Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲೂಕು ಇಸಾಮುದ್ರ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಚಿತ್ರದುರ್ಗದಿಂದ ವಾಯುವ್ಯಕ್ಕೆ 35 ಕಿಲೋಮೀಟರ್ ದೂರವಿರುವ ಇಸಾಮುದ್ರ ಗ್ರಾಮವು ,ಚಿತ್ರದುರ್ಗ- ಭರಮಸಾಗರ-ಇಸಾಮುದ್ರ- ಕಾಲ್ಗೆರೆ ಮಾರ್ಗದಲ್ಲಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಚೀನ ಮಂದಿರಗಳನ್ನು ಹೊಂದಿರುವ ಗ್ರಾಮ ಇಸಾಮುದ್ರ ಆಗಿದ್ದು ,ಈ ಗ್ರಾಮವು ಚಾರಿತ್ರಿಕವಾಗಿ ಅತ್ಯಂತ ಪ್ರಸಿದ್ಧವಾದ ಸ್ಥಳ ವಾಗಿದೆ.ಇಲ್ಲಿನ ಶಾಸನಗಳಲ್ಲಿ ಹೇಳುವಂತೆ ಇಸಾಮುದ್ರ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಲ್ಲಿ ಪ್ರಮುಖ ಧಾರ್ಮಿಕ ಮತ್ತು ಶಿಕ್ಷಣ ಕೇಂದ್ರ ಶೈಕ್ಷಣಿಕ ಕೇಂದ್ರವಾಗಿತ್ತು .ಅಲ್ಲದೆ ಇಲ್ಲಿನ ದೇವಾಲಯಗಳು ಕೂಡ ಅಷ್ಟೇ ಪ್ರಾಚೀನ ವಾಗಿದ್ದವೆಂಬುದು ದಾಖಲೆಗಳಿಂದ ತಿಳಿದುಬರುತ್ತದೆ.

 

ಸ್ಥಳ ನಾಮ: ಇಸಾಮುದ್ರ ಎಂಬ ಹೆಸರು ಹೇಗೆ ಬಂತೆಂಬುದರ ಬಗೆಗೆ ಸ್ಪಷ್ಟ ಆಕರಗಳು ದೊರೆಯುವುದಿಲ್ಲ. ಆದರೆ ಕೆಲವು ಅಭಿಪ್ರಾಯಗಳಂತೆ, ಹಿಂದೆ ಇದಕ್ಕೆ ವಿಷ ಸಮುದ್ರ ವೆಂದು ಹೆಸರು ಇದ್ದಿತಂತೆ. ಜನಪದರ ಬಾಯಿಯಲ್ಲಿ ವಿಷಸಮುದ್ರವು ಇಸಾಮುದ್ರವಾಗಿದೆ .ಅಲ್ಲದೆ ಈಗಲೂ ಈ ಭಾಗದಲ್ಲಿ ಜನರು ವಿಷವನ್ನು ಇಸಾ ಎಂದು ಹೇಳುವುದನ್ನು ಗಮನಿಸಬಹುದಾಗಿದೆ. ಇನ್ನೊಂದು ಅಭಿಪ್ರಾಯದಂತೆ ಈ ಗ್ರಾಮದ ಬಳಿ ಕೆರೆ ಇದೆ. ಈ ಕೆರೆಯ ವಿಸ್ತಾರ ಮತ್ತು ಆಳವನ್ನು ಕಂಡು ಆಡಿದ ಉದ್ಗಾರದ ಮಾತು ಈ ಸಮುದ್ರ ಎಂದು.ಇದು ಇಸಾಮುದ್ರ ಆಯಿತೆಂದು ಹೇಳಲಾಗುತ್ತದೆ .ಇದಕ್ಕೆ ಉದಾಹರಣೆಯಾಗಿ ವಿಜಯನಗರ ಕಾಲದಲ್ಲಿ ನಿರ್ಮಾಣವಾದ ಅನೇಕ ಕೆರೆಗಳನ್ನು ಹಾಗೂ ಕೆರೆ ಬಳಿ ಇರುವ ಗ್ರಾಮಗಳನ್ನು ಸಮುದ್ರಗಳ ಹೆಸರಿನಿಂದ ಕರೆಯಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ನೂರಾರು ಈಶ್ವರ ಮಂದಿರಗಳಿರುವ ಕಾರಣಕ್ಕೆ ನೂರಾರು ಲಿಂಗಮುದ್ರೆ ಕಲ್ಲುಗಳು ಊರಿನ ತುಂಬೆಲ್ಲಾ ಇದ್ದ ಕಾರಣ ಈಶಮುದ್ರೆ ಮುಂದೆ ಇಸಾಮುದ್ರ ಆಗಿದೆ ಎಂದು ಹೇಳಲಾಗುತ್ತದೆ.

