Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗ್ರಾಮೀಣ ಜನತೆಗೆ ನೆಮ್ಮದಿಯ ಸುದ್ದಿ : ಇನ್ಮುಂದೆ ಆಸ್ತಿ ದಾಖಲೆ ಪಡೆಯುವುದು ಮತ್ತಷ್ಟು ಸುಲಭ

---Advertisement---

ಸುದ್ದಿಒನ್,ಬೆಂಗಳೂರು,ಮೇ.24: ಗ್ರಾಮೀಣ ಭಾಗದ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಸುಲಭವಾಗಿ ಪಡೆಯುವಂತಾಗಲು ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಹಾಗೂ ಜನಪರ ನಿರ್ಧಾರವನ್ನು ಕೈಗೊಂಡಿದೆ.

ಇತ್ತೀಚೆಗಷ್ಟೇ ಜಾರಿಗೆ ತರಲಾಗಿದ್ದ ‘ಇ-ಸ್ವತ್ತು 2.0’ ತಂತ್ರಾಂಶ ಮತ್ತು ಅದರ ನಿಯಮಾವಳಿಗಳಲ್ಲಿ ಸಾರ್ವಜನಿಕರಿಗೆ ಎದುರಾಗುತ್ತಿದ್ದ ಪ್ರಮುಖ ನ್ಯೂನತೆ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರ ಈಗ ಸಂಪೂರ್ಣವಾಗಿ ಸರಿಪಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ‘ಇ-ಸ್ವತ್ತು 2.0’ ತಂತ್ರಾಂಶದ ಪ್ರಗತಿ ಪರಿಶೀಲನೆಗಾಗಿ ವಿಶೇಷ ಸಭೆ ನಡೆಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಗಳಲ್ಲಿ ಕ್ರಾಂತಿಕಾರಕ ಮಾರ್ಪಾಡುಗಳನ್ನು ತರುವ ಮೂಲಕ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ.

ಈ ಹಿಂದೆ ಕಂದಾಯ ಇಲಾಖೆಯ ಅಧಿಕೃತ ದಾಖಲೆಗಳಿದ್ದರೂ ಸಹ ಇ-ಸ್ವತ್ತಿನಲ್ಲಿ ನಮೂನೆಗಳನ್ನು ಪಡೆಯಲು ಸಾರ್ವಜನಿಕರು ಹೈರಾಣಾಗುತ್ತಿದ್ದರು. ಆದರೆ ಇನ್ಮುಂದೆ ಈ ತೊಂದರೆ ಇರುವುದಿಲ್ಲ. ಕರ್ನಾಟಕ ಭೂ-ಕಂದಾಯ ಅಧಿನಿಯಮದಡಿ ವಿತರಿಸಲಾದ ಹಕ್ಕುಪತ್ರಗಳು, ಮನೆದಳ ಮತ್ತು ಕಣಮನೆ ಪ್ರಮಾಣ ಪತ್ರಗಳನ್ನು ಬಳಸಿಕೊಂಡು ನೇರವಾಗಿ ನಮೂನೆಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಸೂಕ್ತ ನೋಂದಾಯಿತ ದಾಖಲೆಗಳಿಲ್ಲದ ಕಾರಣ ಇ-ಸ್ವತ್ತು ವ್ಯಾಪ್ತಿಯಿಂದಲೇ ಹೊರಗುಳಿದಿದ್ದ ಕೃಷಿ ಭೂಮಿಯ ಮೂಲ ಮಾಲೀಕರ ಕಟ್ಟಡಗಳು, ಸರ್ಕಾರಿ ವಸತಿ ಯೋಜನೆಗಳಡಿ ನಿರ್ಮಾಣವಾದ ಮನೆಗಳು, ಗ್ರಾಮ ಠಾಣಾದಲ್ಲಿನ ನಿವೇಶನಗಳು ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಮಂಜೂರಾದ ಆಸ್ತಿಗಳಿಗೂ ಇ-ಸ್ವತ್ತು 2.0 ತಂತ್ರಾಂಶದ ಮೂಲಕ ನಮೂನೆ ವಿತರಿಸಿ, ಅವುಗಳನ್ನು ಗ್ರಾಮ ಪಂಚಾಯಿತಿಯ ತೆರಿಗೆ ವ್ಯಾಪ್ತಿಗೆ ತರಲು ಸರ್ಕಾರ ಹಸಿರು ನಿಶಾನೆ ತೋರಿದೆ.

ಇದಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ವಿಲೇವಾರಿ ಮಾಡದೆ ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುವ ನೀತಿಗೂ ಸರ್ಕಾರ ಕಟ್ಟುನಿಟ್ಟಿನ ಬ್ರೇಕ್ ಹಾಕಿದೆ. ಅರ್ಜಿಗಳ ಇತ್ಯರ್ಥಕ್ಕಾಗಿ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಾದ ಕಾಲಮಿತಿಯನ್ನು ನಿಗದಿಪಡಿಸಲಾಗಿದ್ದು, ಒಂದು ವೇಳೆ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ತಂತ್ರಾಂಶದಲ್ಲೇ ನೇರವಾಗಿ ‘ಸ್ವಯಂಚಾಲಿತ ಅನುಮೋದನೆ’ (Auto Approval) ಆಗುವಂತಹ ಅತ್ಯಾಧುನಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದೇ ವೇಳೆ ಸಾರ್ವಜನಿಕರು ತಮ್ಮ ಆಸ್ತಿಗೆ ಹೊಸದಾಗಿ ‘ನಮೂನೆ-11ಬಿ’ ಪಡೆಯಲು ಎದುರಿಸುತ್ತಿದ್ದ ಕಾಲಮಿತಿಯ ಸಮಸ್ಯೆಯನ್ನು ಮನಗಂಡು, ಮೇಲ್ಮನವಿ ಸಲ್ಲಿಸುವ ಅವಧಿಯನ್ನು 30 ಸೆಪ್ಟೆಂಬರ್, 2026ರ ವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಸರ್ಕಾರದ ಈ ಐತಿಹಾಸಿಕ ಬದಲಾವಣೆಗಳಿಂದಾಗಿ ಗ್ರಾಮೀಣ ಭಾಗದ ಲಕ್ಷಾಂತರ ಜನಸಾಮಾನ್ಯರು ಕಚೇರಿಗಳಿಗೆ ಅಲೆಯುವುದು ತಪ್ಪಲಿದ್ದು, ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now