ಜ್ವರ ಕಾಣಿಸಿಕೊಂಡ ತಕ್ಷಣ ಪ್ಯಾರಾಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆ, ವೈದ್ಯರ ಸಲಹೆಯಿಲ್ಲದೆ ಇಂತಹ ಔಷಧಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಬೇಸಿಗೆಯ ಈ ಸಮಯದಲ್ಲಿ ಈ ತಪ್ಪು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ.
ಬಿಸಿಲಿನ ತೀವ್ರತೆಯಿಂದ ದೇಹದ ಉಷ್ಣತೆ ಈಗಾಗಲೇ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಯಾರಾದರೂ ಸುಸ್ತಾಗಿ ಬೀಳುವುದು ಅಥವಾ ಪ್ರಜ್ಞೆ ತಪ್ಪುವುದು ಸಾಮಾನ್ಯ ಜ್ವರದ ಲಕ್ಷಣವಲ್ಲದೇ Heat Stroke ಆಗಿರಬಹುದು. ಇಂತಹ ಸಂದರ್ಭದಲ್ಲಿ ಪ್ಯಾರಾಸಿಟಮಾಲ್ ಅಥವಾ ಆಸ್ಪಿರಿನ್ ನೀಡುವುದು ಅಪಾಯಕಾರಿ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ವೈದ್ಯರ ಪ್ರಕಾರ, ಹೀಟ್ ಸ್ಟ್ರೋಕ್ ಸಾಮಾನ್ಯ ಜ್ವರದಿಂದ ಭಿನ್ನ. ಸಾಮಾನ್ಯ ಜ್ವರದಲ್ಲಿ ದೇಹದ ಉಷ್ಣತೆಯನ್ನು ಮೆದುಳಿನ ನಿಯಂತ್ರಣ ವ್ಯವಸ್ಥೆ ಹೆಚ್ಚಿಸುತ್ತದೆ. ಆದರೆ ಹೀಟ್ ಸ್ಟ್ರೋಕ್‌ನಲ್ಲಿ ಹೊರಗಿನ ತೀವ್ರ ಬಿಸಿಲಿನಿಂದ ದೇಹದ ಶೀತಲೀಕರಣ ವ್ಯವಸ್ಥೆ ವಿಫಲವಾಗುತ್ತದೆ. ಈ ಕಾರಣದಿಂದ ಪ್ಯಾರಾಸಿಟಮಾಲ್‌ನಂತಹ ಔಷಧಗಳು ಪರಿಣಾಮಕಾರಿಯಾಗುವುದಿಲ್ಲ.ಮೇಲಾಗಿ, ಈ ಸಂದರ್ಭದಲ್ಲಿ ಇಂತಹ ಮಾತ್ರೆಗಳನ್ನು ಸೇವಿಸುವುದರಿಂದ ಯಕೃತ್ತಿನ ಮೇಲೆ ಒತ್ತಡ ಹೆಚ್ಚಾಗಿ ಹಾನಿಯಾಗುವ ಸಾಧ್ಯತೆಯಿದೆ. ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಆಸ್ಪಿರಿನ್ ಬಳಕೆ ಮಾಡಿದರೆ ರಕ್ತ ತೆಳುವಾಗಿ ಆಂತರಿಕ ರಕ್ತಸ್ರಾವದ ಅಪಾಯವೂ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ದೇಹದಲ್ಲಿ ನೀರಿನ ಕೊರತೆ ಇದ್ದಾಗ ಇಂತಹ ಔಷಧಗಳನ್ನು ತೆಗೆದುಕೊಂಡರೆ ಕಿಡ್ನಿ ಕಾರ್ಯಕ್ಷಮತೆ ಕುಸಿದು ಗಂಭೀರ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಲಾಗಿದೆ.
ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಲು ತಕ್ಷಣ ದೇಹವನ್ನು ತಣ್ಣಗಾಗಿಸುವ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಬಾಧಿತ ವ್ಯಕ್ತಿಯನ್ನು ತಣ್ಣೀರಿನಿಂದ ಒರೆಸುವುದು, ಐಸ್ ಬಳಸಿ ತಂಪು ಮಾಡುವುದು, ಫ್ಯಾನ್ ಅಥವಾ ಎಸಿ ಅಡಿಯಲ್ಲಿ ಮಲಗಿಸುವುದು ಮೊದಲಾದ ಕ್ರಮಗಳು ಪರಿಣಾಮಕಾರಿ. ಪ್ಯಾರಾಸಿಟಮಾಲ್‌ನಂತಹ ಮಾತ್ರೆಗಳಿಂದ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.ಸಾರ್ವಜನಿಕರು ಯಾವುದೇ ಲಕ್ಷಣ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
