 

ಇಸಾಮುದ್ರ ಗ್ರಾಮದಲ್ಲಿ ಮೂರು ರಾಷ್ಟ್ರಕೂಟ ಹಾಗೂ ಒಂದು ಕಲ್ಯಾಣ ಚಾಲುಕ್ಯರ ಕಾಲದ ಶಾಸನಗಳಿವೆ. ರಾಷ್ಟ್ರಕೂಟ ಕಾಲದ ಶಾಸನಗಳು ಚಿತ್ರದುರ್ಗ ತಾಲೂಕಿನಲ್ಲಿ ಒಂದೇ ಕಡೆ ಹೆಚ್ಚು ದೊರೆಯುತ್ತಿರುವುದು ಈ ಗ್ರಾಮದಲ್ಲಿ ಎಂಬುದು ಗಮನಿಸಬೇಕಾದ ಸಂಗತಿ. ಕಲೆ ಮತ್ತು ವಾಸ್ತುಶಿಲ್ಪ ದೃಷ್ಟಿಯಿಂದಲೂ ತಾಲೂಕಿನಲ್ಲಿ ಅತ್ಯಂತ ಪ್ರಾಚೀನ ದೇವಾಲಯಗಳನ್ನು ಹೊಂದಿರುವ ಗ್ರಾಮ ಇದಾಗಿದೆ .ದೇಗುಲಕ್ಕೆ ಇಟ್ಟಿಗೆ ಬಳಸಿರುವುದು ದೇವಾಲಯ ಪ್ರಾಚೀನತೆಯನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಇಲ್ಲಿರುವ ಶಾಸನಗಳು ದೇವಾಲಯದ ಪ್ರಾಚೀನತೆಗೆ ಹಿಡಿದ ಕೈಗನ್ನಡಿಗಳಾಗಿವೆ.ಈ ಗ್ರಾಮದಲ್ಲಿ ಕಲ್ಲೇಶ್ವರ,ಭೋಗೇಶ್ವರ, ರಾಮೇಶ್ವರ… ಮುಖ್ಯವಾಗಿವೆ. ಒಟ್ಟಿನಲ್ಲಿ ಈ ಗ್ರಾಮದಲ್ಲಿ 101 ಶಿವಲಿಂಗಗಳು ಈ ಗ್ರಾಮದಲ್ಲಿ ಇದ್ದವು ಎಂಬುದು ಸ್ಥಳೀಯರ ನಂಬಿಕೆಯಾಗಿದೆ.

