ಸುದ್ದಿಒನ್,ಗಂಗಾವತಿ,ಮೇ08: ಹನುಮಂತನ ಜನ್ಮಸ್ಥಳವೆಂದು ಪ್ರಸಿದ್ಧಿ ಪಡೆದಿರುವ ಕಿಷ್ಕಿಂಧಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿಗೆ ಇಂದು ಮುಂಜಾನೆ ಅತ್ಯಂತ ಭಕ್ತಿಭಾವದಿಂದ ವಿಶೇಷ ಸೇವೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಎ.ಎಂ.ಆರ್ (AMR) ಗ್ರೂಪ್ನ ಅಧ್ಯಕ್ಷರಾದ ಡಾ. ಎ. ಮಹೇಶ್ ರೆಡ್ಡಿ ಮತ್ತು ಅವರ ಕುಟುಂಬದವರು ಸ್ವಾಮಿಗೆ ಸುಮಾರು ₹2.5 ಕೋಟಿ ಮೌಲ್ಯದ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಚಿನ್ನದ ಆಭರಣಗಳನ್ನು ಸಮರ್ಪಿಸಿದರು.
ಸಮರ್ಪಿತವಾದ ಆಭರಣಗಳು: ಬಂಗಾರದ ಪ್ರಭಾವಳಿ, ಭವ್ಯವಾದ ಕಿರೀಟ, ಬಂಗಾರದ ಛತ್ರಿ, ಬಂಗಾರದ ಗದೆ.

ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ತಮ್ಮ ಧರ್ಮಪತ್ನಿಯರೊಂದಿಗೆ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪವಿತ್ರ ಅಭಿಷೇಕ ಹಾಗೂ ಪೂಜೆ ಸಲ್ಲಿಸಿದರು.
ಈ ಐತಿಹಾಸಿಕ ಸಂದರ್ಭದಲ್ಲಿ ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹಾಗೂ ಅವರ ಧರ್ಮಪತ್ನಿ ಅರುಣಾ ಲಕ್ಷ್ಮೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗಂಗಾವತಿ ತಹಸಿಲ್ದಾರ್ ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರ್ ವಿಶ್ವನಾಥ್, ಗ್ರೇಡ್ 2 ತಹಶೀಲ್ದಾರ್ ಮಹಾಂತಗೌಡ ಪಾಟೀಲ್, ಮಾಜಿ ಸಂಸದ ಶಿವರಾಮೇಗೌಡ, ಹಾಗೂ ಮಾಜಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ್ ಉಪಸ್ಥಿತರಿದ್ದರು.


















