Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ ತಾಲ್ಲೂಕು ಆಡನೂರು ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಆಡನೂರು ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಹೊಳಲ್ಕೆರೆಯಿಂದ 5 ಕಿಲೋ ಮೀಟರ್ (ವಾಯುವ್ಯಕ್ಕೆ ) ದೂರದಲ್ಲಿ ಹೊಳಲ್ಕೆರೆ- ಆಡನೂರು- ಚಿಕ್ಕಜಾಜೂರು ಮಾರ್ಗದಲ್ಲಿದೆ. (ರಾಜ್ಯ ಹೆದ್ದಾರಿ 47 ರಲ್ಲಿ).ತಾಲೂಕಿನ ದೊಡ್ಡ ಪಂಚಾಯಿತಿ ವ್ಯಾಪ್ತಿ ಹೊಂದಿರುವ ಗ್ರಾಮ ಇದಾಗಿದೆ.ಗ್ರಾಮದ ಪೂರ್ವಕ್ಕೆ ಬೃಹತ್ ಕೆರೆಯಿದ್ದು ,ಇದಕ್ಕೆ ಅರಸನಘಟ್ಟ ಬೆಟ್ಟ ಸಾಲಿನ ಮಳೆ ನೀರು ಸೇರಿ ತುಂಬಿದಾಗ ಮುಂದೆ ಹಿರೇಹಳ್ಳಕ್ಕೆ ತಲುಪುತ್ತದೆ.

 

ಹಿಂದೆ ಇಲ್ಲಿ ಯಥೇಚ್ಛ ಸಂಖ್ಯೆಯಲ್ಲಿ ಆಡುಗಳು (ಮೇಕೆಗಳು)ಇದ್ದಿದ್ದರಿಂದ ಆಡಿನ ಊರು ಮುಂದೆ ಆಡನೂರು ಆಗಿದೆ. ಈ ಗ್ರಾಮದಲ್ಲಿ 1964ರಲ್ಲಿ ಬಾಬುರಾವ್ ಮಾಸ್ಟರ್ ರವರಿಂದ ತಾಲೂಕಿನ ಮೊದಲ ಆರೆಸ್ಸೆಸ್ ಶಾಖೆ ಪ್ರಾರಂಭವಾಯಿತು .ಗ್ರಾಮ ಕಾರ್ಯಕರ್ತರನ್ನು ಸೇವಾನಿರತರನ್ನಾಗಿಸಿ ನಮ್ಮ ಕರ್ಮಭೂಮಿ ಮಾಡಿಕೊಂಡು ತಮ್ಮ ಸೇವೆಯನ್ನು ಮಾಡಿದರು ಹತ್ತಾರು ಅಭಿವೃದ್ಧಿ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದರು.

 

ಆಡನೂರು ಗ್ರಾಮವನ್ನು ತಾಲ್ಲೂಕಿನ ದೇವಾಲಯಗಳ ಗ್ರಾಮವೆಂದೇ ಕರೆಯಲಾಗುತ್ತದೆ. 10 ನೇ ಶತಮಾನದಿಂದಲೂ ಈ ಗ್ರಾಮ ಅಸ್ತಿತ್ವದಲ್ಲಿದ್ದು ಇಂದಿಗೂ ತನ್ನ ವೈಶಿಷ್ಟ್ಯತೆ ಉಳಿಸಿಕೊಂಡಿದೆ. ಹಿಂದೆ ಇಲ್ಲಿ 100 ಕ್ಕಿಂತ ಹೆಚ್ಚು ಮಂದಿರಗಳಿದ್ದವಂತೆ.ಆದರೆ ಇಂದು ಅಷ್ಟು ಸಂಖ್ಯೆಯಲ್ಲಿ ಮಂದಿರಗಳಿಲ್ಲ.
ಇಂದು ಇರುವ ದೇವಾಲಯಗಳಲ್ಲಿ ಕೆಲವು ಪ್ರಾಚೀನ ಕಾಲದವಾದರೆ,ಕೆಲವು ಜೀರ್ಣೋದ್ಧಾರಗೊಂಡಿವೆ.ಕೆಲವನ್ನು ಇತ್ತೀಚೆಗೆ ನಿರ್ಮಿಸಲಾಗಿದೆ .ಅವುಗಳಲ್ಲಿ ಬಾಣಲಿಂಗೇಶ್ವರ,ಭೈರಸಿದ್ದೇಶ್ವರ, ಆಂಜನೇಯ,ವೆಂಕಟೇಶ್ವರ(ತಿಮ್ಮಪ್ಪ) ದೇವಾಲಯಗಳು ಪ್ರಮುಖವಾಗಿವೆ.

