Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಲಕ್ಷ್ಮೀಸಾಗರ ಗ್ರಾಮವು ಪಂಚಾಯತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ ವಾಯುವ್ಯಕ್ಕೆ 15 ಕಿಲೋಮೀಟರ್ ದೂರದಲ್ಲಿ
ಚಿತ್ರದುರ್ಗ- ದಾವಣಗೆರೆ ರಾ.ಹೆ.4 ರಲ್ಲಿ ಮುಖ್ಯ ರಸ್ತೆಯಿಂದ ದಕ್ಷಿಣದ ಕಡೆಗೆ 1 ಕಿ.ಮೀ.ದೂರದಲ್ಲಿದೆ.

ಮೂಲತಃ ಈ ಊರಿನ ಹಳೇ ಹೆಸರು ಚೋರತಿಂತ್ರಿಣಿ/ಕಳ್ಳಹುಣಸೆ.(ಇಲ್ಲಿ ಇದ್ದ ನೂರಾರು ಹುಣಸೆಮರಗಳಿಂದ ಆ ಹೆಸರು ಬಂದಿತ್ತು.)
1960ರ ದಶಕದಲ್ಲಿ ಇಲ್ಲಿಗೆ ಆಗಮಿಸಿದ್ದ ಹಿಂದಿನ ಜಯದೇವ ಮುರುಘಾ ಶರಣರಿಗೆ ಇಲ್ಲಿನ ಜನರು ಧನ,ಧಾನ್ಯಗಳನ್ನು /ಬೆಳ್ಳಿಯ ನಾಣ್ಯಗಳನ್ನು ನೀಡಿ ಸತ್ಕರಿಸಿ ಪಾದಪೂಜೆ ಮಾಡಿದ್ದರು. ಇಂತಹ ಸಣ್ಣ ಗ್ರಾಮದ ಬಡತನದಲ್ಲೂ ಇಲ್ಲಿನ ಜನರು ತೋರಿಸಿದ ಔದಾರ್ಯ, ಪ್ರೀತಿಗೆ ,ಹೃದಯವೈಶಾಲ್ಯತೆಗೆಮೆಚ್ಚಿದ ಶರಣರು ಇದು ಲಕ್ಷ್ಮೀಯ ಊರು, ಸಾಗರದಂತೆ ಇದರ ಕೀರ್ತಿ ವಿಶಾಲತೆಯಿಂದ ಹರಡಲಿ ಎಂದು ಹಾರೈಸಿ ಲಕ್ಷ್ಮೀಸಾಗರ ಎಂದು ಗ್ರಾಮಕ್ಕೆ ನಾಮಕರಣ ಮಾಡಿದರು.
18-19 ನೇ ಶತಮಾನದಲ್ಲಿ ಕಾಡಿದ ಭೀಕರ ಪ್ಲೇಗ್ ರೋಗದಿಂದ ಗ್ರಾಮವನ್ನು ಕೆಲ ವರ್ಷಗಳ ತನಕ ಸ್ಥಳಾಂತರಗೊಂಡು ಒಂದು ಕಿ.ಮೀ.ದೂರದಲ್ಲಿ ನೆಲೆಗೊಂಡಿತ್ತು. ನಂತರ ವಾಪಸ್ಸು ಈಗಿರುವ ಜಾಗಕ್ಕೆ ಬದಲಾಯಿತು.
ಹಿಂದಿನ ಹಳೇ ಗ್ರಾಮ ನಿವೇಶನವು ಬೇಚಾರಕ್ ಆಗಿದ್ದು ,ಈಗಿನ ಗ್ರಾಮದ ಉತ್ತರಕ್ಕೆ ಒಂದು ಕಿ.ಮೀ ದೂರದಲ್ಲಿದ್ದು,ಅದು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿದೆ. ಅಲ್ಲಿ ಇಂದಿಗೂ ಪಾಳುಬಿದ್ದ ಮಂಟಪ,ಭಗ್ನಶಿಲ್ಪಗಳ ಅವಶೇಷ..ಕಾಣಬಹುದು. ಹಿಂದೆ ಬಿಚ್ಚುಗತ್ತಿ ಭರಮಣ್ಣನಾಯಕ 1700-01 ಕಾಲದಲ್ಲಿ ಮುರುಘಾ ಮಠದ ಶಾಂತವೀರ ಮುರುಗಿ ಸ್ವಾಮೀಜಿಗಳು ಇಲ್ಲಿನ ದೇವಣ್ಣ ಎನ್ನುವವರ ಮನೆಯಲ್ಲಿ ತಂಗಿ ಪೂಜೆ ಸ್ವೀಕರಿಸಿದ್ದರಂತೆ.

