ಚಿತ್ರದುರ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ದಿನವೇ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಅಯಾನ್ ಬೇಗ್ ಎಂಬ ವಿದ್ಯಾರ್ಥಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯ ಮುನ್ನ ತಂಗಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಚಿತ್ರದುರ್ಗದ ಹೊರಪೇಟೆ ನಿವಾಸಿಯಾಗಿದ್ದ ಅಯಾನ್, ಕೆಲವು ದಿನಗಳ ಹಿಂದೆಯೇ ಸಾಮಾಜಿಕ ಜಾಲತಾಣವಾದ Instagram ನಲ್ಲಿ ಆತಂಕ ಹುಟ್ಟಿಸುವ ರೀತಿಯ ಸ್ಟೇಟಸ್ ಹಾಕಿದ್ದನು. “The pose I will be hitting at my result day” ಎಂಬ ಸಂದೇಶ ಗಮನ ಸೆಳೆದಿದೆ.
ಮೃತದೇಹವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಹೃದಯ ಕಲುಕುವಂತಿದೆ. ಪ್ರಾಥಮಿಕ ಮಾಹಿತಿಯಂತೆ, ವಿದ್ಯಾರ್ಥಿಗೆ ಸುಮಾರು 70% ಅಂಕಗಳು ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ನಿಖರ ಕಾರಣಗಳ ಬಗ್ಗೆ ಕುಟುಂಬಸ್ಥರು ಅಥವಾ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ.
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫಲಿತಾಂಶದ ಒತ್ತಡ, ವೈಯಕ್ತಿಕ ಸಮಸ್ಯೆಗಳು ಅಥವಾ ಇತರೆ ಕಾರಣಗಳು ಈ ಘಟನೆಗೆ ಕಾರಣವಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ತಜ್ಞರ ಅಭಿಪ್ರಾಯದಂತೆ, ಪರೀಕ್ಷಾ ಫಲಿತಾಂಶದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಮಾರ್ಗದರ್ಶನ ಅತ್ಯಂತ ಅಗತ್ಯ. ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ನಿರಂತರವಾಗಿ ಮಾತನಾಡಿ, ಒತ್ತಡವನ್ನು ಕಡಿಮೆ ಮಾಡುವತ್ತ ಗಮನ ಹರಿಸಬೇಕು ಎಂಬ ಸಲಹೆ ನೀಡಲಾಗಿದೆ.
















