Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಹೊಳಲ್ಕೆರೆ – ಶಿವಪುರ ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಶಿವಪುರ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಹೊಳಲ್ಕೆರೆಯಿಂದ 11 ಕಿಲೋಮೀಟರ್ ದೂರ ವಾಯುವ್ಯಕ್ಕೆ,
ಹೊಳಲ್ಕೆರೆ- ಕುನುಗಲಿ- ಶಿವಪುರ ಮುಖ್ಯರಸ್ತೆಯಲ್ಲಿದೆ. ಗ್ರಾಮದ ಮೂಲ ಸ್ಥಳವು ಗ್ರಾಮದಿಂದ ಮಲ್ಲಾಡಿಹಳ್ಳಿಗೆ ಸಾಗುವ ದಾರಿಯಲ್ಲಿ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಇದು ಗ್ರಾಮದ ಹಳೆ ಗ್ರಾಮನಿವೇಶನವಾಗಿದೆ.
ಹಳೆ ಗ್ರಾಮ ನಿವೇಶನದ ಮುಂದುವರಿದ ಭಾಗದಲ್ಲಿಯೇ ಈಶ್ವರ ದೇವಾಲಯ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿವೆ. ಇದೇ ದಾರಿಯಲ್ಲಿ ಅರ್ಧ ಕಿಲೋಮೀಟರ್ ದಕ್ಷಿಣಕ್ಕೆ ಮತ್ತಷ್ಟು ಮುಂದೆ ಸಾಗಿದರೆ ಕ್ಷೇತ್ರಪಾಲಕ ಭೂತಪ್ಪಸ್ವಾಮಿ ದೇವಸ್ಥಾನವಿದೆ.

 

ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ದೇವಾಲಯ ನಿರ್ಮಾಣ ಮಾಡಲಾಗಿದೆ.
ಇದರ ಬಳಿಯಲ್ಲಿಯೇ ಕರ್ಲಹಳ್ಳ ಹರಿಯುತ್ತದೆ. ಈ ಹಳ್ಳದ ಹರಿವಿನ ನೀರು ಸದಾ ಜೌಗು ನಿರ್ಮಾಣವಾಗುತ್ತಿದ್ದ ಕಾರಣದಿಂದ ಹಳೆ ಗ್ರಾಮ ನಿವೇಶನದಿಂದ ಈಗಿರುವ ಗ್ರಾಮದ ಸ್ಥಳಕ್ಕೆ ಗ್ರಾಮವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಹೇಳಲಾಗುತ್ತದೆ.‌ಭೂತಪ್ಪ ಸ್ವಾಮಿ ದೇವಾಲಯದ ಹತ್ತಿರದ ಜಮೀನಿನಲ್ಲಿ ವಿಜಯನಗರೋತ್ತರ ಕಾಲದ 16-17 ನೇ ಶತಮಾನದ ವೀರಗಲ್ಲು ಹಾಗೂ ಒಕ್ಕೈ ಮಾಸ್ತಿಕಲ್ಲು ಕಾಣಬಹುದು.

 

ವೀರಗಲ್ಲು‌ :
ಹಿಂದೆ ಯುದ್ಧದಲ್ಲಿ ಮಡಿದ ಗ್ರಾಮದ ಯೋಧನ ನೆನಪಿಗಾಗಿ ವೀರಗಲ್ಲನ್ನು ನೆಡಲಾಗಿದೆ. ಯೋಧನು ಬಿಲ್ಲು -ಬಾಣಧಾರಿಯಾಗಿದ್ದು,
ಘೋರಯುದ್ಧದಲ್ಲಿ ಹುತಾತ್ಮನಾಗಿದ್ದಾನೆ.
ಮರಣದ ನಂತರ ಯೋಧನನ್ನು ಅಪ್ಸರೆಯರು ಪಲ್ಲಕ್ಕಿಯಲ್ಲಿ ದೇವಲೋಕಕ್ಕೆ ಕರೆದೊಯ್ಯುತ್ತಿರುವ ಚಿತ್ರಣವನ್ನು ಇದರಲ್ಲಿ ಕಾಣಬಹುದು.

