Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ತವ್ಯಕ್ಕೆ ಕೃತಜ್ಞತೆಯ ನಮನ: ಮಾಜಿ ಎಸ್ಪಿ ಕೆ.ವಿ. ಗಗನ್‌ದೀಪ್‌ಗೆ ಪೊಲೀಸ್ ಕುಟುಂಬದ ಸನ್ಮಾನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 17 : ಚಿತ್ರದುರ್ಗದಲ್ಲಿ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದಾಗ ಕ್ಷಿಷ್ಟಕರ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಸಂತೆಹೊಂಡದಲ್ಲಿ ಬಸ್ ಬಿದ್ದು ಅರವತ್ತು ಜನ ಮೃತಪಟ್ಟಿದ್ದು, ಐಮಂಗಲದಲ್ಲಿ ನಟೋರಿಯಸ್ ಕ್ರಿಮಿನಲ್ ಉಮೇಶ್‍ರೆಡ್ಡಿಯನ್ನು ಬಂಧಿಸಿದ್ದನ್ನು ನೆನಪಿಸಿಕೊಂಡ ಐ.ಪಿ.ಎಸ್. ಅಧಿಕಾರಿ ಕೆ.ವಿ.ಗಗನ್‍ದೀಪ್ ಭಾವುಕರಾದರು.

 

1996 ರಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆಯಿಂದ ಪೊಲೀಸ್ ಇಲಾಖೆಗೆ ನೇಮಕಗೊಂಡವರು ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌರವ ಸಮರ್ಪಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

 

1990 ರಲ್ಲಿ ಪುತ್ತೂರಿನಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿಯಾಗಿದ್ದಾಗ ಅಲ್ಲಿನ ರಕ್ಷಣಾಧಿಕಾರಿ ನನ್ನ ಕೈಗೆ ಫೈಲ್ ಕೊಟ್ಟು ಪೊಲೀಸ್ ಪೇದೆಗಳ ನೇಮಕ ಮಾಡುವಂತೆ ಸೂಚಿಸಿದರು. ಆಗ ನನಗೆ ಭಯವಾಯಿತು. ಬೆಳಗಾಂ, ಬಳ್ಳಾರಿಯಲ್ಲಿಯೂ ಎಸ್ಪಿ. ಆಗಿದ್ದಾಗ ಪೊಲೀಸ್ ಪೇದೆಗಳ ನೇಮಕ ಮಾಡಿದ್ದೇನೆ. ಅದೇ ರೀತಿ 1996 ರಲ್ಲಿ ಚಿತ್ರದುರ್ಗ ಎಸ್ಪಿ. ಆಗಿ ಬಂದಾಗ 250 ಪೇದೆಗಳ ನೇಮಕ ಮಾಡಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಎಲ್ಲಾ ಕಡೆ ಪಾರದರ್ಶಕವಾಗಿ ನೇಮಕ ಮಾಡಿದ್ದೇನೆ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಆಸ್ಪದ ಕೊಟ್ಟಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

 

