Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಮುದ್ದಾಪುರ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 20 ಕಿಲೋಮೀಟರ್ ದೂರ ವಾಯುವ್ಯಕ್ಕೆ ,ಚಿತ್ರದುರ್ಗ-ಸೀಬಾರ-ಐನಳ್ಳಿ-ಮುದ್ದಾಪುರ-ಬಿದರಕೆರೆ ಮುಖ್ಯ ರಸ್ತೆಯಲ್ಲಿದೆ.ಇಂದಿಗೂ ಈ ಊರನ್ನು ಯಳಗೋಡು- ಮುದ್ದಾಪುರ ಎಂದೇ ಕರೆಯುತ್ತಾರೆ.ಹಿಂದೆ ಈ ಗ್ರಾಮವು ಯಳಗೋಡು ಮಂಡಲದ ವ್ಯಾಪ್ತಿಯಲ್ಲಿ ಇದ್ದ ಕಾರಣಕ್ಕೆ ಹಾಗೂ ಇದೇ ಮಾರ್ಗದಲ್ಲಿ ಮುಂದೆ ಜಗಳೂರು ತಾಲೂಕು ಸಂತೆ ಮುದ್ದಾಪುರ ಸಿಗುತ್ತಿದ್ದ ಕಾರಣಕ್ಕೆ ಮುಂದಿನ ಊರಿನಿಂದ ಪ್ರತ್ಯೇಕಿಸಿ ಹಾಗೂ ಅದನ್ನು ಗುರುತಿಸಲು ಈ ರೀತಿಯಲ್ಲಿ ಹೇಳುವುದು ರೂಢಿಯಾಗಿದೆ.

 

ಆದರೆ ಇಂದು ಈ ಗ್ರಾಮವು ಪ್ರತ್ಯೇಕ ಪಂಚಾಯಿತಿ ವ್ಯಾಪ್ತಿಯನ್ನು ಹೊಂದಿದೆ.
17 ನೇ ಶತಮಾನದಲ್ಲಿ ಚಿತ್ರದುರ್ಗದಲ್ಲಿ ದಳವಾಯಿಯಾಗಿದ್ದ ದಳವಾಯಿ ಮುದ್ದಣ್ಣ ಎಂಬುವನಿಂದ ಈ ಗ್ರಾಮವು ನಿರ್ಮಾಣ ಮಾಡಲಾದ ಕಾರಣ ಆತನ ನೆನಪಿಗೆ ಮುದ್ದಣ್ಣನಪುರದಿಂದ ಮುದ್ದಾಪುರವಾಗಿದೆ ಎಂದು ಹೇಳಲಾಗುತ್ತದೆ. ಗ್ರಾಮದ ಹಳೆಯೂರು ಗ್ರಾಮದ ಪೂರ್ವದಿಕ್ಕಿನಲ್ಲಿ ಇದ್ದು ,ಅಲ್ಲಿ ಇಂದಿಗೂ ಪಾಳುಬಿದ್ದ ಕಲ್ಲು ಮಂಟಪದ ಉಡಿಸಲಮ್ಮ ದೇವಿಯ ಮಂದಿರವಿದೆ .ಆ ಭಾಗದ ಜಮೀನುಗಳಲ್ಲಿ ಇಂದಿಗೂ ಭಗ್ನಶಿಲ್ಪಗಳು ಹಾಗೂ ಇನ್ನಿತರ ಶಿಲಾಮೂರ್ತಿಗಳನ್ನು ಕಾಣಬಹುದಾಗಿದೆ.

 

