ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆದಿದ್ದು, ಅದರ ಮತ ಎಣಿಕೆ ಇಂದು (ಮೇ 4) ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಜೊತೆಗೆ ಈ ಕ್ಷೇತ್ರದ ಫಲಿತಾಂಶಕ್ಕೂ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ವ್ಯಕ್ತವಾಗಿದೆ.
ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಸಮರ್ಥ್ ಶಾಮನೂರು ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಶ್ರೀನಿವಾಸ್ ದಾಸಕರಿಯಪ್ಪ ಪೈಪೋಟಿ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ಇಬ್ಬರ ನಡುವೆ ಕಠಿಣ ಸ್ಪರ್ಧೆ ನಡೆದಿದ್ದು, ಫಲಿತಾಂಶ ಯಾವ ದಿಕ್ಕಿಗೆ ತಿರುಗಲಿದೆ ಎಂಬುದನ್ನು ಗಮನದಿಂದ ಕಾದು ನೋಡಲಾಗುತ್ತಿದೆ.ಇದೀಗ ಮತ ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಡಿಆರ್‌ಆರ್ ಕಾಲೇಜಿನಲ್ಲಿದ್ದ ಸ್ಟ್ರಾಂಗ್ ರೂಮ್ ತೆರೆಯುವ ವಿಚಾರದಲ್ಲಿ ಗೊಂದಲ ಉಂಟಾಗಿ ವಿವಾದ ಸೃಷ್ಟಿಯಾಗಿದೆ.

ಮತ ಪೆಟ್ಟಿಗೆಗಳನ್ನು ಸಂರಕ್ಷಿಸಲಾಗಿದ್ದ ಸ್ಟ್ರಾಂಗ್ ರೂಮ್‌ಗಳ ಕೀಲಿಗಳು ಲಭ್ಯವಾಗದ ಕಾರಣ ಸಿಬ್ಬಂದಿ ಬೀಗ ಒಡೆದು ಕೊಠಡಿಯನ್ನು ತೆರೆಯಬೇಕಾದ ಪರಿಸ್ಥಿತಿ ಎದುರಾಯಿತು.ಮೂರು ಸ್ಟ್ರಾಂಗ್ ರೂಮ್‌ಗಳ ಕೀಲಿಗಳೂ ನಾಪತ್ತೆಯಾಗಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ.ಇದರಿಂದಲೇ ಉಪಚುನಾವಣೆಯ ಮತ ಎಣಿಕೆಗೆ ಆರಂಭದಲ್ಲೇ ವಿವಾದದ ನೆರಳು ಬೀಳಿದಂತಾಗಿದೆ. ಆದರೂ ಭದ್ರತಾ ಕ್ರಮಗಳ ನಡುವೆ ಮತ ಎಣಿಕೆ ಮುಂದುವರಿದಿದ್ದು, ಮಧ್ಯಾಹ್ನ ವೇಳೆಗೆ ಸ್ಪಷ್ಟ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.


















