ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಸುದ್ದಿಒನ್, ಮೇ. 03 :
ಚಿತ್ರದುರ್ಗ ಕಲ್ಲು ಬಂಡೆಗಳ ಮೇಲೆ ನಿರ್ಮಿಸಲಾದ ಚಿತ್ರದುರ್ಗ ಕೋಟೆಯು 10ನೇ ಶತಮಾನದಿಂದ 18ನೇ ಶತಮಾನದವರೆಗೆ ವಿವಿಧ ರಾಜವಂಶಸ್ಥರಿಂದ (ಚಾಳುಕ್ಯ, ಹೊಯ್ಸಳ, ವಿಜಯನಗರ ನಾಯಕರು) ನಿರ್ಮಿಸಲ್ಪಟ್ಟಿದೆ. ಇದು ಗಟ್ಟಿಯಾದ ಗ್ರಾನೈಟ್ ಮತ್ತು ನೈಸ್ ಬಂಡೆಗಳಿಂದ ಕಟ್ಟಲ್ಪಟ್ಟಿದೆ. ಸುಮಾರು 1500 ಎಕರೆ ಪ್ರದೇಶದಲ್ಲಿ ಹರಡಿದೆ ಮತ್ತು ಏಳುಸುತ್ತಿನ ಕೋಟೆ ಗೋಡೆಗಳನ್ನು ಹೊಂದಿದೆ.

ಚಿತ್ರದುರ್ಗ ಜಿಲ್ಲೆಯು ಡೆಕನ್ ಪ್ರಸ್ಥಭೂಮಿಯ ಪ್ರಾಚೀನ ಶಿಲೆ ಬಂಡೆಗಳ ಮೇಲೆ ನಿರ್ಮಿಸಲಾಗಿದೆ. ಈ ಬಂಡೆಗಳು ಅತ್ಯಂತ ಗಟ್ಟಿಯಾಗಿದ್ದು, ಕೋಟೆಯ ಗೋಡೆಗಳನ್ನು ಈ ಕಲ್ಲುಗಳಿಂದ ನಿರ್ಮಿಸಲಾಯಿತು. ಈ ಪ್ರದೇಶವನ್ನು ಮೊಟ್ಟ ಮೊದಲಿಗೆ 1880 ರಲ್ಲಿ ಬ್ರಿಟೀಷ್ ಭೂವಿಜ್ಞಾನಿಗಳಾದ ರಾಬರ್ಟ್ ಬ್ರೂಸ್ ಪುಟೆ ಎಂಬುವವರಿಂದ ವಿವರವಾಗಿ ಭೂವೈಜ್ಞಾನಿಕ ಅಧ್ಯಯನ ಮಾಡಲಾಗಿದೆ. ನಂತರ ಮೈಸೂರು ಜಿಯಾಲಾಜಿಕಲ್ ಇಲಾಖೆ ಮತ್ತು ಜಿಯಲಾಜಿಕಲ್ ಸರ್ವೇ ಆಫ್ ಇಂಡಿಯಾದಿಂದ ಈ ಪ್ರದೇಶದ ಭೂವಿಜ್ಞಾನ ಸಮೀಕ್ಷೆಯನ್ನು ಮಾಡಲಾಗಿದೆ. ಚಿತ್ರದುರ್ಗದ ಕಲ್ಲಿನ ಕೋಟೆಯು ಭಾರತದ ಅತ್ಯಂತ ಹಳೆಯ ಮತ್ತು ಭದ್ರವಾದ ಬೆಟ್ಟದ ಕೋಟೆಗಳಲ್ಲಿ ಒಂದಾಗಿದೆ. ಇವು ಮುಖ್ಯವಾಗಿ ಗ್ರಾನೈಟ್, ನೈಸ್ ಶಿಲೆಗಳಿಂದ ರಚಿತವಾಗಿದ್ದು, ಸುಮಾರು 2500 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಪ್ರಾಚೀನ ಶಿಲಾ ರಚನೆಗಳಾಗಿವೆ. ಈ ಬೃಹತ್ ಬಂಡೆಗಳು ಭೂಮಿಯ ಇತಿಹಾಸದಲ್ಲಿ ಜ್ವಾಲಾಮುಖಿ ಚಟುವಟಿಕೆಗಳಿಂದಾಗಿ ರೂಪುಗೊಂಡಿದೆ. ಇವುಗಳು ಆರ್ಕಿಯನ್ (ARCHEAN) ಯುಗಕ್ಕೆ ಸೇರಿದ ಭೂಮಿಯ ಮೇಲಿನ ಅತಿ ಹಳೆಯ ಬಂಡೆಗಳಲ್ಲಿ ಒಂದಾಗಿದೆ. ಇದು ಕರ್ನಾಟಕ ಮಧ್ಯಭಾಗದಲ್ಲಿದೆ. ಮತ್ತು ವೇದಾವತಿ ನದಿಯ ಜಲಾನಯನ ಪ್ರದೇಶದಲ್ಲಿ ಈ ಪ್ರದೇಶವು ಸುಮಾರು 3.3 ಶತಕೋಟಿ ವರ್ಷಗಳ ಹಿಂದೆ ಸಾಗರದ ಅಡಿಯಲ್ಲಿತ್ತು ಎಂದು ಭೂವೈಜ್ಞಾನಿಕವಾಗಿ ಹೇಳಲಾಗುತ್ತಿದೆ. ದಶಲಕ್ಷಗಟ್ಟಲೆ ವರ್ಷಗಳು ಭೂಮಿಯ ಒಳಗಿನ ಒತ್ತಡ ಮತ್ತು ಟೆಕ್ಟಾನಿಕ್ ಪ್ಲೇಟುಗಳ ಚಲನೆಯಿಂದಾಗಿ ಸಮುದ್ರದಲ್ಲಿದ್ದ ಈ ಭೂಭಾಗವು ಮೇಲಕ್ಕೆ ಉಬ್ಬಿ ಬಂದು ಹಿಂದಿನ ಕಲ್ಲಿನ ಬೆಟ್ಟಗಳು ಮತ್ತು ಬಯಲುಸೀಮೆಯಾಗಿ ಮಾರ್ಪಟ್ಟಿದೆ.




















