ಸುದ್ದಿಒನ್,ತುಮಕೂರು,ಮೇ.19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ‘ಸಾಧನಾ ಸಮಾವೇಶ’ವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜಕೀಯ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ನೆರೆದಿದ್ದ ಜನಸಾಗರವನ್ನುದ್ದೇಶಿಸಿ ಮಾತನಾಡಿದ ಸಿಎಂ, ನಮ್ಮ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೂ ಗ್ಯಾರೆಂಟಿ ಯೋಜನೆಗಳನ್ನು ತಲುಪಿಸಿದೆ. ಬಡವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣವೇ ನಮ್ಮ ಮುಖ್ಯ ಗುರಿ. ಆದರೆ ಬಿಜೆಪಿಯವರು ಸಮಾಜದಲ್ಲಿ ಶಾಂತಿ ಕದಡುವ, ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಹಿಂದೂ-ಮುಸ್ಲಿಂ ನಡುವೆ ಗಲಾಟೆ ಸೃಷ್ಟಿಸಿ ಬೇರೆ ರಾಜ್ಯಗಳಲ್ಲಿ ಅಧಿಕಾರ ಹಿಡಿದಿದ್ದಾರೆ. ನರೇಂದ್ರ ಮೋದಿ ಅವರು ಬರೊಬ್ಬರಿ 12 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದರೂ ಅಲ್ಲಿ ಯಾವುದೇ ನೈಜ ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.
ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬೆಲೆ ಏರಿಕೆಯ ಕುರಿತು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, “ಇಂದು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಗಗನಕ್ಕೇರಿದೆ. ಇದನ್ನು ನಾವು ಒಳ್ಳೆಯ ದಿನಗಳು (ಅಚ್ಛೇ ದಿನ್) ಅನ್ನಬೇಕಾ? ಮನ್ಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಇವುಗಳ ಬೆಲೆ ಎಷ್ಟಿತ್ತು, ಈಗ ಎಷ್ಟಾಗಿದೆ ಎಂಬುದನ್ನು ನೀವೇ ಯೋಚಿಸಿ. ಇವತ್ತು ಇಡೀ ದೇಶದ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಲು ಪ್ರಧಾನಿ ಮೋದಿಯವರೇ ನೇರ ಹೊಣೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ದೇಶಾದ್ಯಂತ ದೊಡ್ಡ ಸದ್ದು ಮಾಡಿದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, “ದೇಶದಾದ್ಯಂತ 22 ಲಕ್ಷಕ್ಕೂ ಹೆಚ್ಚು ಯುವ ಜೀವಿಗಳು ನೀಟ್ ಪರೀಕ್ಷೆ ಬರೆದಿದ್ದರು. ಆದರೆ ಪತ್ರಿಕೆ ಲೀಕ್ ಆದ ಕಾರಣ ಮನನೊಂದು ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಭವಿಷ್ಯದ ಜೊತೆ ಆಟವಾಡಿದ ಈ ಹಗರಣ ಹಾಗೂ ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರ ಬೇಜವಾಬ್ದಾರಿತನವೇ ಕಾರಣ” ಎಂದು ಗಂಭೀರ ಆರೋಪ ಮಾಡಿದರು.
ಮೋದಿ ಆಡಳಿತದಲ್ಲಿ ಕೇವಲ ಉದ್ಯಮಿಗಳಿಗೆ ಮಾತ್ರ ಲಾಭವಾಗುತ್ತಿದೆ. 2014 ರಲ್ಲಿ ಅದಾನಿ ಅವರ ಒಟ್ಟು ಆದಾಯ ಎಷ್ಟಿತ್ತು, ಇವತ್ತು ಎಷ್ಟಾಗಿದೆ ಎಂಬುದನ್ನು ಗಮನಿಸಿದರೆ ಯಾರ ವಿಕಾಸವಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದು ಸಿಎಂ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರದ ಮುಂದಿನ ರಾಜಕೀಯ ದಿಕ್ಸೂಚಿಯನ್ನು ಬಿಚ್ಚಿಟ್ಟ ಸಿದ್ದರಾಮಯ್ಯ, “ನಮ್ಮ ಜನಪರ ಯೋಜನೆಗಳನ್ನು ನೋಡಿ ಜನ ನಮಗೆ ಬೆಂಬಲ ನೀಡಲಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲೂ ನಾವು ಮರಳಿ ಅಧಿಕಾರ ಹಿಡಿಯುವುದು ನಿಶ್ಚಿತ. ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಬಾರಿಯೂ ಪ್ರತಿಯೊಬ್ಬರಿಗೂ ಶಕ್ತಿ ತುಂಬುವಂತಹ ಅತ್ಯುತ್ತಮ ಪ್ರಣಾಳಿಕೆಯನ್ನು ಸಿದ್ಧಪಡಿಸಿ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾಳೆಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ತುಂಬುತ್ತಿರುವ ಹೊತ್ತಲ್ಲಿ ಜಿ.ಪರಮೇಶ್ವರ್ ಅವರು ಸರ್ಕಾರದ ಸಾಧನಾ ಸಮರ್ಪಣಾ ಸಮಾವೇಶ ಮತ್ತು ಕಂದಾಯ ಇಲಾಖೆಯ ಕ್ರಾಂತಿಕಾರಿ ಜನೋಪಯೋಗಿ ಕೆಲಸಗಳ ಜನಾರ್ಪಣೆ ಸಮಾವೇಶವನ್ನು ಸ್ವಯಂಸ್ಫೂರ್ತಿಯಿಂದ ತುಮಕೂರಿನಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು.
ಜಿ.ಪರಮೇಶ್ವರ್ ಅವರ… pic.twitter.com/I0gTiGbksg
— Siddaramaiah (@siddaramaiah) May 19, 2026
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