 

ಕೆರೆ:
ಗ್ರಾಮದ ಪಶ್ಚಿಮಕ್ಕೆ ಇರುವ ಕೆರೆಯು ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿದೆ.
ಈ ಕೆರೆಗೆ ದೊಡ್ಡಾಲಗಟ್ಟ, ಸಿರಿಗೆರೆ..ಭಾಗಗಳಿಂದ ನೀರು ಹರಿದು ಬರುತ್ತದೆ.
ತುಂಬಿದ ನಂತರ ಸಂಗೇನಹಳ್ಳಿ ಕೆರೆಗೆ ತಲುಪುತ್ತದೆ.ಕೊಡಗವಳ್ಳಿ,ಕಿಟ್ಟದಹಟ್ಟಿ,
ಕಾತ್ರಾಳ್ ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ಮಂದಿರಗಳು:

1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯವು ದಕ್ಷಿಣಾಭಿಮುಖಿಯಾಗಿದ್ದು,17-18 ನೇ ಶತಮಾನದಲ್ಲಿ ಪಾಳೇಯಗಾರರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಗರ್ಭಗೃಹ ಅಂತರಾಳ ಹಾಗೂ ಸಭಾಮಂಟಪಗಳಿವೆ. ದೇವಾಲಯದ ಗರ್ಭಗೃಹದಲ್ಲಿ ಎಂಟು ಅಡಿ ಎತ್ತರದ ಪಾಳೇಗಾರರ ಕಾಲದ ಆಂಜನೇಯನ ಶಿಲ್ಪವಿದೆ .
ಸಭಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆಯಲಾದ ಕಂಬಗಳಿವೆ. ಹೊರಭಾಗದ ಕಂಬಗಳ ಕಾಂಡಭಾಗದಲ್ಲಿ ವಿವಿಧ ಉಬ್ಬುಶಿಲ್ಪಗಳಿವೆ.
ದೇವಾಲಯದ ಹಿಂಭಾಗದ ಗೋಡೆಭಾಗದಲ್ಲಿ ನಾಗರಹಾವು, ಮೀನುಗಳ ಉಬ್ಬು ಶಿಲ್ಪಗಳಿವೆ. ಈ ದೇವಾಲಯದ ವಿಶೇಷ ಉತ್ಸವ ಪ್ರತಿವರ್ಷ ರಾಮನವಮಿ ಹಬ್ಬದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.
ಇಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪರೇವು ಆಚರಣೆ ನಡೆಸಲಾಗುತ್ತದೆ.

 

