ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್
ತುಮಕೂರು ಜಿಲ್ಲೆಯ ತಿಪಟೂರು ಮತ್ತು ತುರುವೇಕೆರೆ ತಾಲೂಕುಗಳಲ್ಲಿ ಹೊಯ್ಸಳರ ಕಾಲದಲ್ಲಿ ಹಲವಾರು ದೇವಾಲಯಗಳು ನಿರ್ಮಾಣವಾಗಿವೆ.
ಅದರಲ್ಲಿ ಪ್ರಮುಖವಾಗಿರುವುದು ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿಯ ವಿಘ್ನಸಂತೆ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ. ತ್ರಿಕೂಟಾಚಲವಾಗಿರುವ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವು ವಾಸ್ತು ದೃಷ್ಟಿಯಿಂದ ಪ್ರಮುಖವಾಗಿದ್ದು ಈ ಭಾಗದ ದೇವಾಲಯಗಳಲ್ಲೇ ವಿಶೇಷವಾದ ಸ್ಥಾನವನ್ನು ಪಡೆದಿದೆ.
ತುರುವೇಕೆರೆಯಿಂದ 18 ಕಿ ಮೀ ಮತ್ತು ತಿಪಟೂರಿನಿಂದ 17 ಕಿ ಮೀ ದೂರದಲ್ಲಿರುವ ವಿಘ್ನಸಂತೆ ಗ್ರಾಮವನ್ನು ಇಲ್ಲಿನ ಶಾಸನಗಳಲ್ಲಿ ‘ಇಗಣಸಂತೆ’ , ‘ಶ್ರೀ ವಿಜಯಗೋಪಾಲಪುರ’ ಎಂಬುದಾಗಿ ಉಲ್ಲೇಖಿಸಲಾಗಿದೆ.
ಗ್ರಾಮದ ಮಧ್ಯದಲ್ಲಿ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯವಿದೆ.
ಹೊಯ್ಸಳರ ಕಾಲಕ್ಕೆ ಒಂದು ಅಗ್ರಹಾರವಾಗಿದ್ದ ವಿಘ್ನಸಂತೆಯಲ್ಲಿನ ಲಕ್ಷ್ಮೀನರಸಿಂಹ ದೇವಾಲಯವನ್ನು ಕ್ರಿ ಶ 1286 ರಲ್ಲಿ ಹೊಯ್ಸಳ ಮೂರನೇ ನರಸಿಂಹನ ಅಧಿಕಾರಿಗಳಾದ, ಮಲ್ಲಿದೇವನ ಮಕ್ಕಳಾದ ಅಪ್ಪಯ್ಯ, ಗೋಪಾಲ ಮತ್ತು ಮಾಧವರು ಅರಸನಿಂದ ಇಗಣಸಂತೆಯನ್ನು ಪಡೆದು ದೇವಾಲಯ ನಿರ್ಮಿಸಿದ್ದಾಗಿ ಇಲ್ಲಿನ ಶಾಸನದಿಂದ ತಿಳಿಯುತ್ತದೆ.
ಇದೇ ಗ್ರಾಮದಲ್ಲಿ ಹೊಯ್ಸಳರ ಕಾಲದ್ದೇ ಆದ ಬನಶಂಕರಿ ದೇವಾಲಯವು ಸಹ ಇದೆ.