ಎಸ್ಟಾಬ್ಲಿಷ್‍ಮೆಂಟ್ ಸೆಕ್ಷನ್‍ನವರು ಸರಿಯಾಗಿ ಫೈಲ್‍ಗಳನ್ನು ಪುಟ್‍ಅಪ್ ಮಾಡದಿದ್ದರೆ ಸಿಬ್ಬಂದಿಗಳು ಬಡ್ತಿಯಲ್ಲಿ ಅನ್ಯಾಯಕ್ಕೊಳಗಾಗಬೇಕಾಗುತ್ತದೆ. ಪೊಲೀಸ್ ಪೇದೆಯಿಂದ ಹಿಡಿದು ಉನ್ನತ ಅಧಿಕಾರಿಯವರೆಗೂ ಬಡ್ತಿ ಮುಖ್ಯ. ನಿವೃತ್ತಿಯಾದ ಮೇಲೆ ಬಡ್ತಿಯ ಮಹತ್ವ ಏನು ಎನ್ನುವುದು ಗೊತ್ತಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಎನ್ನುವುದು ಕಠಿಣವಾಗುತ್ತಿದೆ. ಅದೃಷ್ಟವಶಾತ್ ನಾನು ಕೆಲಸ ಮಾಡಿದ ಕಡೆಗೆಲ್ಲಾ ಸಿಬ್ಬಂದಿಗಳ ಹಾಗೂ ಮೇಲಾಧಿಕಾರಿಗಳ ಸಹಕಾರ ಸಿಕ್ಕ ಕಾರಣ ಎಂತಹ ಸಮಸ್ಯೆ ಎದುರಾದರೂ ಧೈರ್ಯವಾಗಿ ನಿಭಾಯಿಸಿದ್ದೇನೆ. 1996 ನೇ ಬ್ಯಾಚ್‍ನವರು ನನ್ನನ್ನು ಆಹ್ವಾನಿಸಿ ಗೌರವಿಸಿದಂತ ಸನ್ನಿವೇಶವನ್ನು ನನ್ನ
ಜೀವನದಲ್ಲಿ ಮತ್ತೊಮ್ಮೆ ನೋಡಲಾರೆ ಎಂದು ಕೃತಜ್ಞತೆ ಸಮರ್ಪಿಸಿದರು.
ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಡಾ.ಬಿ.ಆರ್.ರವಿಕಾಂತೆಗೌಡ ಗೌರವ ಸಮರ್ಪಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ಕೆ.ವಿ.ಗಗನ್‍ದೀಪ್‍ರವರು ಯಾವುದೇ ರಾಜಕೀಯ ಒತ್ತಡ, ಆಸೆ ಆಮಿಷಗಳಿಗೆ ಒಳಗಾಗದೆ ಪಾರದರ್ಶಕವಾಗಿ 250 ಪೊಲೀಸ್ ಪೇದೆಗಳನ್ನು ನೇಮಕ ಮಾಡಿ ಕೈಕೆಳಗಿನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ಕೊಡುತ್ತಿದ್ದರು. ಹುಬ್ಬಳ್ಳಿ-ಧಾರವಾಡದಲ್ಲಿ ಪೊಲೀಸ್ ಕಮೀಷನರ್ ಆಗಿದ್ದಾಗ ಕೆಲವೊಂದು ದಿಟ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆಗ ಇವರ ಮೇಲೆ ಷಡ್ಯಂತ್ರಗಳು ನಡೆದವು ಎನ್ನುವುದನ್ನು ನೆನಪಿಸಿಕೊಂಡರು.

 

ಪ್ರಾಮಾಣಿಕತೆ ಬಾಯಲ್ಲಿದ್ದರೆ ಸಾಲದು. ಜೀವನದಲ್ಲಿ ಅಳವಡಿಕೊಳ್ಳಬೇಕು. ಅಕ್ರಮ ಮದ್ಯೆ ದಂಧೆಯನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಟ್ಟ ಹಾಕಿದ ಯಶಸ್ಸು ಕೆ.ವಿ.ಗಗನ್‍ದೀಪ್‍ರವರಿಗೆ ಸಲ್ಲುತ್ತದೆ. ಅವರ ಪತ್ನಿ ಡಾ.ಎ.ಎಸ್.ವಿಜಯಲಕ್ಷ್ಮಿರವರು ಎಂದಿಗೂ ತಮ್ಮ ಪತಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡವರಲ್ಲ. ಒಬ್ಬ ಪೊಲೀಸ್ ಅಧಿಕಾರಿಗೆ ಬದ್ದತೆಯಿರಬೇಕೆನ್ನುವುದನ್ನು ತಮ್ಮ ನಡವಳಿಕೆಯಲ್ಲಿ ತೋರಿಸಿಕೊಟ್ಟವರು ಕೆ.ವಿ.ಗಗನ್‍ದೀಪ್ ಎಂದು ಶ್ಲಾಘಿಸಿದರು.

