್ನು ಶ್ಲಾಘಿಸಿದರು.
ಸಾರ್ವಜನಿಕರಿಗೆ ಕರೆ ;
ಕೊನೆಯದಾಗಿ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡ ಅವರು, ಆದಷ್ಟು ಎಲ್ಲರೂ ಮಳೆನೀರನ್ನು ವ್ಯರ್ಥ ಮಾಡದೆ, ಈ ರೀತಿಯಾಗಿ ಸಂಗ್ರಹಣೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಇದರಿಂದ ನಾವು ಅಪಾರ ಪ್ರಮಾಣದ ನೀರನ್ನು ಉಳಿಸಬಹುದು. ಹೊಸದಾಗಿ ಮನೆ ಕಟ್ಟುವವರೆಲ್ಲರೂ ತಮ್ಮ ಮನೆಗಳಲ್ಲಿ ಇಂಗುಗುಂಡಿ ಹಾಗೂ ಮಳೆನೀರು ಸಂಗ್ರಹಣೆಯ ಇಂತಹ ಅನುಕೂಲಗಳನ್ನು ಮಾಡಿಕೊಂಡರೆ ದೇಶಕ್ಕೆ ಮತ್ತು ತಮಗೆ ಬಹಳ ಒಳ್ಳೆಯದು ಎಂದು ಕರೆ ನೀಡಿದ್ದಾರೆ. ರೇಖಾ ರಾಜ್ ಕುಮಾರ್ ಅವರ ಈ ಅನುಭವದ ಮಾತುಗಳು ‘ಸುದ್ದಿಒನ್’ ಹಮ್ಮಿಕೊಂಡಿರುವ “ನೀರು ಉಳಿಸಿ, ನೆಲದ ಋಣ ತೀರಿಸಿ” ಅಭಿಯಾನಕ್ಕೆ ದಿಕ್ಸೂಚಿಯಂತಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