ಶಿಕ್ಷಣ ಕೇಂದ್ರವಾಗಿ ಇಸಾಮುದ್ರ:
ಇಸಾಮುದ್ರ ಗ್ರಾಮವು ಅತ್ಯಂತ ಪ್ರಾಚೀನವಾದ ಗ್ರಾಮವೆಂಬುದಂತೂ ಸ್ಪಷ್ಟ.
ಇದಲ್ಲದೆ ಈ ಗ್ರಾಮವು 9ನೇ ಶತಮಾನದ ಹೊತ್ತಿಗೆ ಈ ಭಾಗದ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದುದು ಶಾಸನಗಳಿಂದ ತಿಳಿದುಬರುತ್ತದೆ .ಇಲ್ಲಿ ಒಂದು ಮಠವಿದ್ದು, ಅದು ಜ್ಞಾನ ಪ್ರಸಾರದ ಕೇಂದ್ರವಾಗಿದಿತು.ಕ್ರಿ.ಶ.940 ರ ಶಾಸನದಲ್ಲಿ ತಿಳಿಸಿರುವಂತೆ ಮಠದಲ್ಲಿ ಓದುವ ವಿದ್ಯಾರ್ಥಿಗಳಿಗೆ, ತಪೋಧನರಿಗೆ, ವಿದ್ಯಾರ್ಥಿ ಮಾಣಿಯರು ಮೊದಲಾದವರಿಗೆ ಮೂರನೇಯ ಕೃಷ್ಣ(ಕನ್ನರಸ) ನು ಕದಂಬಳಿಗೆ ಸಾವಿರವನ್ನು ಆಳುತ್ತಿರುವಾಗ ಅವನ ಹೆಸರಿನಲ್ಲಿ ಕಾಕುಬಾಳು ಗ್ರಾಮದ ಕಂಬಗಾವುಂಡನು ದತ್ತಿಯನ್ನು ಬಿಟ್ಟಿದ್ದನು. ಇದರಿಂದ ಭೋಗೇಶ್ವರ ದೇವಾಲಯದ ಆಸುಪಾಸಿನಲ್ಲೇ ಶಿಕ್ಷಣ ನೀಡುವ ಮಠವಿದ್ದುದು ದೃಢವಾಗುತ್ತದೆ. ಅಂತೆಯೇ ಈ ಮಠದ ಒಡೆಯ ಬಾಳಚಂದ್ರ ಪಂಡಿತರೆಂಬುದು ಗೊತ್ತಾಗುತ್ತದೆ.ಇದೇ ಕಾಲಾವಧಿಯಲ್ಲಿ ಅಂದರೆ ಕ್ರಿಸ್ತಶಕ 938 ರಲ್ಲಿ ಕಲ್ಲೇಶ್ವರ ದೇವಾಲಯದ (ಶಾಸನದಲ್ಲಿ ಗೊಗ್ಗಿಯ ದೇಗುಲವೆಂದೇ ಕರೆಯಲಾಗಿದೆ) ಸ್ಥಾನಾಧಿಪತಿಗಳಾಗಿ ಇದ್ದವರು ಧರ್ಮರಾಶಿ ಭಟಾರರು ಎಂಬುದು ಅಲ್ಲಿನ ಶಾಸನದಿಂದ ತಿಳಿಯುತ್ತದೆ.ಭೋಗೇಶ್ವರ ದೇವಾಲಯದ ಕ್ರಿ.ಶ.1059 ರ ಇನ್ನೊಂದು ಶಾಸನದಲ್ಲಿ ಎರಡು ಜನ ಸ್ಥಾನಾಧಿಪತಿಗಳ ಹೆಸರು ಉಲ್ಲೇಖವಾಗಿದೆ.ಇದರಲ್ಲಿ ಶಾಂತರಾಸಿ ಪಂಡಿತರ ಶಿಷ್ಯರಾದ ಧರ್ಮರಾಸಿ ಭಟಾರಕರೆನ್ನಲಾಗಿದೆ. ಒಟ್ಟಿನಲ್ಲಿ ಒಬ್ಬರ ನಂತರ ಮತ್ತೊಬ್ಬರು ದೇವಾಲಯದ ಆಡಳಿತದ ಜೊತೆಗೆ ನಿತ್ಯಕಾರ್ಯಗಳನ್ನು ನಡೆಸಿಕೊಂಡು ಶಿಕ್ಷಣವನ್ನು ಬೋಧಿಸುತ್ತಿದ್ದರೆಂಬುದು ಗಮನಾರ್ಹ.

 

1.ಇಸಾಮುದ್ರ ಭೋಗೇಶ್ವರ ದೇವಾಲಯ :