ಉತ್ತರಾಭಿಮುಖವಾಗಿರುವ ಲಕ್ಷ್ಮೀನರಸಿಂಹ ದೇವಾಲಯವು ಒಳಭಾಗದಲ್ಲಿ ಮೂರು ಗರ್ಭಗುಡಿ , ಶುಕನಾಸಿ, ನವರಂಗವನ್ನು ಒಳಗೊಂಡಿದ್ದರೆ ಹೊರಭಾಗದಲ್ಲಿ ಮುಖಮಂಟಪ ಮತ್ತು ಮುಖ್ಯ ಗರ್ಭಗುಡಿಯ ಮೇಲೆ ಶಿಖರವನ್ನು ಹೊಂದಿದೆ. ದೇವಾಲಯವು ತ್ರಿಕೂಟಾಚಲವಾಗಿದ್ದರೂ ಸಹ ಎಡ ಮತ್ತು ಬಲ ಭಾಗದ ಗರ್ಭಗುಡಿಗಳ ಮೇಲೆ ಶಿಖರಗಳು ನಿರ್ಮಾಣವಾಗಿಲ್ಲ. ಮುಖ್ಯ ಗರ್ಭಗುಡಿಯಲ್ಲಿ ಪ್ರಧಾನ ದೇವತೆಯಾಗಿ ಏಳು ಅಡಿ ಎತ್ತರದ ಕೇಶವನ ಮೂರ್ತಿಯಿದೆ. ಪದ್ಮ, ಶಂಖ, ಚಕ್ರ ಮತ್ತು ಗದಾಧಾರಿಯಾದ ಮೂರ್ತಿಯ ಇಕ್ಕೆಲಗಳಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಶಿಲ್ಪಗಳಿವೆ. ಮೂರ್ತಿಯ ಹಿಂಭಾಗದ ಮಕರ ತೋರಣದಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆಗಳಿವೆ. ಪೀಠದಲ್ಲಿ ಗರುಡನ ಶಿಲ್ಪವಿದೆ. ಶುಕನಾಸಿಯ ದ್ವಾರದ ಲಲಾಟದಲ್ಲಿ ಲಕ್ಷ್ಮೀನಾರಾಯಣ ಕೆತ್ತನೆಯಿದ್ದರೆ ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬು ಶಿಲ್ಪವಿದೆ.
ಕೇಶವನೇ ಇಲ್ಲಿನ ಪ್ರಧಾನ ದೇವತೆಯಾಗಿದ್ದರೂ ಸಹ ಈ ದೇವಾಲಯವು ಪ್ರಸಿದ್ಧಿಯಾಗಿರುವುದು ಎಡಭಾಗದ ಗರ್ಭಗುಡಿಯಲ್ಲಿರುವ ಲಕ್ಷ್ಮೀನರಸಿಂಹನ ಮೂರ್ತಿಯಿಂದಾಗಿ. ಈ ವಿಗ್ರಹವು ಆರು ಅಡಿ ಎತ್ತರವಿದ್ದು ಗರುಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ನರಸಿಂಹ ಸ್ವಾಮಿಯು ಕುಳಿತ ಭಂಗಿಯಲ್ಲಿದ್ದು ಲಕ್ಷ್ಮಿಯು ಸ್ವಾಮಿಯ ಎಡ ತೊಡೆಯ ಮೇಲೆ ಕುಳಿತಿದ್ದಾಳೆ. ನರಸಿಂಹನು ಚಕ್ರ, ಪದ್ಮ, ಗದೆ ಮತ್ತು ಶಂಖವನ್ನು ಹಿಡಿದು ಕುಳಿತಿದ್ದಾನೆ. ಮೂರ್ತಿಯ ಹಿಂಭಾಗದ ಮಕರ ತೋರಣವು ಬಹಳ ಸುಂದರವಾಗಿದ್ದು ಇಲ್ಲಿಯೂ ಸಹ ದಶಾವತಾರದ ಕೆತ್ತನೆಯಿದೆ. ಗರ್ಭಗುಡಿಯ ದ್ವಾರದ ಲಲಾಟದಲ್ಲಿ ಯೋಗನರಸಿಂಹ ಬಿಂಬವಿದೆ.
