ಕೆಲವರು ತಮ್ಮ ಗುರಿಯನ್ನು ಸುಲಭವಾಗಿ ತಲುಪುತ್ತಾರೆ, ಇನ್ನು ಕೆಲವರು ಅರ್ಧ ಹಾದಿಯಲ್ಲೇ ಸೋತು ಸುಣ್ಣವಾಗುತ್ತಾರೆ. ಯಾಕೆ ಹೀಗೆ? ನಿಮ್ಮ ಕನಸುಗಳು ನನಸಾಗುವ ಮುನ್ನವೇ ಕಮರಿ ಹೋಗುತ್ತಿವೆಯೇ? ಹಾಗಿದ್ದರೆ ಇದಕ್ಕೆ ನಿಮ್ಮಲ್ಲಿರುವ ಒಂದು ಮುಖ್ಯ ಅಭ್ಯಾಸವೇ ಕಾರಣವಾಗಿರಬಹುದು ಎನ್ನುತ್ತಾರೆ ಮಹಾನ್ ರಾಜತಾಂತ್ರಿಕ ಆಚಾರ್ಯ ಚಾಣಕ್ಯ.
ನಮ್ಮ ಸುತ್ತಲಿರುವ, ನಮ್ಮೊಂದಿಗೆ ನಗುವ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ಹಿತೈಷಿಯಾಗಿರಲು ಸಾಧ್ಯವಿಲ್ಲ. ನಾವು ಆಡುವ ಮಾತುಗಳನ್ನೇ ಕೆಲವರು ನಮಗೆ ವಿರುದ್ಧವಾಗಿ ಬಳಸಬಹುದು. ಆದ್ದರಿಂದಲೇ ಆಚಾರ್ಯ ಚಾಣಕ್ಯರು, ಬುದ್ಧಿವಂತನಾದವನು ತನ್ನ ನಾಲಿಗೆ ಮತ್ತು ರಹಸ್ಯಗಳ ಮೇಲೆ ಸದಾ ನಿಯಂತ್ರಣ ಹೊಂದಿರಬೇಕು ಎಂದು ಸಲಹೆ ನೀಡಿದ್ದಾರೆ. ಜೀವನದಲ್ಲಿ ಯಶಸ್ಸು ಸಾಧಿಸಲು ಯಾವ 5 ವಿಷಯಗಳನ್ನು ರಹಸ್ಯವಾಗಿಡಬೇಕು ಎಂಬುದರ ವಿವರ ಇಲ್ಲಿದೆ.
ನಿಮ್ಮ ಯೋಜನೆಗಳನ್ನು ಯಾರಿಗೂ ತಿಳಿಸಬೇಡಿ
ಕೆಲಸ ಪೂರ್ಣಗೊಳ್ಳುವ ಮುನ್ನವೇ ಅದರ ಬಗ್ಗೆ ಜಗತ್ತಿಗೆ ಡಂಗುರ ಸಾರಬೇಡಿ. ಜಗತ್ತು ಸದಾ ನಿಮ್ಮ ಫಲಿತಾಂಶವನ್ನು ಗೌರವಿಸುತ್ತದೆಯೇ ಹೊರತು ಯೋಜನೆಗಳನ್ನಲ್ಲ. ನಿಮ್ಮ ದೊಡ್ಡ ಗುರಿ ಅಥವಾ ವ್ಯಾಪಾರದ ಆಲೋಚನೆಗಳನ್ನು ಮೊದಲೇ ಹೇಳಿಕೊಂಡರೆ, ಕೆಲವರು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು ಅಥವಾ ನಿಮ್ಮ ಯೋಜನೆಗಳು ವಿಫಲವಾಗುವಂತೆ ಸಂಚು ರೂಪಿಸಬಹುದು. ಕೆಲಸ ಮುಗಿಯುವವರೆಗೂ ಮೌನವೇ ನಿಮ್ಮ ಶಕ್ತಿಯಾಗಲಿ.