ಗ್ರಾಮದ ಈಶಾನ್ಯಕ್ಕೆ ಇರುವ ಭೋಗೇಶ್ವರ ದೇವಾಲಯವು ರಾಷ್ಟ್ರಕೂಟ ಶೈಲಿಯಲ್ಲಿ 9ನೇ -10ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ,ಕನಿಷ್ಠ ಸಂರಕ್ಷಣಾ ಸ್ಥಿತಿಯಲ್ಲಿದೆ .ಈ ಮಂದಿರವು ಪೂರ್ವಾಭಿಮುಖವಾಗಿದ್ದು ಅತ್ಯಂತ ಪ್ರಾಚೀನ ದೇವಾಲಯವಾಗಿದೆ .ಇದು ಮೂಲತಃ ಇಟ್ಟಿಗೆಯದಾಗಿದ್ದು ಕಾಲಾನಂತರದಲ್ಲಿ ಜೀರ್ಣೋದ್ಧಾರಗೊಂಡಿದೆ. ಇದು ಈ ಶಾಸನದಲ್ಲಿ ಉಲ್ಲೇಖಗೊಂಡಂತೆ ಕ್ರಿ.ಶ.940 ರ ಹೊತ್ತಿಗೆ ಜೀರ್ಣೋದ್ಧಾರಗೊಂಡಿರುವುದನ್ನು ಗಮನಿಸಿದರೆ ಇದರ ಪ್ರಾಚೀನತೆಯನ್ನು ಬಹು ಹಿಂದಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತದೆ .ಗರ್ಭಗೃಹ, ಅರ್ಧಮಂಟಪ ಮತ್ತು ಸಭಾಮಂಟಪಗಳಿಂದ ಕೂಡಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಪ್ರತಿಷ್ಠಾಪನ ಲಿಂಗವಿದೆ. 3 ಅಡಿಗಳೆತ್ತರದ ಈ ಲಿಂಗವನ್ನು ಕಪ್ಪು ಶಿಲೆಯಲ್ಲಿ ಕಡೆದಿರುವರು. ನಂದಿಯ ಕೊರಳಲ್ಲಿ ಮತ್ತು ಮೈಮೇಲೆ ಗಂಟೆ ಸರಗಳನ್ನು ಅಲಂಕರಿಸಿರುವರು. ಗರ್ಭಗೃಹದ ಬಾಗಿಲುವಾಡವು ಸರಳವಾಗಿದೆ .ಆದರೆ ಅರ್ಧ ಮಂಟಪದ ಬಾಗಿಲುವಾಡವು ವಿವಿಧ ಅಲಂಕರಣೆಗಳನ್ನು ಹೊಂದಿದೆ .ಇದರಲ್ಲಿ ಅರೆಗಂಬಗಳು ,ಸಿಂಹಗಳ ಸಾಲು, ಚಾಮರಧಾರಿಯರು,ತ್ರಿಶೂಲ, ಸರ್ಪ,ಗದೆ ಹಾಗೂ ವರದ ಮುದ್ರೆಗಳನ್ನು ಹಿಡಿದು ನಿಂತಿರುವ ದ್ವಾರಪಾಲಕರು, ಕಮಂಡಲ ಮತ್ತು ಪದ್ಮಗಳನ್ನು ಹಿಡಿದ ಮಹಿಳೆಯರ ಉಬ್ಬು ಶಿಲ್ಪಗಳಿವೆ.ಸಭಾಮಂಟಪದಲ್ಲಿ ಆರು ಕಂಬಗಳಿವೆ .ಅದರಲ್ಲಿ ನಾಲ್ಕು ಕಂಬಗಳು ಚಚ್ಚೌಕ ಪೀಠದ ಮೇಲಿದ್ದು, ಕಂಬಗಳ ದಿಂಡುಗಳು ಚಚ್ಚೌಕ, ಅಷ್ಟ ಹಾಗೂ 16 ಮುಖಗಳಲ್ಲಿ ಕಡೆಯಲಾಗಿದೆ. ಕ್ರಿ.ಶ.940 ಮತ್ತು1059 ರ ಕಾಲದ ಶಾಸನಗಳಿರುವ ಶಿಲಾಶಾಸನವನ್ನು ನಿಲ್ಲಿಸಲಾಗಿದೆ. ದೇವಾಲಯದ ಗರ್ಭಗೃಹವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ .ಇಲ್ಲಿ ಬಳಸಿದ ಇಟ್ಟಿಗೆಗಳು 35# 22# 7 ಸೆಂಟಿಮೀಟರ್ ದಪ್ಪ ವಾಗಿದೆ .ಇದೇ ಇಟ್ಟಿಗೆಗಳನ್ನು ಜಟಂಗಿ ಬೆಟ್ಟದ ಮೇಲಿರುವ ದೇವಾಲಯಗಳಲ್ಲಿ ಕಾಣಬಹುದು. ಇಟ್ಟಿಗೆ ರಚನೆಗಳು ಸಾಮಾನ್ಯವಾಗಿ ಶಾತವಾಹನರ ಕಾಲದಲ್ಲಿ ಹೆಚ್ಚು ಬಳಕೆಗೊಂಡಿದ್ದು ನಂತರದ ಕಾಲದಲ್ಲಿ ಕದಂಬರು ಕೂಡಾ ಇಟ್ಟಿಗೆ ದೇಗುಲಗಳನ್ನು ಕಟ್ಟಿಸಿದ್ದರು. ಆದುದರಿಂದ ಈ ದೇವಾಲಯ ಕದಂಬರ ಕಾಲದ ರಚನೆ ಆಗಿರುವ ಸಾಧ್ಯತೆ ಇದೆ.

