Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೃಹಲಕ್ಷ್ಮಿ ಯೋಜನೆಯ ₹2,000 ಪಡೆಯಲು ಇನ್ಮುಂದೆ ಒನ್-ಟೈಮ್ ಬಯೋಮೆಟ್ರಿಕ್ ಕಡ್ಡಾಯ

---Advertisement---

ಸುದ್ದಿಒನ್,ಬೆಂಗಳೂರು,ಮೇ.26: ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಭಾರಿ ಬದಲಾವಣೆಯೊಂದನ್ನು ತಂದಿದೆ. ಇನ್ಮುಂದೆ ಈ ಯೋಜನೆಯಡಿ ಪ್ರತಿ ತಿಂಗಳು ₹2,000 ಪಡೆಯುತ್ತಿರುವ ಮಹಿಳೆಯರು ಕಡ್ಡಾಯವಾಗಿ ಒನ್-ಟೈಮ್ ಬಯೋಮೆಟ್ರಿಕ್ (One-Time Biometric) ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಯೋಜನೆಯ ದುರ್ಬಳಕೆಗೆ ಬ್ರೇಕ್ ಹಾಕಲು ಹಾಗೂ ಅರ್ಹರಿಗೆ ಮಾತ್ರ ಸರ್ಕಾರದ ಧನಸಹಾಯ ತಲುಪುವಂತೆ ಮಾಡಲು ಇಲಾಖೆ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಫಲಾನುಭವಿಗಳು ತಮ್ಮ ಖಾತೆಯನ್ನು ನವೀಕರಿಸದಿದ್ದರೆ, ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದು ತಕ್ಷಣದಿಂದಲೇ ಸ್ಥಗಿತಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.

ಗೃಹಲಕ್ಷ್ಮಿ ಖಾತೆಗಳ ಮರು ನೋಂದಣಿ ಮತ್ತು ಕೆವೈಸಿ (KYC) ಪ್ರಕ್ರಿಯೆಯನ್ನು ಕಡ್ಡಾಯಗೊಳಿಸುತ್ತಿರುವುದರ ಹಿಂದಿನ ಪ್ರಮುಖ ಕಾರಣಗಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಮಹಿಳೆಯರು ಈಗಾಗಲೇ ಮೃತಪಟ್ಟಿದ್ದರೂ, ಅವರ ಖಾತೆಗಳಿಗೆ ಸದ್ದಿಲ್ಲದೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ.ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ, ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ (Income Tax) ಪಾವತಿದಾರರು ಈ ಯೋಜನೆಯ ಲಾಭ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುತ್ತಿದ್ದಂತೆ, ಕೆಲ ಬ್ಯಾಂಕುಗಳು ಫಲಾನುಭವಿಗಳ ಹಳೇ ಸಾಲದ ಖಾತೆಗೆ ಆ ಹಣವನ್ನು ಕತ್ತರಿಸಿಕೊಳ್ಳುತ್ತಿದ್ದವು. ಶೇಕಡಾವಾರು ಮಹಿಳೆಯರು ತಾವಿಟ್ಟಿದ್ದ ಹಳೆಯ ಮೊಬೈಲ್ ನಂಬರ್ಗಳನ್ನು ಬದಲಾಯಿಸಿದ್ದು, ಇದರಿಂದಾಗಿ ಒಟಿಪಿ (OTP) ಮತ್ತು ಮೆಸೇಜ್ಗಳು ತಲುಪುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಮೊದಲು ನಿಧನರಾದವರ ಹೆಸರಿನಲ್ಲಿ ಹಣ ದುರ್ಬಳಕೆಯಾಗುವುದನ್ನು ತಡೆಯಲು ‘ಜೀವಿತ ಪ್ರಮಾಣ ಪತ್ರ’ (Life Certificate) ಕೇಳಲು ಸರ್ಕಾರ ನಿರ್ಧರಿಸಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಕಾರಣ, ಅದಕ್ಕೆ ಪರ್ಯಾಯವಾಗಿ ಅತ್ಯಂತ ಸರಳವಾದ ಈ ‘ಬಯೋಮೆಟ್ರಿಕ್’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ನಾವು ಸದ್ಯಕ್ಕೆ ಯಾವುದೇ ಫಲಾನುಭವಿಯ ಹೆಸರನ್ನು ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುತ್ತಿಲ್ಲ. ಇದು ಕೇವಲ ಒನ್ ಟೈಮ್ ಬಯೋಮೆಟ್ರಿಕ್ ಪ್ರಕ್ರಿಯೆಯಾಗಿದೆ. ಮಹಿಳೆಯರು ಕೇವಲ ಒಂದು ಬಾರಿ ಕೇಂದ್ರಕ್ಕೆ ಬಂದು ಹೆಬ್ಬೆಟ್ಟಿನ ಗುರುತು ನೀಡಿದರೆ ಸಾಕು, ಹಣ ಎಂದಿನಂತೆ ಬ್ಯಾಂಕ್ ಖಾತೆ ಸೇರಲಿದೆ. ಆದರೆ, ನವೀಕರಣ ಮಾಡದ ಖಾತೆಗಳು ಮಾತ್ರ ಆಟೋಮ್ಯಾಟಿಕ್ ಆಗಿ ರದ್ದಾಗಲಿವೆ” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

Join WhatsApp

Join Now

Join Telegram

Join Now