ರಾಜ್ಯದಲ್ಲಿ ಮಹಿಳೆಯರಿಗೆ ಯಶಸ್ವಿಯಾಗಿ ಜಾರಿಯಲ್ಲಿರುವ ಶಕ್ತಿ ಯೋಜನೆಯನ್ನು ಇದೀಗ ಸರ್ಕಾರ ಮತ್ತಷ್ಟು ವಿಸ್ತರಿಸಿದೆ. ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ಮಹಿಳೆಯರು ಮತ್ತು ಬಾಲಕಿಯರು ಉಚಿತ ಬಸ್ ಪ್ರಯಾಣದ ಸೌಲಭ್ಯ ಪಡೆಯುತ್ತಿರುವುದರ ನಡುವೆ, ಇದೀಗ ಸರ್ಕಾರಿ ಶಾಲಾ ಬಾಲಕರಿಗೂ ಉಚಿತ ಪ್ರಯಾಣವನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಆದರೆ ಈ ಸೌಲಭ್ಯ ಎಲ್ಲ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ.

ಸರ್ಕಾರದ ನಿರ್ಧಾರದಂತೆ, ಕೇವಲ KPS (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮಾತ್ರ ಉಚಿತ ಬಸ್ ಸೌಲಭ್ಯ ದೊರೆಯಲಿದೆ. LKG ರಿಂದ ಪಿಯುಸಿ (ದ್ವಿತೀಯ ಪಿಯುಸಿ) ವರೆಗೆ ಓದುತ್ತಿರುವ ಬಾಲಕರಿಗೂ ಈ ಸೌಲಭ್ಯ ಲಭ್ಯವಾಗಲಿದೆ.
ಬಾಲಕರಿಗೂ ಉಚಿತ ಪ್ರಯಾಣ ಕಲ್ಪಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಸರ್ಕಾರಕ್ಕೆ ಹಿಂದೆ ಮನವಿ ಸಲ್ಲಿಸಿತ್ತು. ಆರಂಭದಲ್ಲಿ ಸರ್ಕಾರ ಇದಕ್ಕೆ ಒಲವು ತೋರಿಸದಿದ್ದರೂ, ಇದೀಗ KPS ಶಾಲಾ ಮಕ್ಕಳಿಗೆ ಮಾತ್ರ ಸೀಮಿತವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಶಕ್ತಿ ಯೋಜನೆ 2023ರ ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನೀಡಿದ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾರಿಯಾದ ಈ ಯೋಜನೆಯಡಿ, ರಾಜ್ಯದ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.ಈ ಯೋಜನೆಯಿಂದ ಪ್ರತಿದಿನ ಲಕ್ಷಾಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದು, ಅವರ ಪ್ರಯಾಣ ವೆಚ್ಚ ಕಡಿಮೆಯಾಗಿದೆ. ಸಾರಿಗೆ ಸಂಸ್ಥೆಗಳಿಗೆ ಆಗುವ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದ್ದು, ಯೋಜನೆ ನಿರ್ವಹಣೆ ಸುಗಮವಾಗಿ ನಡೆಯುತ್ತಿದೆ.
ಶಕ್ತಿ ಯೋಜನೆಯ ಈ ಹೊಸ ವಿಸ್ತರಣೆ ವಿದ್ಯಾರ್ಥಿಗಳಿಗೂ ನೆರವಾಗುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಉತ್ತೇಜನ ನೀಡುವ ನಿರೀಕ್ಷೆ ಮೂಡಿಸಿದೆ.



