ನಿಮ್ಮ ದೌರ್ಬಲ್ಯಗಳನ್ನು ಬಹಿರಂಗಪಡಿಸಬೇಡಿ
ಮನುಷ್ಯ ತನ್ನ ದೌರ್ಬಲ್ಯಗಳನ್ನು (Weakness) ಎಂದಿಗೂ ಇತರರ ಮುಂದೆ ಪ್ರದರ್ಶಿಸಬಾರದು. ಜಗತ್ತು ಯಾವಾಗಲೂ ನಿಮ್ಮ ದುರ್ಬಲ ಸ್ಥಾನದ ಮೇಲೆಯೇ ಪ್ರಹಾರ ಮಾಡುತ್ತದೆ. ನಿಮ್ಮಲ್ಲಿ ಯಾವುದೇ ಭಯ ಅಥವಾ ಕೊರತೆಯಿದ್ದರೆ, ಅದನ್ನು ಇತರರಿಗೆ ಹೇಳುವ ಬದಲು ಅದನ್ನು ಸುಧಾರಿಸಿಕೊಳ್ಳಲು ಗಮನ ಕೊಡಿ. ನಿಮ್ಮ ದೌರ್ಬಲ್ಯಗಳನ್ನು ಧೈರ್ಯವಾಗಿ ಬದಲಾಯಿಸಿಕೊಳ್ಳಿ.
ನಿಮ್ಮ ಆರ್ಥಿಕ ಸ್ಥಿತಿಯನ್ನು ಪ್ರದರ್ಶಿಸಬೇಡಿ
ಹಣ ಗಳಿಸುವುದು ಎಷ್ಟು ಕಷ್ಟವೋ, ಅದನ್ನು ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟ. ನಿಮ್ಮ ಶ್ರೀಮಂತಿಕೆ ಅಥವಾ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸದಾ ಪ್ರದರ್ಶನ ಮಾಡುವುದರಿಂದ ಇತರರ ಅಸೂಯೆ ಮತ್ತು ನಕಾರಾತ್ಮಕ ದೃಷ್ಟಿ ನಿಮ್ಮ ಮೇಲೆ ಬೀಳುತ್ತದೆ. ನಿಜವಾದ ಸಮೃದ್ಧಿ ಇರುವುದು ಸರಳತೆಯಲ್ಲಿಯೇ ಹೊರತು ಅನಗತ್ಯ ಪ್ರದರ್ಶನದಲ್ಲಲ್ಲ.
ಕುಟುಂಬದ ಆಂತರಿಕ ಕಲಹಗಳನ್ನು ಹಂಚಿಕೊಳ್ಳಬೇಡಿ
ಮನೆಯ ಗುಟ್ಟು ರಂಪಾಟವಾಗಬಾರದು. ಮನೆಯ ಸಮಸ್ಯೆಗಳು ನಾಲ್ಕು ಗೋಡೆಗಳಿಂದ ಹೊರಬೀಳುತ್ತಿದ್ದಂತೆ, ಸಮಾಜಕ್ಕೆ ಅದು ಕೇವಲ ಚರ್ಚೆಯ ವಿಷಯವಾಗಿ ಬದಲಾಗುತ್ತದೆ. ಜನರು ಸತ್ಯಕ್ಕಿಂತ ಹೆಚ್ಚಾಗಿ ಅದಕ್ಕೆ ಮಸಾಲೆ ಸವರಿ ಮಾತನಾಡುತ್ತಾರೆ. ಬುದ್ಧಿವಂತ ವ್ಯಕ್ತಿ ಕುಟುಂಬದ ಸಮಸ್ಯೆಯನ್ನು ಎಲ್ಲರ ಮುಂದೆ ಹರಡುವುದಿಲ್ಲ, ಬದಲಿಗೆ ಮನೆಯವರೊಂದಿಗೆ ಕುಳಿತು ಪರಿಹರಿಸಿಕೊಳ್ಳುತ್ತಾನೆ.
ನಿಮಗಾದ ಅಪಮಾನವನ್ನು ಎಲ್ಲರ ಮುಂದೆ ಹೇಳಿಕೊಳ್ಳಬೇಡಿ
ಆಚಾರ್ಯ ಚಾಣಕ್ಯರ ಪ್ರಕಾರ, ತನಗಾದ ಅಪಮಾನವನ್ನು ಸದಾ ನೆನಪಿಸಿಕೊಂಡು ಕೊರಗುವವನು ದುಃಖಿಯಾಗಿ ಉಳಿಯುತ್ತಾನೆ. ಆದರೆ ಅದನ್ನೇ ಸವಾಲಾಗಿ ಸ್ವೀಕರಿಸುವವನು ವಿಜಯಿಯಾಗುತ್ತಾನೆ. ಯಶಸ್ವಿ ಜನರು ತಮಗಾದ ಅಪಮಾನದ ಕಥೆಯನ್ನು ಎಲ್ಲರಿಗೂ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳುವುದಿಲ್ಲ, ಬದಲಿಗೆ ತಮ್ಮ ಯಶಸ್ಸಿನ ಮೂಲಕವೇ ಅದಕ್ಕೆ ಉತ್ತರ ನೀಡುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














