ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯ ಸಾಧಿಸಿ 207 ಸ್ಥಾನಗಳನ್ನು ಗೆದ್ದಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಈ ಜಯದ ಬಳಿಕ ಹೊಸ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ.ಸಾಮಾನ್ಯವಾಗಿ ಅಂತಿಮ ಕ್ಷಣದವರೆಗೂ ಮುಖ್ಯಮಂತ್ರಿಯ ಹೆಸರನ್ನು ರಹಸ್ಯವಾಗಿಡುವ ಬಿಜೆಪಿ, ಈ ಬಾರಿ ಕೂಡ ಅಧಿಕೃತ ಘೋಷಣೆಯನ್ನು ತಡೆಹಿಡಿದಿದೆ. ಆದರೂ ಪಕ್ಷದ ಒಳವಲಯದಲ್ಲಿ ಹೆಸರು ಬಹುತೇಕ ಅಂತಿಮಗೊಂಡಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಇದೆ. ಪಕ್ಷದ ಉನ್ನತ ನಾಯಕತ್ವವೂ ಅವರ ಹೆಸರನ್ನು ಒಪ್ಪಿಕೊಂಡಿದೆ ಎಂದು ತಿಳಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೋಲ್ಕತ್ತಾಗೆ ಭೇಟಿ ನೀಡಿ ನೂತನ ಶಾಸಕರೊಂದಿಗೆ ಸಭೆ ನಡೆಸಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.ಭಾರತೀಯ ಜನತಾ ಪಕ್ಷ ಮೇ 9ರಂದು ಹೊಸ ಸರ್ಕಾರ ರಚನೆಗೆ ಸಜ್ಜಾಗಿದ್ದು, ಅದೇ ದಿನ ಅಧಿಕೃತವಾಗಿ ಮುಖ್ಯಮಂತ್ರಿ ಹೆಸರು ಪ್ರಕಟವಾಗುವ ನಿರೀಕ್ಷೆ ಇದೆ.

ಸುವೇಂದು ಅಧಿಕಾರಿ ರಾಜಕೀಯವಾಗಿ ಅನುಭವಿಗಳಾಗಿದ್ದು, ಈ ಹಿಂದೆ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದರು. ಬಳಿಕ ಬಿಜೆಪಿ ಸೇರಿ, ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದಾರೆ. ನಂದಿಗ್ರಾಮ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಮನಾರ್ಹ ಜಯ ಗಳಿಸಿರುವುದು ಅವರ ಪ್ರಾಬಲ್ಯವನ್ನು ಹೆಚ್ಚಿಸಿದೆ.ಇತ್ತ ಸೋಲಿನ ನಡುವೆಯೂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಬೆಳವಣಿಗೆಗಳು ಬಂಗಾಳ ರಾಜಕೀಯವನ್ನು ಮತ್ತಷ್ಟು ಕಾವು ಹಿಡಿಯುವಂತೆ ಮಾಡಿವೆ.


