ಗ್ರಾಮವು ಹಿಂದೆ ಸೈನಿಕರ ಊರಾಗಿದ್ದು ಅವರು ಹುತಾತ್ಮರಾದ ನೆನಪಿಗೆ ಗ್ರಾಮದಲ್ಲಿ ಬಹಳಷ್ಟು ವೀರಗಲ್ಲುಗಳು ಇದ್ದವಂತೆ.ಆದರೆ ಈಗ ಅಷ್ಟೊಂದು ಕಂಡುಬರುವುದಿಲ್ಲ.ಇರುವ ಕೆಲವು ಅಲ್ಲಲ್ಲಿ ಬಿದ್ದಿದ್ದು ಸಂರಕ್ಷಣೆಯ ಅಗತ್ಯವಿದೆ.ಪಾಳೆಗಾರರ ಕಾಲದಲ್ಲಿ ಇಸಾಮುದ್ರ -ಭರಮಸಾಗರ ಪಟ್ಟಡಿಗಳ 32 ಗ್ರಾಮಗಳಲ್ಲಿ ಈ ಗ್ರಾಮವು ಒಂದಾಗಿತ್ತು .
ಹತ್ತಿರದ ಮಾಳೆ ಚೌಡಮ್ಮನ ಗುಡಿ ಇದ್ದು ಪ್ರತಿ 5/9 ವರ್ಷಕ್ಕೆ ಇಲ್ಲಿ ಜಾತ್ರೆ ನಡೆಯುತ್ತದೆ . ಊರ ಹತ್ತಿರದಲ್ಲೇ ಗೋಸೆರಪ್ಪನ ಗುಡ್ಡವಿದ್ದು ಇಲ್ಲಿ ಪ್ರತಿ ಶ್ರಾವಣಮಾಸದಲ್ಲಿ ಊರಿನಿಂದ ಗ್ರಾಮದ ಪರೇವು ಆಚರಣೆ ಮಾಡಲಾಗುತ್ತದೆ.ಚಿಪ್ಪಿನಕೆರೆ ,ಜೋಗಿ ಬೋರೇನ ಹಟ್ಟಿ ,ಯಳಗೋಡು ,ಚಿಕ್ಕಬ್ಬಿಗೆರೆ ,ಸಿದ್ಧವ್ವನದುರ್ಗ(ಕೋಟೆ) ಅಕ್ಕಪಕ್ಕದ ಗ್ರಾಮಗಳಾಗಿವೆ.
ಗ್ರಾಮದ ಸುತ್ತಲೂ ಮಜುರೆ ಉಪಗ್ರಾಮಗಳಾದ ಮುದ್ದಾಪುರ ಹೊಸಹಟ್ಟಿ ,ಮುದ್ದಾಪುರ ಮ್ಯಾಸರಹಟ್ಟಿ ,ಜೋಗಿ ಬೋರನಹಟ್ಟಿ,ಮುದ್ದಾಪುರ ಗೊಲ್ಲರಹಟ್ಟಿ ಗಳಿವೆ.ಗ್ರಾಮದ ಪಶ್ಚಿಮಕ್ಕೆ ಕೆರೆಯಿದ್ದು,ಇದಕ್ಕೆ ಪಶ್ಚಿಮದ ಬ್ಯಾಲಹಾಳ್, ಶಿವನಕೆರೆಗಳಿಂದ ನೀರು ಹರಿದುಬರುತ್ತದೆ .ಇದು ತುಂಬಿದ ನಂತರ ಹತ್ತಿರದ ಸಂಗೇನಹಳ್ಳಿ ಕೆರೆಗೆ ತಲುಪುತ್ತದೆ.

 

ಗ್ರಾಮದ ದೇವಾಲಯಗಳು:

1.ಆಂಜನೇಯ ದೇವಾಲಯ: ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಾಲಯವು 18 -19 ನೇ ಶತಮಾನದಲ್ಲಿ ಸ್ಥಳೀಯ ಶೈಲಿಯಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಶಿಥಿಲವಾಗಿದ್ದ ಈ ದೇವಾಲಯವನ್ನು ತೆಗೆದು ಹೊಸದಾಗಿ ನಿರ್ಮಾಣ ಮಾಡಲಾಗಿದೆ .
ಗರ್ಭಗೃಹ ಮತ್ತು ಸಭಾಮಂಟಪಗಳಿಂದ ಕೂಡಿದ್ದು, ಈ ದೇವಾಲಯದ ಗರ್ಭಗೃಹದಲ್ಲಿ ಸುಮಾರು ನಾಲ್ಕೂವರೆ ಅಡಿ ಎತ್ತರದ ಆಂಜನೇಯ ಸ್ವಾಮಿ ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ .ಸಭಾಮಂಟಪದಲ್ಲಿ ಎಂಟು ಕಂಬಗಳಿದ್ದು, ಅವುಗಳಲ್ಲಿ ನಾಲ್ಕು ಕಂಬಗಳನ್ನು ಚಚ್ಚೌಕ ಮತ್ತು ಅಷ್ಟಮುಖಗಳಲ್ಲಿ ಕಡೆಯಲಾಗಿದೆ.ಪ್ರತಿ ವರ್ಷ ರಾಮನವಮಿಯ ದಿನ ಉಚ್ಛಾಯ (ಜಾತ್ರೆ)ನಡೆಸಲಾಗುತ್ತದೆ.ದೇವಾಲಯದ ಮುಂಭಾಗದಲ್ಲಿ ಎರಡು ವೀರಗಲ್ಲುಗಳಿವೆ.ಒಂದು ಭಗ್ನವಾಗಿದ್ದು,ಮತ್ತೊಂದರಲ್ಲಿ ವೀರನು ತನ್ನ ಕೈಗಳಲ್ಲಿ ಆಯುಧಗಳನ್ನು ಹಿಡಿದಿದ್ದಾನೆ.

2.ಬಸವೇಶ್ವರ ದೇವಾಲಯ:ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾದ ಈ ದೇವಾಲಯವನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದೆ. ಗರ್ಭಗೃಹ ಮತ್ತು ಸಭಾಮಂಟಪಗಳನ್ನು ಒಳಗೊಂಡಿದ್ದು,ಗರ್ಭಗೃಹದಲ್ಲಿ ಅಕ್ಕಮಹಾದೇವಿ ,ಶಿವಲಿಂಗ ಮತ್ತು ನಂದಿ ಶಿಲ್ಪಗಳಿವೆ.

ಇದರ ಜೊತೆಗೆ ಗ್ರಾಮದಲ್ಲಿ ಓಬಳದೇವರು ದೇವಸ್ಥಾನ, ಕುಕ್ಕುವಾಡದಮ್ಮ ಉಡಿಸಲಮ್ಮ …ದೇವಾಲಯಗಳಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...