ಸುದ್ದಿಒನ್,ಚಾಮರಾಜನಗರ,ಮೇ.12: ಇತ್ತೀಚೆಗೆ ನಾಗಮಲೆ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ವನ್ಯಜೀವಿ ಸಂಚಾರವಿರುವ ಎಲ್ಲಾ ಚಾರಣಪಥಗಳನ್ನು (Trekking Trails) ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಚಿರತೆ, ಹುಲಿ, ಆನೆ ಹಾಗೂ ಕರಡಿಗಳ ಓಡಾಟ ಹೆಚ್ಚಿರುವ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಸಾಧ್ಯತೆ ಇರುವ ಎಲ್ಲಾ ಪಥಗಳಲ್ಲಿ ಚಾರಣವನ್ನು ತಕ್ಷಣವೇ ರದ್ದುಗೊಳಿಸಲಾಗಿದೆ. ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (SOP) ಪಾಲಿಸದ ಚಾರಣ ಪಥಗಳಲ್ಲಿ ಚಟುವಟಿಕೆಗಳನ್ನು ಮುಂದುವರಿಸುವಂತಿಲ್ಲ.ಈ ಕುರಿತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈಗಾಗಲೇ ಎರಡು ಪ್ರತ್ಯೇಕ ಅಧಿಕೃತ ಸುತ್ತೋಲೆಗಳನ್ನು ಹೊರಡಿಸಿದ್ದಾರೆ.
ಸಾರ್ವಜನಿಕರ ಮತ್ತು ಚಾರಣಿಗರ ಪ್ರಾಣ ರಕ್ಷಣೆ ನಮ್ಮ ಮೊದಲ ಆದ್ಯತೆ. ಸುರಕ್ಷತಾ ಕ್ರಮಗಳನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳುವವರೆಗೆ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಚಾರಣಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದದಾರೆ.


















