Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಸ್‌ಬಿಐ ನೌಕರರ ರಾಷ್ಟ್ರವ್ಯಾಪಿ ಮುಷ್ಕರ ಘೋಷಣೆ: ಈ ದಿನಗಳು ಬ್ಯಾಂಕಿಂಗ್ ಸೇವೆಯಲ್ಲಿ ಭಾರಿ ವ್ಯತ್ಯಯ ಸಾಧ್ಯ!

---Advertisement---

 

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೌಕರರು ಮೇ 25 ಮತ್ತು 26ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಸಿಬ್ಬಂದಿ ಕೊರತೆ, ಹೊರಗುತ್ತಿಗೆ ವ್ಯವಸ್ಥೆ, ಪಿಂಚಣಿ ಸಮಸ್ಯೆ ಹಾಗೂ ಕೆಲಸದ ಒತ್ತಡ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಸ್ಟಾಫ್ ಫೆಡರೇಶನ್ (AISBISF) ಈ ಹೋರಾಟಕ್ಕೆ ಮುಂದಾಗಿದೆ.

1947ರ ಕೈಗಾರಿಕಾ ವಿವಾದ ಕಾಯ್ದೆಯಡಿ ವರ್ಕ್‌ಮೆನ್ ವರ್ಗದ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟನೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಸ್‌ಬಿಐ ಶಾಖೆಗಳ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಮುಷ್ಕರದ ಪರಿಣಾಮವಾಗಿ ಗ್ರಾಹಕರು ಸತತ ನಾಲ್ಕು ದಿನ ತೊಂದರೆ ಅನುಭವಿಸಬೇಕಾಗುವ ಸಾಧ್ಯತೆಯೂ ಇದೆ. ಮೇ 23ರಂದು ನಾಲ್ಕನೇ ಶನಿವಾರ ಹಾಗೂ ಮೇ 24ರಂದು ಭಾನುವಾರದ ರಜೆ ಇರುವುದರಿಂದ, ಮೇ 25 ಮತ್ತು 26ರ ಮುಷ್ಕರ ಸೇರಿ ಬ್ಯಾಂಕಿಂಗ್ ಕಾರ್ಯಾಚರಣೆಗಳು ಬಹುತೇಕ ಸ್ಥಗಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

ಮೇ 2ರಂದು ಎಸ್‌ಬಿಐ ಅಧ್ಯಕ್ಷರಿಗೆ ಸಲ್ಲಿಸಿದ ನೋಟಿಸ್‌ನಲ್ಲಿ ಫೆಡರೇಶನ್ ಹಲವು ಗಂಭೀರ ಆರೋಪಗಳನ್ನು ಮಾಡಿದೆ. ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ, ಒಪ್ಪಂದಗಳನ್ನು ಸಮರ್ಪಕವಾಗಿ ಜಾರಿಗೆ ತರಲಾಗುತ್ತಿಲ್ಲ ಹಾಗೂ ಸಿಬ್ಬಂದಿಯ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.ಸಂದೇಶಕರು ಹಾಗೂ ಸಶಸ್ತ್ರ ಕಾವಲುಗಾರರ ನೇಮಕಾತಿ ವರ್ಷಗಳಿಂದ ಸ್ಥಗಿತಗೊಂಡಿದೆ. ಶಾಶ್ವತ ಹುದ್ದೆಗಳನ್ನು ಹೊರಗುತ್ತಿಗೆಗೆ ನೀಡಲಾಗುತ್ತಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಡಿಯಲ್ಲಿ ಉದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದೇ ವೇಳೆ, ಎಸ್‌ಬಿಐನ ಸೂರತ್ ಶಾಖೆಯಲ್ಲಿ ನಡೆದ ದರೋಡೆ ಘಟನೆಯನ್ನು ಉಲ್ಲೇಖಿಸಿರುವ ಸಂಘಟನೆ, ಭದ್ರತಾ ಸಿಬ್ಬಂದಿ ಕೊರತೆ ನೌಕರರು ಮತ್ತು ಗ್ರಾಹಕರ ಸುರಕ್ಷತೆಗೆ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿದೆ.ವೇತನ ಪರಿಷ್ಕರಣೆಯಲ್ಲೂ ಅಸಮಾನತೆ ನಡೆದಿದೆ ಎಂದು ಸಂಘಟನೆ ಆರೋಪಿಸಿದೆ. ಅಧಿಕಾರಿಗಳಿಗೆ ಹೆಚ್ಚಿನ ಲಾಭ ನೀಡಲಾಗಿದ್ದು, ಕಾರ್ಮಿಕ ವರ್ಗದ ಸಿಬ್ಬಂದಿಗೆ ಕಡಿಮೆ ಪ್ರಮಾಣದ ಹೆಚ್ಚಳ ನೀಡಲಾಗಿದೆ ಎಂದು AISBISF ಅಸಮಾಧಾನ ವ್ಯಕ್ತಪಡಿಸಿದೆ.

ಮುಷ್ಕರಕ್ಕೂ ಮುನ್ನ ವಿವಿಧ ಹಂತದ ಪ್ರತಿಭಟನೆಗಳನ್ನು ನಡೆಸಲು ಸಂಘಟನೆ ನಿರ್ಧರಿಸಿದೆ. ಊಟದ ಸಮಯದಲ್ಲಿ ಪ್ರತಿಭಟನೆ, ಮೌನ ಧರಣಿ, ಸಾಮಾಜಿಕ ಜಾಲತಾಣ ಅಭಿಯಾನ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸುವ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.

ಎಸ್‌ಬಿಐ ನೌಕರರ ಈ ರಾಷ್ಟ್ರವ್ಯಾಪಿ ಹೋರಾಟ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಮತ್ತು ಬ್ಯಾಂಕ್ ಆಡಳಿತ ಮಂಡಳಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now