ಬಲಗಡೆಯ ಗರ್ಭಗುಡಿಯಲ್ಲಿ ಸುಂದರವಾದ ವೇಣುಗೋಪಾಲನ ಮೂರ್ತಿಯಿದೆ. ಗರುಡ ಪೀಠದ ಮೇಲೆ ತಮಾಲ ವೃಕ್ಷದ ಕೆಳಗೆ ವೇಣುಗೋಪಾಲನು ಕೊಳಲನ್ನು ಊದುತ್ತ ನಿಂತಿದ್ದರೆ ಸುತ್ತಲೂ ಗೋವುಗಳು , ದೇವತೆಗಳು, ಚಾಮರಧಾರಿಣಿಯರು, ಋಷಿಗಳು , ದೇವಿಯರು ಮೈಮರೆತು ಕೊಳಲಿನ ಗಾನವನ್ನು ಕೇಳುತ್ತ ನಿಂತಂತೆ ಚಿತ್ರಿಸಲಾಗಿದೆ. ಮೂರ್ತಿಯ ಮಕರ ತೋರಣದಲ್ಲಿಯೂ ದಶಾವತಾರದ ಕೆತ್ತನೆಗಳಿವೆ. ದೇವಾಲಯದ ಮೂರೂ ಗರ್ಭಗುಡಿಗಳ ಎರಡೂ ಬದಿ ವೈಷ್ಣವ ದ್ವಾರಪಾಲಕರಿರುವರು.
ನವರಂಗದಲ್ಲಿ ತಿರುಗಣಿ ಯಂತ್ರದಲ್ಲಿ ತಯಾರಿಸಿದ ನಾಲ್ಕು ಸುಂದರವಾದ ಕಂಬಗಳಿವೆ. ಉಂಗುರಾಕಾರದ ರಚನೆಗಳ ಮಧ್ಯೆ ಮಣಿ ಮಾಲೆಗಳ ಸೂಕ್ಷ್ಮ ಕೆತ್ತನೆಗಳಿವೆ. ನವರಂಗದಲ್ಲಿ ಒಂಭತ್ತು ಅಂಕಣಗಳಿದ್ದು ಛಾವಣಿಯಲ್ಲಿ ಸುಂದರವಾದ ಪದ್ಮ ವಿತಾನವಿದೆ. ಹೊಯ್ಸಳ ಶಿಲ್ಪದ ಮೇರು ಕೃತಿಗಳಂತೆ ತೋರುವ ಗಣಪತಿ ಮತ್ತಿ ಮಹಿಷಾಸುರಮರ್ದಿನಿ ಮೂರ್ತಿಗಳನ್ನು ನವರಂಗದಲ್ಲಿ ಕಾಣಬಹುದು.
ದೇವಾಲಯದ ಪ್ರವೇಶಕ್ಕೆ ಎರಡು ಕಂಬಗಳ ಆಧಾರವಿರುವ ಮುಖಮಂಟಪವಿದೆ. ಸುತ್ತಲೂ ಕಕ್ಷಾಸನವಿದೆ. ಬೆಳವಾಡಿ ವೀರನಾರಾಯಣ ದೇವಾಲಯದಲ್ಲಿ ಇದ್ದಂತೆ ಇಲ್ಲಿಯೂ ಸಹ ಮುಖಮಂಟಪದ ಎದುರಿಗೆ ಎರಡು ಸುಂದರವಾದ ಆನೆಗಳ ಶಿಲ್ಪಗಳಿವೆ.
ದೇವಾಲಯದ ಹೊರಗೋಡೆಗಳಲ್ಲಿ ಭಿತ್ತಿ ಶಿಲ್ಪಗಳು ಇಲ್ಲದಿದ್ದರೂ ಕುಡ್ಯಸ್ತಂಭಗಳ ರಚನೆಗಳಿವೆ. ಅವುಗಳ ಮಧ್ಯೆ ಪದ್ಮ ಮಾದರಿಯ ವೃತ್ತಾಕಾರದ ಅಲಂಕಾರಿಕ ರಚನೆಗಳಿವೆ. ಮುಖ್ಯ ಗರ್ಭಗುಡಿಯ ಮೇಲೆ ಇರುವ ಶಿಖರವು ಅತ್ಯಂತ ಆಕರ್ಷಕವಾಗಿದ್ದು ಪೂರ್ತಿಯಾಗಿ ಅಲಂಕೃತವಾಗಿದೆ. ದೇವಾಲಯದ ಗೋಡೆಗಳು ಶಿಲ್ಪರಹಿತವಾಗಿದ್ದರೂ ಸಹ ಶಿಖರವನ್ನು ಇಷ್ಟೊಂದು ಸೂಕ್ಷ್ಮವಾಗಿ ಕಡೆದಿರುವುದು ಇಲ್ಲಿನ ವಾಸ್ತು ವಿಶೇಷವಾಗಿದೆ.