ಆಡನೂರು ಗ್ರಾಮದ ಮಂದಿರಗಳ ಪರಿಚಯ:

1.ಬಾಣಲಿಂಗೇಶ್ವರ ಮಂದಿರ:

ಆಡನೂರು ಗ್ರಾಮದ ಪಶ್ಚಿಮ ಭಾಗದಲ್ಲಿರುವ ಬಾಣಲಿಂಗೇಶ್ವರ ದೇವಾಲಯವು ಪೂರ್ವಾಭಿಮುಖವಾಗಿದ್ದು, ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ಮಂದಿರವನ್ನು ಕ್ರಿಸ್ತಶಕ ಸುಮಾರು 11- 12 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಕಾಲಾನಂತರ ಮುಸ್ಲಿಂ ದಾಳಿಕೋರರಿಂದ ರಕ್ಷಿಸಲು ಮಣ್ಣಿನಿಂದ ಮುಚ್ಚಲಾಗಿತ್ತು. ನಂತರ 1986-87 ರಲ್ಲಿ ಮಣ್ಣನ್ನು ತೆಗೆದು
ಬಾಣಲಿಂಗೇಶ್ವರ ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರಗೊಳಿಸಿ ಆಧುನಿಕರಿಸಲಾಯಿತು. ಮೂರು ಗರ್ಭಗೃಹಗಳು, ನವರಂಗ ಹಾಗೂ ಮುಖಮಂಟಪಗಳುಳ್ಳ ದೇವಾಲಯ ಇದಾಗಿದೆ. ಮೂರು ಗರ್ಭಗೃಹಗಳ ಈ ದೇವಾಲಯದಲ್ಲಿ ಮುಖ್ಯ ಗರ್ಭಗೃಹವು ಪೂರ್ವಾಭಿಮುಖವಾಗಿದೆ. ಇದರಲ್ಲಿ ಪ್ರಾಚೀನ ಶಿವಲಿಂಗವಿದೆ .ಕಪ್ಪು ಶಿಲೆಯಲ್ಲಿ ಕಡೆಯಲಾದ ಎರಡೂವರೆ ಅಡಿ ಎತ್ತರದ ವಿಶಾಲವಾದ ಹಳೆಯ ಪಾಣಿಪೀಠದ ಮೇಲೆ 1987 ರಲ್ಲಿ ಒಂದೂಕಾಲು ಅಡಿ ಎತ್ತರದ ಶಿವಲಿಂಗವನ್ನು ಮರು ಸ್ಥಾಪಿಸಿದ್ದಾರೆ. ಗರ್ಭಗೃಹದ ಮುಂಬದಿಯ ಅರ್ಧಮಂಟಪದ ಇಕ್ಕೆಲಗಳಲ್ಲಿ ಕಾಳಮ್ಮ ಮತ್ತು ಬಲಕ್ಕೆ ಗಣೇಶನ ಶಿಲ್ಪಗಳನ್ನು ಪ್ರತಿಷ್ಠಾಪಿಸಿದ್ದಾರೆ.ಈ ಶಿಲ್ಪಗಳು ಇತ್ತೀಚಿನವು.ಶಿವಲಿಂಗಕ್ಕೆ ಎದುರಾಗಿ ನವರಂಗದಲ್ಲಿ ನಂದಿಯನ್ನು ಪ್ರತಿಷ್ಟಾಪಿಸಿರುವರು. ದೇವಾಲಯದ ಬಲಭಾಗದಲ್ಲಿ ಕ್ರಿ.ಶ.964 ಕ್ಕೆ ಸೇರಿದ ಹಸಿರುಮಿಶ್ರಿತ ನಾರುಗಲ್ಲಿನಲ್ಲಿ ಕಡೆಯಲಾದ ಶಿಲಾಶಾಸನವಿದೆ.ಶ್ರೀ ಮತ್ ಕನ್ನಯ್ಯ ನೆಂಬುವನು ಆಡನೂರಿನಲ್ಲಿ ತನ್ನ ತಾಯಿ ಬಿಜಯಬ್ಬರಸಿಯ ಕಾಂತೇಶ್ವರನೆಂದು ಮಹೇಶ್ವರ ದೇವರನ್ನು ಪ್ರತಿಷ್ಠೆ ಮಾಡಿ ಅಮೃತರಾಸಿ ಭಟಾರರಿಗೆ ದತ್ತಿಯನ್ನು ಬಿಟ್ಟುದಾಗಿ ಹೇಳಿದೆ.ಇದರಿಂದ ಈ ದೇವಾಲಯ 10 ನೇ ಶತಮಾನದ ನಿರ್ಮಿತಿಯಾಗಿತ್ತು .ಆದರೆ ಇಂದು ಸಂಪೂರ್ಣವಾಗಿ ಜೀರ್ಣೋದ್ಧಾರವಾಗಿದೆ. ಈ ಗ್ರಾಮವನ್ನು ಶಾಸನಗಳಲ್ಲಿ ಆಡನೂರ ಎಂದು ಕರೆದಿವೆ. ಹಾಗೆಯೇ ಇಲ್ಲಿ ಕಲ್ಲೇಶ್ವರ ದೇವಾಲಯವಿದ್ದುದು ಇವುಗಳಿಂದ ತಿಳಿದು ಬರುತ್ತದೆ .ಅವುಗಳ ಪಕ್ಕದಲ್ಲಿ ಮೂರು ವೀರಗಲ್ಲುಗಳಿವೆ.ಇವು ಗೋಗ್ರಹಣಕ್ಕೆ ಸಂಬಂಧಿಸಿದವುಗಳಾಗಿವೆ.

