ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಹೋಗಬೇಕೆಂಬ ಆಸೆ ಹಲವಾರು ಭಕ್ತರಲ್ಲಿ ಇದ್ದರೂ, ಎಲ್ಲ ಪ್ರದೇಶಗಳಿಂದ ನೇರ ರೈಲು ಸೌಲಭ್ಯ ಲಭ್ಯವಿರದ ಕಾರಣ ಪ್ರಯಾಣ ಕೆಲವರಿಗೆ ಅಸೌಕರ್ಯವಾಗುತ್ತಿತ್ತು. ಬಸ್ ಪ್ರಯಾಣಕ್ಕಿಂತ ರೈಲು ಪ್ರಯಾಣವೇ ಸುಖಕರ ಎಂದು ಭಾವಿಸುವವರಿಗೆ ಇದೀಗ ದಕ್ಷಿಣ ಮಧ್ಯ ರೈಲ್ವೆಯಿಂದ ಸಂತಸದ ಸುದ್ದಿ ಬಂದಿದೆ.

ಕಾಕಿನಾಡ–ಮೈಸೂರು ಎಕ್ಸ್ಪ್ರೆಸ್ (ರೈಲು ಸಂಖ್ಯೆ 17289/17290) ಮೇ 1ರಿಂದ ಸಂಚಾರ ಆರಂಭಿಸಲಿದ್ದು, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಭಾಗದ ಪ್ರಯಾಣಿಕರಿಗೆ ದೊಡ್ಡ ನೆರವಾಗಲಿದೆ. ಮೈಸೂರಿನಿಂದ ಸಂಜೆ 5:05ಕ್ಕೆ ಹೊರಡುವ ಈ ರೈಲು, ರಾತ್ರಿ 8:25ಕ್ಕೆ ಬೆಂಗಳೂರು ಸಿಟಿಯಿಂದ ಪ್ರಯಾಣ ಮುಂದುವರಿಸಿ, ಮರುದಿನ ಬೆಳಗಿನ ಜಾವ 3:28ಕ್ಕೆ ಮಂತ್ರಾಲಯ ರಸ್ತೆ ನಿಲ್ದಾಣ ತಲುಪುತ್ತದೆ. ಇದರಿಂದ ಭಕ್ತರು ಬೆಳಿಗ್ಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಸುಲಭವಾಗಿ ರಾಯರ ದರ್ಶನ ಪಡೆಯುವಂತಾಗುತ್ತದೆ.

ಈ ಹೊಸ ರೈಲು ಸೇವೆ ಉತ್ತರ ಕರ್ನಾಟಕದ ಪ್ರಯಾಣಿಕರಿಗೂ ಉಪಯುಕ್ತವಾಗಿದೆ. ರಾಯಚೂರು, ಯಾದಗಿರಿ, ಸೇಡಂ ಸೇರಿದಂತೆ ವಿವಿಧ ಭಾಗಗಳಿಂದ ಬೆಂಗಳೂರು ಮತ್ತು ಮೈಸೂರು ಸಂಪರ್ಕ ಸುಲಭವಾಗಲಿದೆ. ಕಾಕಿನಾಡದಿಂದ ಸೋಮವಾರ ಮತ್ತು ಶುಕ್ರವಾರ, ಮೈಸೂರಿನಿಂದ ಮಂಗಳವಾರ ಮತ್ತು ಶನಿವಾರ ಈ ರೈಲು ಸಂಚರಿಸಲಿದೆ.
ಕಾಕಿನಾಡದಿಂದ ಹೊರಡುವ ರೈಲು ಬೆಳಗಿನ ಜಾವ ಯಾದಗಿರಿ ಮತ್ತು ರಾಯಚೂರು ಮಾರ್ಗವಾಗಿ ಮಧ್ಯಾಹ್ನ ವೇಳೆಗೆ ಬೆಂಗಳೂರಿಗೆ ತಲುಪುತ್ತದೆ. ಮೈಸೂರಿನಿಂದ ಹೊರಡುವ ರೈಲು ಕೂಡ ರಾಯಚೂರು ಮತ್ತು ಯಾದಗಿರಿ ಮಾರ್ಗವಾಗಿ ಪ್ರಯಾಣಿಸುತ್ತಿದ್ದು, ವಿವಿಧ ಪ್ರಮುಖ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.
ಈ ರೈಲು ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ಪ್ರಮುಖ ನಗರಗಳನ್ನು ಜೋಡಿಸುವ ಮೂಲಕ ದೀರ್ಘ ದೂರ ಪ್ರಯಾಣವನ್ನು ಸುಲಭಗೊಳಿಸುವುದರ ಜೊತೆಗೆ ಭಕ್ತರಿಗೆ ಮಂತ್ರಾಲಯ ದರ್ಶನಕ್ಕೆ ಹೊಸ ಅವಕಾಶ ಒದಗಿಸಿದೆ.


















