ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936
ಸುದ್ದಿಒನ್ : ಹಳೇದ್ಯಾಮವ್ವನಹಳ್ಳಿ ಗ್ರಾಮವು ಪಂಚಾಯತಿ ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ ಈಶಾನ್ಯಕ್ಕೆ 15 ಕಿಲೋಮೀಟರ್ ದೂರದಲ್ಲಿ ಚಿತ್ರದುರ್ಗ- ಗೋನೂರು – ಬೊಮ್ಮೇನಹಳ್ಳಿ-
ಹಳೇದ್ಯಾಮವ್ವನಹಳ್ಳಿ ಮಾರ್ಗದಲ್ಲಿದೆ.
ಮೂಲತಃ ಈ ಊರಿನ ಹಳೇ ಹೆಸರು ಚೆನ್ನಿಗರಾಯಪಟ್ಟಣ.ಇಲ್ಲಿ ಇದ್ದ ಚನ್ನಕೇಶವಸ್ವಾಮಿ ದೇವರಿಂದ ಈ ಹೆಸರು ಬಂದಿತ್ತು. ನಂತರ 17-18 ನೇ ಶತಮಾನದಲ್ಲಿ ಚಿತ್ರದುರ್ಗವನ್ನು ಆಳಿದ ಬಿಚ್ಚುಗತ್ತಿ ಭರಮಣ್ಣನಾಯಕ ತನ್ನ ಮಗಳು ದ್ಯಾಮವ್ವನ (ಹಿರೇಗುಂಟನೂರು ದ್ಯಾಮಲಾಂಬ=ದ್ಯಾಮವ್ವ) ಹೆಸರಿನಲ್ಲಿ ಇಲ್ಲೊಂದು ನೂತನ ಗ್ರಾಮ ಹಾಗೂ ಕೆರೆಯನ್ನು ನಿರ್ಮಿಸಿ ದ್ಯಾಮವ್ವನಹಳ್ಳಿ ಎಂದು ಹೆಸರು ನೀಡಿದ. ನಂತರ ಗ್ರಾಮವು 1918-20 ರ ಸುಮಾರಿಗೆ ವಿಭಜನೆಯಾಗಿ ಹತ್ತಿರದ ಕಾಸವರಹಟ್ಟಿ,ಹೊಸದ್ಯಾಮವ್ವನಹಳ್ಳಿ, ಲಿಂಗಾವರಹಟ್ಟಿ ನಿರ್ಮಾಣವಾದವು. ಮೂಲ ಉಳಿದ ಗ್ರಾಮಕ್ಕೆ ಹಳೇದ್ಯಾಮವ್ವನಹಳ್ಳಿ ಹೆಸರು ನೀಡಲಾಯಿತು. ಆಡುಭಾಷೆಯಲ್ಲಿ ಜನರು ಇದಕ್ಕೆ ದ್ಯಾಮೇನಳ್ಳಿ ಎಂದು ಕರೆಯುತ್ತಾರೆ.
ಹಳೇದ್ಯಾಮವ್ವನಹಳ್ಳಿಯ ಹಿಂದಿನ ಹಳೇ ಗ್ರಾಮ ನಿವೇಶನವು ಬೇಚಾರಕ್ ಆಗಿದ್ದು ,ಈಗಿನ ಗ್ರಾಮದ ಪಶ್ಚಿಮಕ್ಕೆ ಅರ್ಧ ಕಿ.ಮೀ ದೂರದಲ್ಲಿದ್ದು,
ಅದು ಈಗ ಹೊಲಗಳ ಜಾಗವಾಗಿದೆ. ಅಲ್ಲಿ ದೊರಕಿದ ವೀರಗಲ್ಲುಗಳು,ಮಾಸ್ತಿಗಲ್ಲು ,ಭಗ್ನಶಿಲ್ಪಗಳ ಅವಶೇಷ..ಮುಂತಾದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಿ ಚಿತ್ರದುರ್ಗದ ರಂಗಯ್ಯನ ಬಾಗಿಲು ಬಳಿಯ ಪ್ರಾಚ್ಯವಸ್ತು ಇಲಾಖೆಯ ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ. 1840 ರಲ್ಲಿನ ಫ್ರೆಡರಿಕ್ ಚಾಲ್ಮರ್ ವರದಿಯಂತೆ ಈ ಗ್ರಾಮವು ಹೋಬಳಿ ಕೇಂದ್ರವಾಗಿತ್ತು.
