ಮಂಡ್ಯ : ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಭೇಟಿ ನೀಡಲಿದ್ದಾರೆ. ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠ ದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಅವರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ.ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಏಪ್ರಿಲ್ 10ರಿಂದ 12ರವರೆಗೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಕುಂಭಾಭಿಷೇಕ ಮಹೋತ್ಸವ ನೆರವೇರಿದೆ. ಇದರ ಭಾಗವಾಗಿ ನಿರ್ಮಾಣಗೊಂಡಿರುವ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಸುಮಾರು ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮಂದಿರ ಕಳೆದ ಎಂಟು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದು, ಇದೀಗ ಸಾರ್ವಜನಿಕರಿಗೆ ಮುಕ್ತವಾಗುತ್ತಿದೆ. ಕಾರ್ಯಕ್ರಮದ ನಂತರ ಪ್ರಧಾನಿ ಅವರು ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಲಿದ್ದಾರೆ.ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಭದ್ರತಾ ಹಾಗೂ ಅಗತ್ಯ ವ್ಯವಸ್ಥೆಗಳ ಬಗ್ಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಜಿಲ್ಲಾಧಿಕಾರಿ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇದೇ ವೇಳೆ ಪ್ರಧಾನಿಗೆ ವಿಶೇಷ ಉಡುಗೊರೆಯಾಗಿ ಮೈಸೂರು ಶೈಲಿಯ ಪೇಟವನ್ನು ನೀಡಲು ಸಿದ್ಧತೆ ನಡೆದಿದೆ. 4 ನೇ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿಯಲ್ಲಿ ಈ ಪೇಟವನ್ನು ತಯಾರಿಸಲಾಗಿದ್ದು, ಕೆಂಪು ಮೈಸೂರು ರೇಷ್ಮೆ ಹಾಗೂ ಬನಾರಸ್ ಸಿಲ್ಕ್ ಬಳಸಿ ಸೊಗಸಾಗಿ ರೂಪಿಸಲಾಗಿದೆ. ಕಲಾವಿದ ನಂದನ್ ಸಿಂಗ್ ಐದು ದಿನಗಳ ಶ್ರಮದ ಫಲವಾಗಿ ಈ ವಿಶೇಷ ಪೇಟವನ್ನು ಸಿದ್ಧಪಡಿಸಿದ್ದಾರೆ. ಪ್ರಧಾನಿಯವರ ಭೇಟಿ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಕ್ಷೇತ್ರದಲ್ಲಿ ಭಾರೀ ಸಿದ್ಧತೆಗಳು ನಡೆಯುತ್ತಿದ್ದು, ಭಕ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