 

ಪೊಲೀಸರು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವ ಮೂಲಕ ವ್ಯವಸ್ಥೆ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸಿ ಇಲಾಖೆಯ ಗೌರವವನ್ನು ಎತ್ತಿಹಿಡಿಯುವಂತೆ ಪೊಲೀಸರಿಗೆ ಕರೆ ನೀಡಿದರು.
ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‍ಕುಮಾರ್ ಭಂಡಾರು ಮಾತನಾಡಿ ಅಧಿಕಾರದಲ್ಲಿದ್ದಾಗ ಎಲ್ಲರೂ ಗೌರವಿಸುವುದು ಸಹಜ. ನಿವೃತ್ತಿಯಾದ ನಂತರ ಗೌರವ ಸಿಗುವುದು ತುಂಬಾ ಕಡಿಮೆ. 1996 ರಲ್ಲಿ ಪೇದೆಗಳ ಹುದ್ದೆಗೆ ನೇಮಕಗೊಂಡ ನೀವುಗಳು ಇಷ್ಟೊಂದು ಅಭಿಮಾನಿವಟ್ಟು ಕೆ.ವಿ.ಗಗನ್‍ದೀಪ್‍ರವರನ್ನು ಆಹ್ವಾನಿಸಿ ಸನ್ಮಾನಿಸುತ್ತಿರುವುದನ್ನು ನೋಡಿದರೆ ಅವರ ಕಾಲದಲ್ಲಿ ನೇಮಕ ಎಷ್ಟು ಪಾರದರ್ಶಕವಾಗಿತ್ತೆನ್ನುವುದು ಗೊತ್ತಾಗುತ್ತದೆ. ಒತ್ತಡದ ನಡುವೆ ಕೆಲಸ ಮಾಡುವ ಪೊಲೀಸರಿಗೆ ಇಂತಹ ಸ್ನೇಹ ಸಮ್ಮಿಲನ ಕೂಟ ಅತ್ಯವಶ್ಯಕ. ಇದರಿಂದ ಮನಸ್ಸಿಗೆ ಮನರಂಜನೆ ಸಿಕ್ಕಂತಾಗುತ್ತದೆಂದರು.

 

ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ.ಮಾತನಾಡಿ 1996 ರಲ್ಲಿ ನೇಮಕಗೊಂಡ ನಿಮಗೆಲ್ಲಾ ಬದುಕು ಕೊಟ್ಟ ಕೆ.ವಿ.ಗಗನ್‍ದೀಪ್‍ರವರನ್ನು ಮರೆಯದೆ ಕರೆಸಿ ಸನ್ಮಾನಿಸುತ್ತಿರುವುದನ್ನು ಗಮನಿಸಿದರೆ ನಿಮ್ಮಲ್ಲಿ ಕೃತಜ್ಞತಾ ಭಾವನೆಯಿದೆ ಎನ್ನುವುದು ಗೊತ್ತಾಗುತ್ತದೆ. ಹುಟ್ಟು ಆಕಸ್ಮಿಕ, ಸಾವು ಖಂಡಿತ. ಇವೆರಡರ ನಡುವೆ ಉಳಿಯುವುದೇ ಮಾಡುವ ಒಳ್ಳೆಯ ಕೆಲಸಗಳು. ಕೆ.ವಿ.ಗಗನ್‍ದೀಪ್‍ರವರು ಅಧಿಕಾರದಲ್ಲಿದ್ದಾಗ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು. ನಿವೃತ್ತಿಯ ನಂತರವೂ ಕ್ರೀಯಾಶೀಲರಾಗಿದ್ದಾರೆ. ಇಲಾಖೆಯಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಮುಂದೆ ಗುರಿ, ಹಿಂದೆ ಗುರು ಇದ್ದಾಗ ಮಾತ್ರ ಜೀವನದಲ್ಲಿ ಏನಾದರೂ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲಾ ಹೆಚ್ಚು ರಕ್ಷಣಾಧಿಕಾರಿಗಳಾದ ಡಾ.ಶಿವಕುಮಾರ್ ಆರ್. ಪರಮೇಶ್ವರ ಹೆಚ್. ಡಿವೈಎಸ್ಪಿ. ಉಮೇಶ್ ಈಶ್ವರ್‍ನಾಯ್ಕ, ಡಾ.ಎ.ಎಸ್.ವಿಜಯಲಕ್ಷ್ಮಿ ಗಗನ್‍ದೀಪ್, ಜೈಲರ್ ಸಿದ್ದರಾಮಯ್ಯ ಇವರುಗಳು ವೇದಿಕೆಯಲ್ಲಿದ್ದರು.
1996 ರಲ್ಲಿ ನೇಮಕಗೊಂಡ 250 ಪೊಲೀಸ್ ಪೇದೆಗಳ ಕುಟುಂಬದವರು ಗೌರವ ಸಮರ್ಪಣೆಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...