ಕೆರೆ:
ಗ್ರಾಮದ ಪಶ್ಚಿಮಕ್ಕೆ ಇರುವ ಕೆರೆಯು 150 ಎಕರೆಗಿಂತ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಕೆರೆಗೆ ಮಲ್ಲಾಪುರ, ಗೋನೂರು ಕೆರೆಗಳಿಂದ ನೀರು ಹರಿದು ಬರುತ್ತದೆ. ತುಂಬಿದ ನಂತರ ಕಲ್ಲಹಳ್ಳಿ ಹರಿದು ಮುಂದೆ ಮಧುರೆ ಕೆರೆಗೆ ತಲುಪುತ್ತದೆ.
ಹೊಸದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ….ಹತ್ತಿರದ ಗ್ರಾಮಗಳಾಗಿವೆ.
ಗ್ರಾಮದಲ್ಲಿರುವ ಮಂದಿರಗಳು:
1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಆಂಜನೇಯ ಸ್ವಾಮಿ ದೇವಾಲಯವು ದಕ್ಷಿಣಾಭಿಮುಖಿಯಾಗಿದ್ದು,17-18 ನೇ ಶತಮಾನದಲ್ಲಿ ಪಾಳೇಯಗಾರರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಗರ್ಭಗೃಹ ಅಂತರಾಳ ಹಾಗೂ ಸಭಾಮಂಟಪಗಳಿವೆ. ದೇವಾಲಯದ ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ಪಾಳೇಗಾರರ ಕಾಲದ ಆಂಜನೇಯನ ಶಿಲ್ಪವಿದೆ .
ಸಭಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆಯಲಾದ ಕಂಬಗಳಿವೆ. ಕಂಬಗಳ ಮೇಲೆ ಪುಷ್ಪಬೋದಿಗೆಗಳಿವೆ. ಕಂಬಗಳ ಕಾಂಡಭಾಗದಲ್ಲಿ ವಿವಿಧ ಉಬ್ಬುಶಿಲ್ಪಗಳಿವೆ. ದೇವಸ್ಥಾನದ ಮುಂಭಾಗದಲ್ಲಿ ಐದು ಅಡಿ ಎತ್ತರದ ಕಟ್ಟೆಯ ಮೇಲೆ ಸುಮಾರು 12 ಅಡಿ ಎತ್ತರದ ದೀಪಸ್ತಂಭವನ್ನು ನಿಲ್ಲಿಸಿರುವರು.ಇದರಲ್ಲಿ ಕೈಮುಗಿದು ನಿಂತ ಗರುಡನ ಉಬ್ಬುಶಿಲ್ಪವಿದೆ.
ಈ ದೇವಾಲಯದ ವಿಶೇಷ ಉತ್ಸವ ಪ್ರತಿವರ್ಷ ರಾಮನವಮಿ ಹಬ್ಬದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಗ್ರಾಮದ ಪೂರ್ವದ ಗುಡ್ಡದ ಮೇಲೆ ಸಿದ್ಧರಮರಡಿ ಎಂಬ ಸ್ಥಳವಿದ್ದು, ಇಲ್ಲಿ ಹಿಂದೆ ಸಿದ್ಧಪುರುಷರು ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ.ಇದರ ಬಳಿಯಲ್ಲಿ ಶ್ರೀರಾಮನ ಪಾದುಕೆಗಳಿವೆ. ಇಲ್ಲಿ ಪ್ರತಿವರ್ಷ ಪರೇವು ಆಚರಣೆ ನಡೆಸಲಾಗುತ್ತದೆ.
