Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೇಶದಲ್ಲೇ ಮೊದಲು : ಬೆಂಗಳೂರಿನಲ್ಲಿ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಹೈಟೆಕ್ ‘108’ ಕಮಾಂಡ್ ಸೆಂಟರ್ ಲೋಕಾರ್ಪಣೆ

---Advertisement---

ಸುದ್ದಿಒನ್,ಬೆಂಗಳೂರು,ಮೇ.25: ರಾಜ್ಯದ ಜನತೆಗೆ ತುರ್ತು ಸಮಯದಲ್ಲಿ ಅತ್ಯಂತ ಗುಣಮಟ್ಟದ ಹಾಗೂ ಪಾರದರ್ಶಕ ವೈದ್ಯಕೀಯ ಸೇವೆ ತಲುಪಿಸುವ ಧ್ಯೇಯದೊಂದಿಗೆ, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಅತ್ಯಾಧುನಿಕ ‘108’ ಕೇಂದ್ರಿಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಲೋಕಾರ್ಪಣೆಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

2023ರಲ್ಲಿ ತಾವು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ‘108’ ಆ್ಯಂಬುಲೆನ್ಸ್ ಸೇವೆಗಳ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವಿತ್ತು ಹಾಗೂ ಕರೆ ಮಾಡಿದರೆ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೆ ಹಳ್ಳಿಗಳಲ್ಲಿ ಜನ ರಸ್ತೆಯಲ್ಲೇ ತೊಂದರೆ ಅನುಭವಿಸುತ್ತಿದ್ದರು. ಖಾಸಗಿಯವರ ಕೈಯಲ್ಲಿದ್ದ ಈ ಜೀವ ರಕ್ಷಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ, ಸಂಪೂರ್ಣವಾಗಿ ಸರ್ಕಾರದ ಅಧೀನಕ್ಕೆ ತರಬೇಕೆಂಬ ತಮ್ಮ ದೊಡ್ಡ ಕನಸು ಸರ್ಕಾರದ ಬಜೆಟ್ ಅನುದಾನದೊಂದಿಗೆ ಇಂದು ನನಸಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಇನ್ನು ಮುಂದೆ ಆ್ಯಂಬುಲೆನ್ಸ್ಗಳಲ್ಲಿರುವ ಎಂಡಿಟಿ ತಂತ್ರಜ್ಞಾನ ಮತ್ತು ಸಂಪೂರ್ಣ ತಾಂತ್ರಿಕ ಮೇಲ್ವಿಚಾರಣೆಯನ್ನು ಸರ್ಕಾರದ ಕಡೆಯಿಂದಲೇ ನೇರವಾಗಿ ಮಾನಿಟರಿಂಗ್ ಮಾಡಲಾಗುವುದು. ಖಾಸಗಿಯವರ ಮೇಲಿನ ಅವಲಂಬನೆಯನ್ನು ಮುಕ್ತಾಯಗೊಳಿಸಲಾಗಿದ್ದು, ಸಾರ್ವಜನಿಕರ ಪ್ರತಿಯೊಂದು ಮಾಹಿತಿಯ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಲು ಇಲಾಖೆ ಸರ್ವಸನ್ನದ್ಧವಾಗಿದೆ. ಕೇವಲ ತಂತ್ರಜ್ಞಾನವನ್ನಷ್ಟೇ ಬದಲಾಯಿಸದೆ, ರಾಜ್ಯದ 3600 ಜನರಿಗೆ ಆರೋಗ್ಯ ಇಲಾಖೆಯಿಂದಲೇ ನೇರ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟು, ಆ ಕುಟುಂಬಗಳ ಬದುಕಿಗೆ ಆಸರೆಯಾಗಿರುವ ತೃಪ್ತಿ ತಮಗಿದೆ ಎಂದು ಸಚಿವರು ವಿವರಿಸಿದ್ದಾರೆ. ಆರೋಗ್ಯ ಇಲಾಖೆಯ ಜವಾಬ್ದಾರಿಯನ್ನು ಹೊತ್ತ ಈ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಬರೀ ಭರವಸೆಗಳನ್ನು ನೀಡದೆ, ಜನಸಾಮಾನ್ಯರ ಆರೋಗ್ಯ ಹಕ್ಕನ್ನು ಎತ್ತಿಹಿಡಿಯುವ ಇಂತಹ ಹತ್ತಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದಾಗಿ ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿಯೊಬ್ಬ ಬಡವನಿಗೂ ಅತ್ಯುನ್ನತ ವೈದ್ಯಕೀಯ ಸೇವೆ ಸಿಗುವಂತೆ ಮಾಡಲು ಮತ್ತಷ್ಟು ಘನ ಯೋಜನೆಗಳೆಡೆಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಸ್ತೆ ಅಪಘಾತಗಳು, ಹೆರಿಗೆ ಅಥವಾ ಹೃದಯರೋಗದಂತಹ ಕ್ಲಿಷ್ಟ ಸಂದರ್ಭಗಳಲ್ಲಿ ‘ಗೋಲ್ಡನ್ ಅವರ್’ ಚಿಕಿತ್ಸೆ ಜೀವ ಉಳಿಸಲು ಅತ್ಯಂತ ನಿರ್ಣಾಯಕವಾಗಿದ್ದು, ಇಂತಹ ತುರ್ತು ಸಂದರ್ಭದಲ್ಲಿ ಶೇ.80 ರಷ್ಟು ಜನರನ್ನು ಬದುಕಿಸಲು ಈ ನೂತನ ತಂತ್ರಜ್ಞಾನದ ಕೇಂದ್ರ ನೆರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು. ಸಾರ್ವಜನಿಕರು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚಕ್ಕೆ ಹೆದರಿ ತೊಂದರೆಗೆ ಸಿಲುಕುವ ಬದಲು, ಧೈರ್ಯವಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಸರ್ಕಾರಿ ಆಸ್ಪತ್ರೆಗಳಿಗೆ ಬರಬೇಕು ಎಂದು ಕರೆ ನೀಡಿದ ಅವರು, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಜನರಲ್ಲಿ ಪ್ರಾಮಾಣಿಕವಾಗಿ ಮನವಿ ಮಾಡಿದರು.

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಶಾಸಕರಾದ ಸುರೇಶ್ ಕುಮಾರ್, ಪ್ರಿಯಾಕೃಷ್ಣ ಹಾಗೂ ಇಲಾಖೆಯ ಪ್ರಧಾನ ಕಾರ್ಯದರ್ಶಿ ರುತ್ವಿತ್ ರಂಜನ್, ಕಮಾಂಡ್ ಕಂಟ್ರೋಲ್ ಸೆಂಟರ್ನ ಮುಖ್ಯ ಕಾರ್ಯನಿರ್ವಾಹಕ ವಿಪುಲ್ ಬನ್ಸಾಲ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

Join WhatsApp

Join Now

Join Telegram

Join Now