ಚಿತ್ರದುರ್ಗ .ಮೇ.10: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬ ಆಘಾತವಾಗಿದೆ. ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಅಹೋರಾತ್ರಿ ಶ್ರಮಿಸಿದ ಜನಪ್ರಿಯ ನಾಯಕರು ಎಂದು ಕಂಬನಿ ಮಿಡಿದರು.

ಸಚಿವರ ಅಗಲಿಕೆ ಚಿತ್ರದುರ್ಗ ಜಿಲ್ಲೆಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರೊಬ್ಬ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ಅನೇಕ ಕುಂಠಿತಗೊಂಡಿದ್ದ ಯೋಜನೆಗಳಿಗೆ ಚಾಲನೆ ನೀಡಿದ್ದರು. ಜನರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಗುಣ ಅವರಲ್ಲಿತ್ತು. ನನ್ನ ಮತ್ತು ಸುಧಾಕರ್ ಅವರ ನಡುವೆ ದಶಕಗಳ ಕಾಲದ ಒಡನಾಟವಿತ್ತು. ರಾಜಕೀಯ ಮೀರಿ ಅವರು ನನಗೆ ವೈಯಕ್ತಿಕವಾಗಿ ಆಪ್ತರಾಗಿದ್ದರು ಎಂದು ರಘುಮೂರ್ತಿ ಸ್ಮರಿಸಿದರು.

