2.ಪೋಲೆರಮ್ಮ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು, ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಗ್ರಾಮದೇವತೆಯಾದ ಪೋಲೆರಮ್ಮನ ಶಿಲ್ಪವಿದೆ.ಈ ದೇವರ ಜಾತ್ರೆಯನ್ನು ಪ್ರತಿ 3-5 ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಸಲಾಗುತ್ತದೆ.
3.ಈಶ್ವರ ದೇವಾಲಯ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯವು ಉತ್ತರಾಭಿಮುಖಿಯಾಗಿದ್ದು, ವಿಜಯನಗರೋತ್ತರ ಶೈಲಿಯಲ್ಲಿ 18-19 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.ಈ ದೇವಾಲಯದಲ್ಲಿ
ಗರ್ಭಗೃಹ ಹಾಗೂ ಸಭಾಮಂಟಪಗಳಿದ್ದು, ಗರ್ಭಗೃಹದಲ್ಲಿ 3 ಅಡಿ ಎತ್ತರದ ಈಶ್ವರ ಲಿಂಗವಿದೆ. ಸಭಾಮಂಟಪದಲ್ಲಿ ಬಹುಮುಖಗಳಲ್ಲಿ ಕಡೆಯಲಾದ ಕಂಬಗಳಿವೆ. ಈ ಕಂಬಗಳ ಮೇಲೆ ಬೋದಿಗೆಗಳಿವೆ.
ದೇವಾಲಯದ ಮುಂಭಾಗದಲ್ಲಿ ನಾಗಮುದ್ರೆಯುಳ್ಳ ಶಾಸನವಿದೆ.
4.ಕರಿಯಮ್ಮ ದೇವಾಲಯ: ಕರಿಯಮ್ಮ ದೇವಸ್ಥಾನವು ಗ್ರಾಮದ ಮಧ್ಯಭಾಗದಲ್ಲಿದ್ದು, ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
5.ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯವು 18-19 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇತ್ತೀಚಿಗೆ ಈ ದೇವಾಲಯ ಶಿಥಿಲವಾದ ಕಾರಣ ಅದನ್ನು ತೆಗೆದು ನೂತನವಾಗಿ ನಿರ್ಮಿಸಲಾಗುತ್ತಿದೆ. ಈ ದೇವರಿಗೆ ಆರ್ಯವೈಶ್ಯ ಸಮುದಾಯದವರು ವಿಶೇಷವಾಗಿ ನಡೆದುಕೊಳ್ಳುತ್ತಾರೆ. ದೂರದ ಪಾವಗಡ ,ಅನಂತಪುರ ,
ಶಿರಾ ,ಮಧುಗಿರಿ ,ತುಮಕೂರು ,ಚಳ್ಳಕೆರೆ ಮುಂತಾದ ನೂರಾರು ಊರುಗಳ ಆರ್ಯವೈಶ್ಯ ಸಮುದಾಯದವರು ಈ ದೇವರನ್ನು ಮನೆದೇವರನ್ನಾಗಿ ಮಾಡಿಕೊಂಡಿದ್ದು ,ಪ್ರತಿ ಶನಿವಾರ ಶ್ರಾವಣಮಾಸ ,ನರಸಿಂಹ ಜಯಂತಿಯಂದು ಇಲ್ಲಿ ನಡೆಯುವ ವಿಶೇಷ ಪೂಜೆ, ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆಗಳಲ್ಲಿ ಭಾಗವಹಿಸುತ್ತಾರೆ. ಇದರ ಪೂಜಾರರು ಆರ್ಯವೈಶ್ಯ ಸಮುದಾಯದವರು.ಇದರ ಬಳಿಯಿರುವ ಸಮುದಾಯ ಭವನದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ.
6.ಶ್ರೀ ವೀರಚನ್ನಕೇಶವ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ವೀರ ಚನ್ನಕೇಶವಸ್ವಾಮಿ ದೇವಾಲಯವು ಪೂರ್ವಾಭಿಮುಖವಾಗಿದ್ದು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ ಶ್ರೀ ಚನ್ನಕೇಶವಸ್ವಾಮಿಯ ಸುಂದರ ಶಿಲಾಮೂರ್ತಿ ಇದೆ.
