ಸುದ್ದಿಒನ್,ಬೆಂಗಳೂರು,ಮೇ.26: ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಆಸ್ತಿ ದಾಖಲಾತಿಗಳಿಗೆ ಸಂಬಂಧಿಸಿದ ಸೇವೆಗಳನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇ-ಸ್ವತ್ತು 2.0 (e-Swathu 2.0) ತಂತ್ರಾಂಶದ ಮೂಲಕ ವಿವಿಧ ನಮೂನೆಗಳನ್ನು ಪಡೆಯಲು ಹಾಗೂ ಅರ್ಜಿಗಳನ್ನು ಸಲ್ಲಿಸಲು ಇನ್ಮುಂದೆ ಗ್ರಾಮ ಒನ್ (Grama One), ಕರ್ನಾಟಕ ಒನ್ (Karnataka One) ಹಾಗೂ ಬೆಂಗಳೂರು ಒನ್ (Bengaluru One) ಕೇಂದ್ರಗಳಲ್ಲೂ ಅವಕಾಶ ಕಲ್ಪಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಇ-ಸ್ವತ್ತು ಅರ್ಜಿಗಳನ್ನು ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಆಯುಕ್ತಾಲಯದ ಪ್ರಸ್ತಾವನೆಯನ್ನು ಪುರಸ್ಕರಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಈ ಹೊಸ ಆದೇಶವನ್ನು ಜಾರಿಗೊಳಿಸಿದೆ.

ವಿವಿಧ ನಾಗರಿಕ ಸೇವಾ ಕೇಂದ್ರಗಳಲ್ಲಿ ಇ-ಸ್ವತ್ತು ಅರ್ಜಿ ಸಲ್ಲಿಕೆಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಶುಲ್ಕದ ವಿವರ ಹೀಗಿದೆ:
ಗ್ರಾಮ ಒನ್ ಕೇಂದ್ರಗಳು: ಪ್ರತಿ ಅರ್ಜಿಗೆ ರೂ. 45/-
ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳು: ಪ್ರತಿ ಅರ್ಜಿಗೆ ರೂ. 45/- ಹಾಗೂ ಹೆಚ್ಚುವರಿಯಾಗಿ ಪ್ರತಿ ಪುಟದ ಸ್ಕ್ಯಾನಿಂಗ್ ಮತ್ತು ಪ್ರಿಂಟಿಂಗ್ಗಾಗಿ ರೂ. 5/- ನಿಗದಿಪಡಿಸಲಾಗಿದೆ.
ರಾಜ್ಯಪಾಲರ ಆದೇಶದ ಮೇರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಂಟಿ ನಿರ್ದೇಶಕರು ಈ ಆದೇಶವನ್ನು ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ (PDO) ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಇ-ಸ್ವತ್ತು ನಮೂನೆಗಳಿಗಾಗಿ ಪಂಚಾಯಿತಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ತಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರಗಳಲ್ಲೇ ನಿಗದಿತ ಶುಲ್ಕ ನೀಡಿ ಸುಲಭವಾಗಿ ಕೆಲಸ ಮುಗಿಸಿಕೊಳ್ಳಬಹುದಾಗಿದೆ.