2..ಮಹೇಶ್ವರ(ಈಶ್ವರ) ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖಿಯಾಗಿದ್ದು, ರಾಷ್ಟ್ರಕೂಟರ ಶೈಲಿಯಲ್ಲಿ 9-10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಆವರಣದಲ್ಲಿ ನೆಡಲಾದ ಹಳೆ ಗುಡಿಯ ಕಂಬ ಹಾಗೂ ಲಿಂಗದಿಂದ ಇದು ಸ್ಪಷ್ಪವಾಗುತ್ತದೆ.
2005 ರಲ್ಲಿ ಇದನ್ನು ನೂತನವಾಗಿ ಪುನರ್ ನಿರ್ಮಾಣ ಮಾಡಲಾಗಿದೆ.
ಈ ದೇವಾಲಯದಲ್ಲಿ ಗರ್ಭಗೃಹ ಹಾಗೂ ಸಭಾಮಂಟಪ,ತೆರೆದ ಮಂಟಪಗಳಿದ್ದು,ಗರ್ಭಗೃಹದಲ್ಲಿ ಸೋಮಸೂತ್ರವಿರುವ ಎರಡೂವರೆ ಅಡಿ ಎತ್ತರದ ಪ್ರತಿಷ್ಟಾಪನಾ ಶಿವಲಿಂಗವಿದೆ. ಸಭಾಮಂಟಪದಲ್ಲಿ ನಂದಿಯಿದ್ದು,ಗಂಟೆ, ಲೋಡಗಸರ,ಹಣೆಪಟ್ಟಿ, ದಂಡೆಗಳಿಂದ ಅಲಂಕರಿಸಿರುವರು. ಪ್ರತಿ ವರ್ಷ ಈ ದೇವರ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ದೇವಾಲಯದ ಆವರಣದಲ್ಲಿ ಗಣಪತಿ ಹಾಗೂ ನವಗ್ರಹಗಳ ಮಂದಿರಗಳಿವೆ. ಇಲ್ಲಿರುವ ಶಾಸನದಿಂದ ಹಿಂದೆ ಇದು ಕದಂಬರ ಆಳ್ವಿಕೆಗೆ ಒಳಪಟ್ಟ ವಿಚಾರ ಹಾಗೂ ಕದಂಬರ ವಂಶಾವಳಿಯ ಬಗ್ಗೆ ತಿಳಿಸುತ್ತದೆ.ಶಾಸನದಲ್ಲಿ ಈ ದೇವರಿಗೆ ಚಂದ್ರಮೌಳೇಶ್ವರ ಎಂಬ ಹೆಸರಿದೆ.

 

3. ಮಾರಮ್ಮ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು,ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಗ್ರಾಮದೇವತೆಯಾದ ಮಾರಮ್ಮನ ಶಿಲ್ಪವಿದೆ.

4.ಮೂಗಬಸವೇಶ್ವರ ದೇವಾಲಯ:
ಈ ದೇವಸ್ಥಾನವು ಗ್ರಾಮದ ಹೊರಭಾಗದಲ್ಲಿ ಕೊಡಗವಳ್ಳಿ ರಸ್ತೆಯಲ್ಲಿದೆ. ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

5.ಶ್ರೀ ತಗ್ಗಿನ ತಿಮ್ಮಪ್ಪನ ದೇವಸ್ಥಾನ:
ಗ್ರಾಮದ ಹೊರಭಾಗದಲ್ಲಿರುವ ಶ್ರೀ ತಗ್ಗಿನ ತಿಮ್ಮಪ್ಪ ಸ್ವಾಮಿ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಪ್ರತಿ ಶನಿವಾರ ಶ್ರಾವಣಮಾಸದಲ್ಲಿ ಇಲ್ಲಿ ನಡೆಯುವ ವಿಶೇಷ ಪೂಜೆ, ಪ್ರಾರ್ಥನೆ ನಡೆಯುತ್ತದೆ.

6.ಗಾದ್ರಿಪಾಲನಾಯಕ,ಪಾಪನಾಯಕ, ಗಾದ್ರಿಲಿಂಗೇಶ್ವರ ದೇವಾಲಯ:
ನಾಯಕ ಸಮುದಾಯದ ಸಾಂಸ್ಕೃತಿಕ ವೀರರಾದ ಗಾದ್ರಿಪಾಲನಾಯಕ, ಗಾದ್ರಿಲಿಂಗೇಶ್ವರ,ಪಾಪನಾಯಕ ದೇವಾಲಯ ಗ್ರಾಮದ ಮಧ್ಯಭಾಗದಲ್ಲಿದ್ದು,
ಗರ್ಭಗೃಹದಲ್ಲಿ ಇವರ ವೀರಗಲ್ಲುಗಳನ್ನು ಪೂಜಿಸಲಾಗುತ್ತದೆ.ಇದರ ಪೂಜಾರರು ನಾಯಕ ಸಮುದಾಯದವರು.

ಇದರ ಜೊತೆಗೆ ಬರಗೇರಮ್ಮ,ನರಹರಿ ಆಶ್ರಮ, ಸಿದ್ಧಾರೂಢರ ಆಶ್ರಮ,ಗೌರಸಂದ್ರ ಮಾರಮ್ಮ,ಓಬಳೇಶ್ವರ ದೇವಸ್ಥಾನ,ಒಂದು ಮಸೀದಿ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...