ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಸ್ಲಂ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಸಂಘಟಿತರಾಗಿ ಹೋರಾಡಿದಾಗ ಮಾತ್ರ ಬದುಕು ಸುಧಾರಣೆಯಾಗಲಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಕರೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿಬಾಯಿಪುಲೆ ಮಹಿಳಾ ಸಂಘಟನೆಯಿಂದ ಪ್ರವಾಸಿ ಮಂದಿರದಲ್ಲಿ ನಡೆದ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಚಿತ್ರದುರ್ಗದ 12 ಆಯ್ದ ಸ್ಲಂಗಳಲ್ಲಿ 1580 ಕುಟುಂಬಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿದ್ದು, ಇನ್ನು ಒಂದು ವರ್ಷದಲ್ಲಿ ಕನಿಷ್ಟ ಹತ್ತು ಸ್ಲಂಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಸ್ಲಂ ಜನರ ಸಮಸ್ಯೆಗಳನ್ನು ಸಮಾಜದ ಕಳಂಕವೆನ್ನುವಂತೆ ಬಿಂಬಿಸಲಾಗುತ್ತಿದೆ. ಕಳೆದ ಹದಿನೈದು ವರ್ಷಗಳಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಸ್ಲಂ ಜನರ ಸಂವಿಧಾನಬದ್ದ ಹಕ್ಕುಗಳ ಖಾತ್ರಿಗಾಗಿ ಕೆಲಸ ಮಾಡುತ್ತ ಸರ್ಕಾರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡಿದೆ. ಇನ್ನು ಮುಂದೆ ಸಮುದಾಯದ ಸಮಸ್ಯೆಗಳ ಜೊತೆ ವೈಯಕ್ತಿಕ ಸಮಸ್ಯೆಗಳತ್ತ ಗಮನ ಹರಿಸಲಿದೆ ಎಂದು ಹೇಳಿದರು.
2023 ರ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಭರವಸೆಗಳನ್ನು ಈಡೇರಿಸಿಲ್ಲ. ಉಚಿತ ಗ್ಯಾರೆಂಟಿಗಳ ಮೂಲಕ ಯಾಮಾರಿಸುತ್ತಿದೆ. ಸಮಸ್ಯೆಗಳಿಂದ ಹೊರ ಬರಬೇಕಾದರೆ ಮೊದಲು ಸಂಘಟಿತರಾಗುವಂತೆ ಸ್ಲಂ ನಿವಾಸಿಗಳನ್ನು ಎಚ್ಚರಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಕೆ.ರಾಜಣ್ಣ, ಜಿಲ್ಲಾ ಸಂಚಾಲಕಿ ಸುಧಾ ಡಿ. ಸಾವಿತ್ರಿ ಬಾಪುಲೆ ಮಹಿಳಾ ಸಂಘಟನೆಯ ಅಧ್ಯಕ್ಷರು, ಉಪಾಧ್ಯಕ್ಷರು
ಸಮಿತಿ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.



















