ದಾವಣಗೆರೆ : ಕಾಂಗ್ರೆಸ್ ಒಳಗಿನ ಹೇಳಿಕೆಗಳ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಪಕ್ಷ ಮೂರು ಅವಧಿಗೆ ಪರಿಷತ್ ಸದಸ್ಯರನ್ನಾಗಿ ಮಾಡಿದ್ದರೆ, ಅದರ ಅನ್ನ ತಿಂದ ಮೇಲೆ ಪಕ್ಷದ ಕೆಲಸ ಮಾಡಬೇಕು. ಯಾರು ಕರೆಯಬೇಕು, ಯಾರು ಕರೆ ಮಾಡಬೇಕು ಎಂಬ ಪ್ರಶ್ನೆ ಏಳಬಾರದು” ಎಂದು ಕಟುವಾಗಿ ಹೇಳಿದರು.

ಪಕ್ಷದ ಶಿಸ್ತು ಕುರಿತು ಮಾತಾಡಿದ ಅವರು, “ಹೈಕಮಾಂಡ್ ಸೂಚನೆಗಳನ್ನು ತಪ್ಪದೇ ಪಾಲಿಸುವುದು ಪ್ರತಿಯೊಬ್ಬ ಕಾರ್ಯಕರ್ತರ ಕರ್ತವ್ಯ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಗೆಲುವು ಸಿಗಲಿದೆ. ಕ್ಷೇತ್ರದ ಜನತೆ ನಮ್ಮ ಪರವಾಗಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಬ್ದುಲ್ ಜಬ್ಬಾರ್ ನೀಡಿದ “ಶಾಮನೂರು ಕುಟುಂಬ ಬುದ್ಧಿವಂತರನ್ನು ಹತ್ತಿರ ಸೇರಿಸಲ್ಲ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ಹೀಗೆ ಹೇಳುವವರು ತಾವೇ ಬುದ್ಧಿವಂತರಾ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೂ ಈ ಕುರಿತು ನನ್ನನ್ನು ಸಂಪರ್ಕಿಸಿಲ್ಲ” ಎಂದು ಸ್ಪಷ್ಟಪಡಿಸಿದರು.ಇದೇ ವೇಳೆ, 2013ರ ಚುನಾವಣಾ ಫಲಿತಾಂಶ ಮರುಕಳಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, “ಕಾಂಗ್ರೆಸ್ಗೆ ತನ್ನದೇ ಆದ ಸಾಂಪ್ರದಾಯಿಕ ಮತದಾರರ ಬಲವಿದೆ. ಈ ಬಾರಿ ಕೂಡ ಕಾಂಗ್ರೆಸ್ ಜಯ ಸಾಧಿಸಲಿದೆ” ಎಂದು ಹೇಳಿದರು.