 

2.ರಾಮೇಶ್ವರ ದೇವಾಲಯ:

ರಾಮೇಶ್ವರ ದೇವಾಲಯವು ಕಲ್ಲೇಶ್ವರ ದೇವಾಲಯದ ಹಿಂಭಾಗದ ತೋಟದಲ್ಲಿದೆ. 9- 10ನೇ ಶತಮಾನದಲ್ಲಿ ರಾಷ್ಟ್ರಕೂಟ ಶೈಲಿಯಲ್ಲಿ ನಿರ್ಮಾಣವಾಗಿದ್ದು ,ಕನಿಷ್ಠ ಸಂರಕ್ಷಣಾ ಸ್ಥಿತಿಯಲ್ಲಿದೆ.ಇದು ಕೂಡ ಪ್ರಾಚೀನ ದೇವಾಲಯವಾಗಿದೆ. ಗರ್ಭಗೃಹ ಮಾತ್ರ ಇರುವ ಈ ದೇಗುಲದಲ್ಲಿ 3 ಅಡಿ ಎತ್ತರದ ಪ್ರತಿಷ್ಟಾಪನ ಲಿಂಗವಿದೆ. ರಾಮೇಶ್ವರ,ಕಲ್ಲೇಶ್ವರ, ಭೋಗೇಶ್ವರ ದೇವಾಲಯಗಳಲ್ಲಿರುವ ಮೂರು ಶಿವ ಲಿಂಗಗಳು ಒಂದೇ ಲಕ್ಷಣಗಳನ್ನು ಹೊಂದಿದ್ದು ಒಂದೇ ಕಾಲದಲ್ಲಿ ನಿರ್ಮಿಸಲಾಗಿದೆ.

3. ಸಿದ್ದೇಶ್ವರ ದೇವಾಲಯ:

ಗ್ರಾಮದ ಸಿದ್ದೇಶ್ವರ ದೇವಾಲಯವು 9- 10 ನೇ ಶತಮಾನದಲ್ಲಿ ರಾಷ್ಟ್ರಕೂಟರ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಗುಡಿಯು ಗ್ರಾಮದ ಮಧ್ಯ ಭಾಗದಲ್ಲಿ ಪೂರ್ವಾಭಿಮುಖವಾಗಿದೆ. ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇವಾಲಯ ಜೀರ್ಣೋದ್ಧಾರಗೊಂಡ ದೇವಾಲಯವಾಗಿದೆ. ಹಬ್ಬ ,ಹರಿದಿನ ,ಜಾತ್ರೆ ಮೊದಲಾದ ಆಚರಣೆಯ ಮೂಲಕ ಸಿದ್ದೇಶ್ವರಸ್ವಾಮಿಯ ಗ್ರಾಮ ದೇವತೆಯಾಗಿ ಆರಾಧಿಸಲ್ಪಡುತ್ತದೆ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿವೆ. ಮುಖ್ಯ ಗರ್ಭಗೃಹವು ಮಧ್ಯದಲ್ಲಿದ್ದು,ಅದರಲ್ಲಿ 2 ಅಡಿ ಎತ್ತರದ ಶಿವಲಿಂಗವಿದೆ .ಇದರ ಎದುರಾಗಿ ಸಭಾಮಂಟಪದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಸಿದ್ದೇಶ್ವರನನ್ನು ವರ್ಷದ ಎಲ್ಲಾ ಕಾಲದಲ್ಲೂ ಪೂಜಿಸಲಾಗುತ್ತದೆ .ಆದರೆ ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ,
ಫಾಲ್ಗುಣ ಮಾಸದ ಶುಕ್ಲಪಕ್ಷದ ಪಂಚಮಿ ನಕ್ಷತ್ರದಂದು ವಿಶೇಷ ರಥೋತ್ಸವವು ಗ್ರಾಮದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ .ಒಟ್ಟು ಐದು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...