ಮಾಸ್ತಿಗಲ್ಲು :
ಯುದ್ಧದಲ್ಲಿ ಮಡಿದ ಯೋಧನ ಪತ್ನಿಯು ಸಹ ಯೋಧನೊಂದಿಗೆ ಪ್ರಾಣತ್ಯಾಗ ಮಾಡಿ ಮಹಾಸತಿಯಾದ ಹೆಸರಿನ ಮೇಲೆ ಮಾಸ್ತಿಕಲ್ಲು ನೆಡಲಾಗಿದೆ. ಇದು ಅತ್ಯಂತ ಸುಂದರ ಹಾಗೂ ಸ್ಪಷ್ಟ ಚಿತ್ರಣವನ್ನು ಕೊಡುವ ಮಾಸ್ತಿಕಲ್ಲು ಆಗಿದೆ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

ಹೆಸರಿನ ಮೂಲ :
ಗ್ರಾಮದ ಮೂಲ ಹೆಸರು‌ಕಾಗೆಬೂದಿಹಾಳ್.‌1935 ರ ಸಮಯದಲ್ಲಿ ಸಿರಿಗೆರೆಯ ಸ್ವಾಮೀಜಿ ಈ ಗ್ರಾಮದಲ್ಲಿ ಹೆಚ್ಚಾಗಿ ಶಿವಭಕ್ತರು/ ಶಿವಶರಣರು ಇರುವುದನ್ನು ಮನಗಂಡು ಈ ಗ್ರಾಮಕ್ಕೆ ಅನ್ವರ್ಥಕವಾಗಿ ಶಿವಪುರ ಎಂದು ಬದಲಾಯಿಸಿದರು.

ಶಿವಪುರ ಗ್ರಾಮವು ಅಡಿಕೆ ಕೃಷಿಯಲ್ಲಿ ತಾಲ್ಲೂಕಿನಲ್ಲಿ ಉನ್ನತಿಯನ್ನು ಪಡೆದ ಗ್ರಾಮವಾಗಿದೆ.ಗ್ರಾಮದ ಸಂಪೂರ್ಣ ಆರ್ಥಿಕತೆಯು ಅಡಿಕೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಭೌಗೋಳಿಕವಾಗಿ ಗ್ರಾಮದ ಸುತ್ತಲೂ ಸಮತಟ್ಟು ಮೈದಾನದ ಒಣ ಭೂಪ್ರದೇಶವೇ ಹೆಚ್ಚಾಗಿದೆ. ಗ್ರಾಮದ ದಕ್ಷಿಣಕ್ಕೆ ಕರ್ಲಹಳ್ಳಿ ಹಳ್ಳವಿದ್ದರೆ,ಪಶ್ಚಿಮಕ್ಕೆ ಕರ್ಲಹಳ್ಳಿ ಹಾಗೂ ಹಿರೇಹಳ್ಳ ಜೋಡಿಯಾಗಿ ಸೇರಿ ಮುಂದೆ ಹರಿಯುತ್ತವೆ.

ಶರಣ ಸಮ್ಮೇಳನ :
ಈ ಗ್ರಾಮದಲ್ಲಿ ಕಳೆದ ಏಳೆಂಟು ದಶಕಗಳಿಂದ ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಮೂರು ದಿನಗಳ ಕಾಲ ಶರಣ ಸಮ್ಮೇಳನ ನಡೆಯುತ್ತದೆ. ಇದಕ್ಕೆ ನಾಡಿನಾದ್ಯಂತ ಇರುವ ಸ್ವಾಮೀಜಿಗಳು, ಶಿವಭಕ್ತರು,ಶಿವಶರಣರು ಆಗಮಿಸುತ್ತಾರೆ.