ಇದು 16 ನೇ ಶತಮಾನಕ್ಕೆ ಸೇರಿದ ಶಿಲ್ಪವಾಗಿದ್ದು, ಈ ಮೊದಲು ಇದು ಊರಿನ ಹತ್ತಿರದ ದಕ್ಷಿಣ ದಿಕ್ಕಿಗೆ ಹರಿಯುವ ಹಳ್ಳದ ಕೆಸರಿನಲ್ಲಿ ಹೂತು ಹೋಗಿತ್ತು.ಕಳೆದ 2-3 ದಶಕದಲ್ಲಿ ಇದು ಪತ್ತೆಯಾಗಿದ್ದು, ಹೊರತೆಗೆದು ಇದಕ್ಕೆ ದೇವಸ್ಥಾನ ಕಟ್ಟಲಾಯಿತು.ವಿಶಿಷ್ಟ ಶಿಲ್ಪ ಇದಾಗಿದ್ದು,6*3 ಅಡಿ ಎತ್ತರ, ಅಗಲವಿದೆ. ಈ ಶಿಲೆಯ ಸುತ್ತಲೂ ಪ್ರಭಾವಳಿ ಇದ್ದು ಅದರ ಅಡಿಯಲ್ಲಿ ಮಕರಗಳು, ಪರಿಚಾರಿಕೆಯರು, ಚಾಮರ ಹಿಡಿದು ನಿಂತಿದ್ದಾರೆ. ಪ್ರಭಾವಳಿಯ ಸುತ್ತಲೂ ಮಹಾವಿಷ್ಣುವಿನ ದಶಾವತಾರಗಳನ್ನು ಕೆತ್ತಲಾಗಿದೆ. ಅದರ ಮಧ್ಯೆ ಚತುರ್ಬಾಹು, ಶಂಖ,ಚಕ್ರ, ಗಧಾಪ್ರಾಣಿಯಂತೆ ತೋರುವ ಕೇಶವಮೂರ್ತಿಯನ್ನು ರೂಪಿಸಲಾಗಿದೆ.
7.ಗೊಂದಾಳಪ್ಪ ಪೌಳಿ:
ಗ್ರಾಮದಿಂದ ಒಂದು ಕಿಲೋಮೀಟರ್ ದೂರ ಪಶ್ಚಿಮದಲ್ಲಿ ಹಳೇ ಹಾಗೂ ಹೊಸ ದ್ಯಾಮವ್ವನಹಳ್ಳಿ ನಡುವಿನ ಜಮೀನಿನಲ್ಲಿ ಪೌಳಿ ಇದ್ದು,ಇದು ವೀರಗಾರರ ಗದ್ದುಗೆಯಾಗಿದೆ. ಈ ಗದ್ದುಗೆಗೆ ಗೊಲ್ಲ ಸಮುದಾಯದವರು ಪ್ರತಿವರ್ಷ ಶ್ರಾವಣ, ಕಾರ್ತಿಕ ಮಾಸದಲ್ಲಿ ಬಂದು ವಿಶೇಷ ಪೂಜೆ ,ಪ್ರಾರ್ಥನೆ ಮಾಡುತ್ತಾರೆ .ಇದನ್ನು ಗೋವಿಂದಸ್ವಾಮಿ ಎಂದೂ ಕರೆಯಲಾಗುತ್ತದೆ.
8.ದುರ್ಗಮ್ಮ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಈ ದೇವಾಲಯ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗರ್ಭಗೃಹದಲ್ಲಿ ದುರ್ಗಾಂಬಿಕಾ ದೇವಿಯನ್ನು ಪೂಜಿಸಲಾಗುತ್ತದೆ. ಇದರ ಜೊತೆಗೆ ಪೀರಲದೇವರು, ಕುಕ್ವಾಡೇಶ್ವರಿ ,ಮಾರಮ್ಮ .. ದೇವಸ್ಥಾನಗಳಿವೆ.





