ಶಿಖರದ ಮುಂಭಾಗದ ಶುಕನಾಸದಲ್ಲಿ ವೀರಾಸನದಲ್ಲಿ ಕುಳಿತಿರುವ ಗರುಡನ ಶಿಲ್ಪವು ನಯನಮನೋಹರವಾಗಿದೆ. ಇದು ದೇವಾಲಯದ ಕೆಳಭಾಗದಿಂದ ಕಾಣದಿದ್ದರೂ ಏಣಿ ಹತ್ತಿ ನೋಡಿದಾಗ ಮಾತ್ರ ಇದರ ಸೌಂದರ್ಯ ಕಾಣುತ್ತದೆ. ಶಿಖರದ ಎಲ್ಲಾ ದಿಕ್ಕುಗಳಲ್ಲಿ ಮೇಲಕ್ಕೇರಿದಂತೆ ವಿಗ್ರಹಗಳನ್ನು ಅಳವಡಿಸಿದ್ದು ಅವುಗಳಲ್ಲಿ ಉಗ್ರನರಸಿಂಹ, ಗೋವರ್ಧನಗಿರಿಧಾರಿ, ನೃತ್ಯ ಪಾರ್ವತಿ, ನಾರಾಯಣ, ಯೋಗನರಸಿಂಹ, ವಾಮನ, ತಾಂಡವಶಿವ, ಕಾಳಿಂಗಮರ್ದನ, ವೇಣುಗೋಪಾಲ, ನಾಟ್ಯ ಲಕ್ಷ್ಮಿ, ಸ್ಥಾನಕ ವಿಷ್ಣು, ಪರವಾಸುದೇವ ಮತ್ತು ಮಹಿಷಾಸುರಮರ್ದಿನಿಯರ ಶಿಲ್ಪಗಳು ಮುಖ್ಯವಾಗಿವೆ. ದೇವಾಲಯದ ಎದುರುಗಡೆ ವಿಜಯನಗರ ಕಾಲದಲ್ಲಿ ನಿರ್ಮಾಣವಾದಂತೆ ತೋರುವ ಒಂದು ಗೋಪುರದ ಅಡಿಪಾಯವಿದ್ದು ಶಿಥಿಲವಾಗಿದೆ.
ಒಂದು ಸುಂದರ ಕಲಾಕೃತಿಯಂತೆ ಕಾಣುವ ವಿಘ್ನಸಂತೆಯ ಲಕ್ಷ್ಮೀನರಸಿಂಹ ದೇವಾಲಯವು ಈ ಊರಿನ ಜನರ ಮೆಚ್ಚಿನ ದೇಗುಲವು ಸಹ ಹೌದು. ಕಾಲಕಾಲಕ್ಕೆ ಉತ್ಸವಗಳನ್ನು ಬಹಳ ವಿಜೃಂಭಣೆಯಿಂದ ಇಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಪೂರಕ ಮಾಹಿತಿ : ಶಶಿಧರ. ಎಚ್.ಜಿ. ಹೊಯ್ಸಳರ ವಾಸ್ತು ಶಿಲ್ಪ ಅವಲೋಕನ ಪುಸ್ತಕ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.





