ಕುನುಗಲಿ, ಹುಲೇಮಳಲಿ, ಮಲ್ಲಾಡಿಹಳ್ಳಿ …ಹತ್ತಿರದ ಗ್ರಾಮಗಳಾಗಿವೆ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯಸ್ವಾಮಿ ದೇವಾಲಯ:
ಗ್ರಾಮದ ದಕ್ಷಿಣಭಾಗದಲ್ಲಿ ಆಂಜನೇಯ ಸ್ವಾಮಿ ದೇವಾಲಯವಿದ್ದು, ದಕ್ಷಿಣಾಭಿಮುಖವಾಗಿದೆ. ದೇವಾಲಯವನ್ನು ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಗರ್ಭಗೃಹದಲ್ಲಿ ಆಂಜನೇಯ ಸ್ವಾಮಿಯ ಶಿಲ್ಪವಿದೆ.
ಪ್ರತಿ ವರ್ಷ ಶ್ರಾವಣಮಾಸದಲ್ಲಿ ವಿಶೇಷ ಪೂಜೆ ಹಾಗೂ ಪರೇವು ಆಚರಣೆ ನಡೆಯುತ್ತದೆ.

ಗ್ರಾಮದ ಉತ್ಸವ ಮೂರ್ತಿ ಆಂಜನೇಯ ಸ್ವಾಮಿ ದೇವಸ್ಥಾನ:
ಗ್ರಾಮದ ಮಧ್ಯಭಾಗದಲ್ಲಿರುವ ಉತ್ಸವಮೂರ್ತಿ ಆಂಜನೇಯಸ್ವಾಮಿ ಮಂದಿರವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಉತ್ಸವ ಹಾಗೂ ಆಚರಣೆಗಳಿಗೆ ಅನುಕೂಲವಾಗುವಂತೆ ಈ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ಪ್ರತಿವರ್ಷ ರಾಮನವಮಿ ದಿನದಂದು ವಿಜೃಂಭಣೆಯಿಂದ ಗ್ರಾಮದಲ್ಲಿ ರಥೋತ್ಸವ ನಡೆಸಲಾಗುತ್ತದೆ.

2.ಕೊಲ್ಲಾಪುರದಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಿ ದೇವಸ್ಥಾನವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

3.ಈಶ್ವರ ದೇವಸ್ಥಾನ:
ಗ್ರಾಮದ ದಕ್ಷಿಣ ಭಾಗದಲ್ಲಿರುವ ಈಶ್ವರ ದೇವಾಲಯವು ಸ್ಥಳೀಯ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.ಗರ್ಭಗೃಹ ಹಾಗೂ ಸಭಾಮಂಟಪಗಳಿರುವ ದೇವಸ್ಥಾನ ಇದಾಗಿದೆ.ಗರ್ಭಗೃಹದಲ್ಲಿ ವಿಜಯನಗರೋತ್ತರ ಕಾಲದ ಈಶ್ವರ ಲಿಂಗ ಪ್ರತಿಷ್ಠಾಪಿಸಲಾಗಿದ್ದು ಪೂಜಿಸಲಾಗುತ್ತದೆ.ಇದರ ಜೊತೆಗೆ ನಾಗಶಿಲ್ಪ, ಮಹಿಷಾಸುರಮರ್ದಿನಿ ಹಾಗೂ ಗಣಪತಿ ಶಿಲ್ಪವನ್ನು ಇಲ್ಲಿ ಪೂಜಿಸಲಾಗುತ್ತದೆ.

4.ಭೂತಪ್ಪ ಸ್ವಾಮಿ ದೇವಸ್ಥಾನ :
ಗ್ರಾಮದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಮಲ್ಲಾಡಿಹಳ್ಳಿ ರಸ್ತೆಯಲ್ಲಿ ಇರುವ ಭೂತಪ್ಪಸ್ವಾಮಿ ದೇವಸ್ಥಾನವನ್ನು ಸ್ಥಳೀಯ ಶೈಲಿಯಲ್ಲಿ ಪೂರ್ವಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹದಲ್ಲಿ ಭೂತಪ್ಪ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಇದರ ಜೊತೆಯಲ್ಲಿ ಗ್ರಾಮದಲ್ಲಿ ಬಯಲು ದುರ್ಗಾಂಬಿಕಾ ದೇವಸ್ಥಾನವಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...