2.ವೆಂಕಟೇಶ್ವರ (ತಿಮ್ಮಪ್ಪ ) ದೇವಾಲಯ :

ಈ ಗ್ರಾಮದ ಪ್ರಸಿದ್ಧ ದೇವಾಲಯಗಳಲ್ಲಿ ವೆಂಕಟೇಶ್ವರ ದೇವಾಲಯವೂ ಒಂದು.ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಾಲಯನ್ನು ಇತ್ತೀಚಿನ ವರ್ಷಗಳಲ್ಲಿ ಕಟ್ಟಲಾಗಿದೆ. ಇದರ ಪಕ್ಕದಲ್ಲಿಯೇ ಲಕ್ಷ್ಮಿ ದೇವಾಲಯವಿದೆ.ಗರ್ಭಗೃಹ ,ಅಂತರಾಳ ,ಸಭಾಮಂಟಪ, ಮಹಾಮಂಟಪಗಳಲ್ಲದೆ ಮುಂಭಾಗದಲ್ಲಿ ಧ್ವಜಸ್ತಂಭ ಹಾಗೂ ದೀಪ ಸ್ತಂಭಗಳನ್ನು ಒಳಗೊಂಡ ವಿಶಾಲವಾದ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದೂವರೆ ಅಡಿ ಎತ್ತರದ ಪೀಠದಲ್ಲಿ ನಾಲ್ಕೂವರೆ ಅಡಿಗಳೆತ್ತರದ ವೆಂಕಟೇಶ್ವರನ ಶಿಲ್ಪವನ್ನು ಪ್ರತಿಷ್ಠಾಪಿಸಿ ಪೂಜಿಸುವರು. ವೆಂಕಟೇಶ್ವರನು ನಾಲ್ಕು ಕೈಗಳಲ್ಲಿ ಶಂಖ ಚಕ್ರ ,ವರದ ಮುದ್ರೆ ಹಾಗೂ ಇನ್ನೊಂದು ಎಡಗೈ ಸೊಂಟದ ಮೇಲೆ ಇಟ್ಟುಕೊಂಡಿರುವನು.ಗರ್ಭಗುಡಿಯ ಬಾಗಿಲುವಾಡದಲ್ಲಿ ವೈಷ್ಣವ ದ್ವಾರಪಾಲಕರಿದ್ದಾರೆ. ದೇವಾಲಯದ ಮುಂಭಾಗದಲ್ಲಿ ಶ್ರೀ ರಾಮ ದೇವಾಲಯವಿದೆ.
ಪಂಚ ಮಂದಿರಗಳ ಕ್ಷೇತ್ರವೆಂದು ಹೇಳಲಾಗುವ ಜಾಗದಲ್ಲಿ ಆಂಜನೇಯ, ಗ್ರಾಮದೇವತೆ ಕರಿಯಮ್ಮ ದೇವಿಯ ದೇವಾಲಯವಿದೆ.ಹತ್ತಿರದಲ್ಲಿ ಹರಳಯ್ಯ ಮಂದಿರವಿದೆ. ಅದರ ಒಳಭಾಗದಲ್ಲಿ
ಬಾಣಲಿಂಗೇಶ್ವರ ದೇವಾಲಯದ ಪಕ್ಕದಲ್ಲಿ ಭೈರಸಿದ್ದೇಶ್ವರ ಮಂದಿರವಿದೆ.
ಆಡನೂರಿನಿಂದ 1 ಕಿ.ಮೀ.ದೂರದಲ್ಲಿ ಬಿಳಿಮಟ್ಟಿ ಎಂಬ ಸಣ್ಣ ಮರಡಿಯ ಮೇಲೆ ಇರುವ ರಂಗನಾಥ ಸ್ವಾಮಿ ಮಂದಿರದ ಬಳಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಪರೇವು ಆಚರಣೆ ಮಾಡಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...